ADVERTISEMENT

ಕೊನೆಗೂ ಹೆದ್ದಾರಿ ದಾಟಿತು ಒಂಟಿ ಸಲಗ!

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 6:53 IST
Last Updated 24 ಡಿಸೆಂಬರ್ 2013, 6:53 IST

ಶಿರಾಡಿ (ಉಪ್ಪಿನಂಗಡಿ): ಆನೆ ನಡೆದದ್ದೇ ದಾರಿ ಎಂಬ ಮಾತಿಗೆ ‘ಚ್ಯುತಿ’ ಬರುವಂತಹ ವಿದ್ಯಮಾನ­ವೊಂದು ಶಿರಾಡಿ ರಕ್ಷಿತಾರಣ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಕಂಡುಬಂತು. ಇದು ಆನೆಯ ಮಾಡಿದಂತಹ ಅವಮಾನದ ಮಾತಲ್ಲ, ಬದಲಿಗೆ ನಾಡಿನ, ಆಧುನಿಕತೆಯ ಪ್ರಭಾವದಿಂದಾಗಿ ವನ್ಯಜೀವಿಗಳಿಗೆ ಎದುರಾಗಿರುವ ಸವಾಲಿನ ಜೀವನದ ಪ್ರಸಂಗ.

ಈ ಒಂಟಿ ಸಲಗಕ್ಕೆ ಹೆದ್ದಾರಿ ದಾಟಿ ಇನ್ನೊಂದು ಬದಿಯಲ್ಲಿದ್ದ ಕೆಂಪು ಹೊಳೆ ನದಿಗೆ ಇಳಿಯಬೇಕಿತ್ತು. ಅದಕ್ಕೆ ಬಾಯಾರಿಕೆಯೂ ಆಗಿತ್ತು. ಆದರೆ ನಡುವೆ ಇರುವುದು ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ. ತನ್ನ ಶಕ್ತಿಯನ್ನು ಬಳಸಿಕೊಂಡು ಹೆದ್ದಾರಿ ದಾಟುವುದು ಅದಕ್ಕೆ ಕಷ್ಟಕರ ಸಂಗತಿಯೇನೂ ಆಗಿರಲಿಲ್ಲ. ಆದರೆ ಭಾರಿ ವಾಹನಗಳ ಸಂಚಾರ, ಜನರ ಕಣ್ಣೋಟಗಳನ್ನು ಎದುರಿಸಿ ರಸ್ತೆ ದಾಟು­ವುದು ಅದಕ್ಕೆ ಸಾಧ್ಯವಾಗಲೇ ಇಲ್ಲ. ಬರೋಬ್ಬರಿ ಒಂದು ಗಂಟೆ ಅದು ರಸ್ತೆ ದಾಟಲು ಕಾಯ­ಬೇಕಾಯಿತು. ಕೊನೆಗೂ ಅದಕ್ಕೆ ರಸ್ತೆ ದಾಟುವುದು ಸಾಧ್ಯವಾದುದು ಅರಣ್ಯ ಇಲಾಖೆಯ ಸಿಬ್ಬಂದಿಯ ಮೂಲಕವೇ ಎಂಬುದು ಮತ್ತೊಂದು ವಿಶೇಷ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಯಾತ್ರಿಕರ ತಂಡವೊಂದು ರಸ್ತೆ ಬದಿ ವಾಹನ ನಿಲ್ಲಿಸಿದ್ದಾಗ ಕಾಡಿನೊಳಗೆ ಮರಗಳ ಮರೆಯಲ್ಲಿ ಆನೆಯೊಂದು ಇರುವುದು ಕಾಣಿಸಿತು. ಆನೆ ನಿಂತಿದ್ದ ಜಾಗ ಎತ್ತರದಲ್ಲಿದ್ದು, ಆನೆಗೆ ನೇರವಾಗಿ ರಸ್ತೆಗೆ ಇಳಿಯುವುದಕ್ಕೆ ಕಷ್ಟವಾಗಿತ್ತು. ಹಾಗಾಗಿ ಕುತೂಹಲ ತುಂಬಿದ್ದ ಪ್ರಯಾಣಿಕರು ಆನೆ ನೋಡುವುದಲ್ಲೇ ತಲ್ಲೀನರಾದರು. ಜತೆಗೆ ಕೇಕೆ ಹಾಕುತ್ತಾ, ಶಿಳ್ಳೆ ಹೊಡೆಯುತ್ತಾ ಅದನ್ನು ರೇಗಿಸುವ ರೀತಿಯಲ್ಲಿ ಜನರು ತಮ್ಮ ಚೇಷ್ಟೆಗಳನ್ನು ತೋರಿಸಿದರು. ಆನೆಗೆ ನೇರವಾಗಿ ಹೆದ್ದಾರಿಗೆ ಇಳಿಯುವುದು ಸಾಧ್ಯವಿಲ್ಲ ಎಂಬ ಭಂಡ ಧೈರ್ಯ­ದಲ್ಲಿ ಅವರು ಈ ರೀತಿ ವರ್ತಿಸುತ್ತಿದ್ದರು.

