ADVERTISEMENT

ಕೆಎಸ್‌ಆರ್‌ಟಿಸಿ ಸಿಟಿ ಬಸ್ ಸೇವೆ ಸ್ಥಗಿತಕ್ಕೆ ಹುನ್ನಾರ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 3:30 IST
Last Updated 20 ಅಕ್ಟೋಬರ್ 2012, 3:30 IST

ಮಂಗಳೂರು: ಪ್ರಯಾಣಿಕರ ಒತ್ತಾಯದ ಮೇರೆಗೆ ತಾತ್ಕಾಲಿಕ ಪರವಾನಗಿ ಪಡೆದುಕೊಂಡು ಇದೀಗ ಏಳು ಹಾದಿಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿದ್ದು, ಮುಡಿಪು-ಮಂಗಳೂರು ಬಸ್ ಸೇವೆ ಸ್ಥಗಿತಕ್ಕೆ ತೀವ್ರ ಒತ್ತಡ ಆರಂಭವಾಗಿದೆ. ಇದಕ್ಕೆ ಪ್ರತಿಯಾಗಿ ಸಾರ್ವಜನಿಕರೂ ಸರ್ಕಾರಿ ಬಸ್ ಸೇವೆ ಸ್ಥಗಿತ ಮಾಡದಂತೆ ಪ್ರತಿಭಟನೆ ನಡೆಸುವ ಸಿದ್ಧತೆಯಲ್ಲಿದ್ದಾರೆ.

ಮಂಗಳೂರಿನಿಂದ ಮುಡಿಪುವಿಗೆ ನಿಮಿಷಕ್ಕೆ ಒಂದರಂತೆ ಬಸ್ ಸಂಚರಿಸುತ್ತಿದ್ದರೂ ಸರ್ಕಾರಿ ಸಿಟಿ ಬಸ್ ಹಾಕಿರುವುದು ರಾಜಕೀಯ ಉದ್ದೇಶದಿಂದಲೇ. ಖಾಸಗಿ ಬಸ್‌ಗಳೇ ಖಾಲಿ ಓಡುತ್ತಿರುವಾಗ ಕೆಎಸ್‌ಆರ್‌ಟಿಸಿ ಬಸ್ ಓಡಿಸುವ ಅಗತ್ಯ ಏನಿದೆ. ಬದಲಿಗೆ ಸೋಮೇಶ್ವರ, ಅಂಬ್ಲಮೊಗರು, ತಲಪಾಡಿ, ಉಳಾಯಿಬೆಟ್ಟು, ಮಾಲೆಮಾರ್‌ನಂತಹ ಪ್ರದೇಶಕ್ಕೆ ಬಸ್ ಓಡಿಸಬಹುದಲ್ಲ ಎಂಬುದು ಖಾಸಗಿ ಬಸ್ ಮಾಲೀಕರ ಪ್ರಶ್ನೆಯಾಗಿದೆ.

`ಕೆಎಸ್‌ಆರ್‌ಟಿಸಿ ಬಸ್ ಓಡಿಸುವುದಕ್ಕೆ ನಮ್ಮ ಅಭ್ಯಂತರ ಏನೂ ಇಲ್ಲ. ಖಾಸಗಿ ಬಸ್‌ನವರು ಕೆಎಸ್‌ಆರ್‌ಟಿಸಿ ಬಸ್‌ಗೆ ವಿರೋಧ ಸೂಚಿಸುತ್ತಿದ್ದಾರೆ ಎಂಬ ತಪ್ಪು ಕಲ್ಪನೆ ಮೂಡಿಸುವ ಯತ್ನ ನಡೆಯುತ್ತಿದೆ. ಖಾಸಗಿ ಬಸ್‌ಗಳು ಕಡಿಮೆ ಇರುವ ಕಡೆ ಹಾಗೂ ಜನರಿಗೆ ತುಂಬಾ ಅಗತ್ಯ ಇರುವ ಕಡೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಓಡಿಸುವುದಿಲ್ಲ ಏಕೆ ಎಂದು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲು ಏರಲಾಗಿತ್ತು.