ಆನೆ ರಸ್ತೆಯ ಬದಿಯ ಕಾಡಿನ ಅಂಚಿನಲ್ಲಿ ರಸ್ತೆಗೆ ಕೇವಲ 10ರಿಂದ 15 ಅಡಿ ದೂರದಲ್ಲಿ ಇತ್ತು. ಕೆಳಗೆ ರಸ್ತೆಯ ಚರಂಡಿ ಇತ್ತು. ಜನರ ವರ್ತನೆಯಿಂದ ಅದು ಕೆರಳಲಾರಂಭಿಸಿತ್ತು. ಆದರೆ ಜನರ ಅದೃಷ್ಟ ಚೆನ್ನಾಗಿತ್ತು. ಒಂಟಿಸಲಗ ರೋಶಾವೇಶ ತೋರಿಸಲಿಲ್ಲ, ಬದಲಿಗೆ ತಾನು ರಸ್ತೆ ದಾಟುವುದು ಹೇಗೆ ಎಂದೇ ಚಿಂತಿಸುತ್ತಿತ್ತು.

ಅರಣ್ಯಾಧಿಕಾರಿಗಳ ದಿಟ್ಟ ಹೆಜ್ಜೆ: ಆನೆ ಹೆದ್ದಾರಿ ರಸ್ತೆಗೆ ಇಳಿಯುತ್ತಿರುವ ಬಗ್ಗೆ ಅರಣ್ಯಾಧಿಕಾರಿಯವರಿಗೆ ಮಾಹಿತಿ ರವಾನೆಯಾಯಿತು. ಕೇವಲ 25 ನಿಮಿಷದಲ್ಲೇ ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್ ಗೌಡ, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಶ್ರೀಹರ್ಷ, ಸಿಬ್ಬಂದಿಗಳಾದ ರವೀಂದ್ರ, ಜಯಕುಮಾರ್, ಸುರೇಶ್, ವಾಹನ ಚಾಲಕರಾದ ತೇಜ, ರವಿಯವರನ್ನು ಒಳಗೊಂಡ ತಂಡ ಸ್ಥಳಕ್ಕೆ ಧಾವಿಸಿ ಬಂತು. ಅವರು ರಸ್ತೆ ಬದಿಯಲ್ಲಿ ನಿಂತಿದ್ದ ವಾಹನ, ಜನರನ್ನು ದೂರ ಚದುರಿಸಿದರು. ಸುಮಾರು 15 ನಿಮಿಷಗಳ ಕಾಲ ರಸ್ತೆಯಲ್ಲಿ ವಾಹನ ಓಡಾಟವನ್ನು ತಡೆ ಹಿಡಿಯಲಾಯಿತು. ಅರಣ್ಯದ ಅಂಚಿಗೆ ಬಂದು ನಿಂತಿದ್ದ ಆನೆ ರಸ್ತೆಗೆ ಇಳಿಯುವ ರೀತಿಯಲ್ಲಿ ಅದಕ್ಕೆ ಪೂರಕಾದ ವಾತಾವರಣ ನಿರ್ಮಿಸಲಾಯಿತು. ಧೃತಿಗೆಡದ ವಲಯ ಅರಣ್ಯಾಧಿಕಾರಿ ರಸ್ತೆಯ ಇನ್ನೊಂದು ಬದಿಯಲ್ಲೇ ಅದು ಸಾಗುವಂತೆ ನೋಡಿಕೊಂಡು, ಅದು ನೇರವಾಗಿ ನದಿಗೆ ಇಳಿಯುವ ರೀತಿಯ ದಾರಿಯ ತನಕ ಎಚ್ಚರಿಕೆಯಿಂದಲೇ ಅದನ್ನು ನದಿಗೆ ಇಳಿಸುವಲ್ಲಿ ಯಶಸ್ವಿಯಾದರು.

ನದಿಯಲ್ಲಿ ನೀರು ಕುಡಿದು, ನೀರಾಟ: ರಸ್ತೆಯಿಂದ ತೆರಳಿದ ಆನೆ ಬಿದಿರು, ಮರಗಳ ಮಧ್ಯೆ ದಾರಿ ಮಾಡಿಕೊಂಡು ನದಿಗೆ ಇಳಿದು ನದಿಯಲ್ಲಿ ನೀರು ಕುಡಿದು, ನೀರಿನಲ್ಲಿ ಆಟ ಆಡುತ್ತಾ, ಬಿದ್ದುಕೊಂಡಿತ್ತು. ಸಂಪೂರ್ಣ ನೀರಿನಲ್ಲಿ ಮುಳುಗಿದ ಆನೆ ಕ್ಷಣ ಮಾತ್ರದಲ್ಲಿ ನೀರಿನಲ್ಲಿ ಕಲ್ಲುಬಂಡೆಯ ರೀತಿಯಲ್ಲಿ ಗೋಚರಿಸುತ್ತಿತ್ತು.  ಆನೆಯನ್ನು ಬಹಳ ಲೀಲಾಜಾಲವಾಗಿ ರಸ್ತೆಗೆ ಇಳುವಲ್ಲಿ ಮತ್ತು ಅದು ಯಾರಿಗೂ ಯಾವುದೇ ರೀತಿಯಲ್ಲಿ ತೊಂದರೆ ಕೊಡದ ರೀತಿಯಲ್ಲಿ ಮತ್ತೆ ನದಿಗೆ ಇಳಿಸಿ,  ನದಿಯ ಮೂಲಕ ಮತ್ತೆ ಕಾಡಿನೊಳಗೆ ಸೇರುವಂತೆ ಮಾಡಿದ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸ್ಥಳದಲ್ಲಿ ಜಮಾಯಿಸಿದ್ದ ಮಂದಿ ಅಭಿನಂದಿಸಿ ಶಹಬ್ಬಾಸ್ ಎಂದರು.

ಶಿಶಿಲದಲ್ಲಿ ಪೇಟೆಗೆ ಬಂದಿದ್ದ ಆನೆ: ಶುಕ್ರವಾರ ಸಂಜೆ ಶಿಶಿಲ ಪೇಟೆಯಲ್ಲಿ ಒಂಟಿ ಸಲಗವೊಂದು ಓಡಾಟ ನಡೆಸಿ, ಬೈಕನ್ನು ಕೆಡವಿ ಹಾಕಿ ಜನರಲ್ಲಿ ಭೀತಿ ಉಂಟು ಮಾಡಿತ್ತು. ಸುಮಾರು ಅರ್ಧ ತಾಸು ಪೇಟೆಯಲ್ಲಿ ಇದ್ದ ಆನೆ ಬಳಿಕ ಕಪಿಲಾ ನದಿ ಮೂಲಕ ಕಾಡು ಸೇರಿತ್ತು. ಆ ಆನೆ ಇದೇ ಆಗಿರಬಹುದು ಎಂದು ಹೇಳಲಾಗುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.