ಹೈಕೋರ್ಟ್ ಸೂಚನೆಯಂತೆ ಮುಡಿಪುವಿಗೆ ನೀಡಿರುವ ಪರವಾನಗಿಯ ಬಗ್ಗೆ ಪುನರ್‌ವಿಮರ್ಶೆ ಮಾಡುವಂತೆ ಸಾರಿಗೆ ಪ್ರಾಧಿಕಾರ ಜಿಲ್ಲಾಧಿಕಾರಿಯವರನ್ನು ಕೋರಿದೆ. ಅವರು ಸೂಕ್ತ ನಿರ್ಧಾರ ಕೈಗೊಳ್ಳುವ ವಿಶ್ವಾಸ ಇದೆ~ ಎಂದು ಖಾಸಗಿ ಬಸ್ ಮಾಲೀಕರ ಸಂಘದ ನಾಯಕ ಅಜೀಜ್ ಪರ್ತಿಪಾಡಿ ಶುಕ್ರವಾರ `ಪ್ರಜಾವಾಣಿ~ಗೆ ತಿಳಿಸಿದರು.

ಬದಲಿ ರೂಟ್-ಚಿಂತನೆ: ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕ ಮಹೇಶ್ ಅವರು ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಿ, ಮುಡಿಪುವಿಗೆ ನೀಡಿರುವ ಮೂರು ಬಸ್‌ಗಳ ಪರವಾನಗಿಯಲ್ಲಿ ಒಂದನ್ನು ಬದಲಿ ರೂಟ್‌ಗೆ ಒದಗಿಸುವ ಚಿಂತನೆ ಇದೆ, ಬಹುತೇಕ ಈ ಬಸ್ಸನ್ನು ಉಳ್ಳಾಲ-ಸೋಮೇಶ್ವರಕ್ಕೆ ನೀಡಬಹುದು. ಎರಡು ಬಸ್‌ಗಳು ಮುಡಿಪು ಸಂಚಾರ ಮುಂದುವರಿಸಲಿವೆ. ಕಲೆಕ್ಷನ್ ನೆಪವೊಡ್ಡಿ ಬಸ್ ಸಂಚಾರ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಏನಿದ್ದರೂ ಜಿಲ್ಲಾಧಿಕಾರಿ ಅವರ ನಿರ್ಧಾರವೇ ಅಂತಿಮ ಎಂದರು.

`ಇದೊಂದು ಸೂಕ್ಷ್ಮ ವಿಚಾರ. ಈಗಾಗಲೇ ಅಧಿಕ ಬಸ್‌ಗಳು, ಇತರ ವಾಹನಗಳ ಓಡಾಟದಿಂದ ನಗರದ ರಸ್ತೆಗಳಲ್ಲಿ ತೀವ್ರ ಸ್ವರೂಪದ ಒತ್ತಡ ನಿರ್ಮಾಣವಾಗಿದೆ. ಇನ್ನಷ್ಟು ಬಸ್‌ಗಳಿಗೆ ಪರವಾನಗಿ ನೀಡುವಾಗ ಅತ್ಯಂತ ಎಚ್ಚರಿಕೆ ವಹಿಸಬೇಕಾಗಿದೆ.
 
ಸುಮಾರು 70ರಷ್ಟು ಸರ್ಕಾರಿ ಬಸ್‌ಗಳು ಮತ್ತು 630ರಷ್ಟು ಖಾಸಗಿ ಬಸ್‌ಗಳ ಸೇವೆಗೆ ಅನುಮತಿ ಕೋರಿ ಸಲ್ಲಿಸಿದ ಅರ್ಜಿಗಳನ್ನು ಇದೇ ಕಾರಣಕ್ಕೆ ನಿರ್ಧಾರ ಕೈಗೊಳ್ಳದೆ ಬಾಕಿ ಉಳಿಸಿಕೊಳ್ಳಲಾಗಿದೆ. ಆದರೂ ಸಾರ್ವಜನಿಕರಿಗೆ ತೊಂದರೆ ಆಗದ ರೀತಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಶನಿವಾರದ ಆರ್‌ಟಿಎ ಸಭೆಯಲ್ಲಿ ಪರವಾನಗಿ, ಬಸ್ ರೂಟ್ ವಿಚಾರ ಬರುವುದಿಲ್ಲ, ಏನಿದ್ದರೂ ನ್ಯಾಯಾಲಯ ವಿಚಾರಗಳು ಮಾತ್ರ~ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಮಲ್ಲಿಕಾರ್ಜುನ್ ತಿಳಿಸಿದರು.

ಪ್ರತಿಭಟನೆ ಎಚ್ಚರಿಕೆ: ಮುಡಿಪುವಿಗೆ ಹಾಕಿರುವ ಕೆಎಸ್‌ಆರ್‌ಟಿಸಿ ಬಸ್‌ಗಳ ಪೈಕಿ ಒಂದು ಬಸ್ ಸ್ಥಗಿತಗೊಳಿಸಿದರೂ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು. ಈ ಬಸ್‌ಗಳಿಂದ ಮುಖ್ಯವಾಗಿ ಬೆಳಿಗ್ಗೆ ಮತ್ತು ಸಂಜೆ ಹೊತ್ತಿನ ಒತ್ತಡದ ಅವಧಿಯಲ್ಲಿ ಬಹಳ ಅನುಕೂಲವಾಗುತ್ತಿತ್ತು. ಖಾಸಗಿ ಬಸ್‌ಗಳ ಮಾಲೀಕರ ಒತ್ತಡಕ್ಕೆ ಜಿಲ್ಲಾಡಳಿತ ಮಣಿಯಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಇಸ್ಮಾಯಿಲ್ ಒತ್ತಾಯಿಸಿದ್ದಾರೆ.

ನಾಗರಿಕ ಹಿತರಿಕ್ಷಣಾ ಸಮಿತಿಯ ಸಂಚಾಲಕ ಹನುಮಂತ ಕಾಮತ್ ಅವರು ಸಹ ಖಾಸಗಿ ಲಾಬಿಗೆ ಮಣಿಯುವ ಜಿಲ್ಲಾಡಳಿತವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, 1997ರ ಹೈಕೋರ್ಟ್ ಆದೇಶದ ಪ್ರಕಾರ ಡಿಎಂ ನೋಟಿಫಿಕೇಶನ್ ಅನ್ನು ಸೂಕ್ತವಾಗಿ ಬದಲಿಸಿಕೊಳ್ಳುವ ಅಧಿಕಾರ ಜಿಲ್ಲಾಧಿಕಾರಿ ಅವರಿಗೆ ಇದೆ ಎಂದು ತಿಳಿಸಲಾಗಿದೆ. ಜನರಿಗೆ ಅನುಕೂಲ ಆಗುವ ಸೇವೆಯನ್ನು ಕೆಎಸ್‌ಆರ್‌ಟಿಸಿ ಒದಗಿಸುವುದನ್ನು ಹೇಗಾದರೂ ಮಾಡಿ ತಪ್ಪಿಸಲೇಬೇಕು, ಕಲೆಕ್ಷನ್ ಇಲ್ಲ ಎಂಬ ಕಾರಣಕ್ಕೆ ಸರ್ಕಾರಿ ಬಸ್ ಸೇವೆ ನಿಲ್ಲಿಸುವಂತಹ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಜಿಲ್ಲಾಧಿಕಾರಿ ಅವರು ಒಂದೆರಡು ದಿನಗಳಲ್ಲಿ ಬಸ್ ಕಡಿತ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದ್ದು, ಸಾರ್ವಜನಿಕರೂ ಕುತೂಹಲದಿಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.