ADVERTISEMENT

ಕೊಳ್ನಾಡು: ಕಳಪೆ ಕಾಮಗಾರಿ-ರೈತರಿಗೆ ಬಿಕ್ಕಟ್ಟು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 10:50 IST
Last Updated 15 ಅಕ್ಟೋಬರ್ 2011, 10:50 IST

ವಿಟ್ಲ: ಕೊಳ್ನಾಡು ಗ್ರಾಮದ ಬಸ್ತಿಗುಂಡಿ ಎಂಬಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ನಿರ್ಮಾಣಗೊಂಡ ಅಣೆಕಟ್ಟು ಕಳಪೆ ಕಾಮಗಾರಿಯಿಂದ ನೀರುಪಾಲಾಗಿದ್ದು, ಕಳೆದ ಮೂರು ವರ್ಷಗಳಿಂದ ದುರಸ್ತಿಯಾಗದೇ ಮಣ್ಣುಸೇರಿದೆ.

ಕೊಳ್ನಾಡು ಗ್ರಾಮ ವ್ಯಾಪ್ತಿಗೆ ಬರುವ ಬಸ್ತಿಗುಂಡಿ ಎಂಬಲ್ಲಿ ಈ ಅಣೆಕಟ್ಟು 2007ರಲ್ಲಿ 34 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿತ್ತು. ಕಾಮಗಾರಿ ಕಳಪೆಯಾಗಿದೆ ಎಂಬ ದೂರಿನ ಮಧ್ಯೆಯೇ ಮಳೆಗಾಲದಲ್ಲಿ  ಪ್ರವಾಹದ ರಭಸ ತಾಳಲಾರದೇ ನೀರಿನ ಸೆಳೆತದೊಂದಿಗೆ ಕೊಚ್ಚಿಹೋಗಿ ಲಕ್ಷಾಂತರ ರೂಪಾಯಿ ವ್ಯಯಿಸಿದ ಸಾರ್ವಜನಿಕ ಕಾಮಗಾರಿ ನೀರ ಮೇಲೆ ಹೋಮವಿಟ್ಟತಾಂಗಿತ್ತು.
 
ಮರುವರ್ಷ ಅಧಿಕಾರಿಗಳ ಒತ್ತಡಕ್ಕೆ ಕಟ್ಟುಬಿದ್ದು, ಹೆಸರಿಗಷ್ಟೇ ದುರಸ್ತಿ ಮಾಡಲಾಗಿತ್ತು. ಆದರೆ ಹರಿದು ಹೋಗುವ ನೀರಿನ ಭಾರ  ಹಿಡಿದಿಟ್ಟುಕೊಳ್ಳಲಾಗದೇ ಅದೂ ಒಡೆದು ಹೋಯಿತು. ಅದೂ ಸಾಲದೆಂಬಂತೆ ಪಕ್ಕದಲ್ಲಿದ್ದ ಕಿರು ಸೇತುವೇಯ ಒಂದು ಪಾರ್ಶ್ವ ನೀರಿನ ಹೊಡೆತಕ್ಕೆ ಸಿಕ್ಕಿ ಧ್ವಂಸವಾಗಿದೆ. ಅಣೆಕಟ್ಟಿನ ಒಂದು ಮಗ್ಗುಲದಲ್ಲಿ ಹಾಕಲಾಗಿದ್ದ ತಡೆಗೋಡೆ ಆರಂಭದ ಹಂತದಲ್ಲಿ ಬಿರುಕು ಬಿಟ್ಟಿತ್ತು. ಆದರೂ ಸಣ್ಣ ನೀರಾವರಿ ಇಲಾಖೆ ತಾಂತ್ರಿಕ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಲಿಲ್ಲ ಎನ್ನುವುದು ಸ್ಥಳೀಯರ ಅಸಮಾಧಾನವಾಗಿದೆ.

ಬಸ್ತಿಗುಂಡಿ ಅಣೆಕಟ್ಟು ರಾಜ್ಯದ ಈಗಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಮಂಗಳೂರು ಲೋಕಸಭಾ ಸದಸ್ಯರಾಗಿದ್ದ ವೇಳೆ 2007ರ ಜೂನ್ 27ರಂದು ಉದ್ಘಾಟನೆಗೊಂಡಿತ್ತು. ನೂರಾರು ಕೃಷಿಕರಿಗೆ ನೀರಾವರಿಗೆ ಪ್ರಯೋಜನವಾಗಬೇಕಾಗಿದ್ದ ಅಣೆಕಟ್ಟು, ಅಧಿಕಾರಿಗಳ ಮತ್ತು ಗುತ್ತಿಗೆದಾರ ನಿರಾಸಕ್ತಿಯಿಂದ  ಮಣ್ಣುಪಾಲಾಗಿದೆ ಎಂದು ರೈತಾಪಿ ಜನ ನೋವು ತೋಡಿಕೊಂಡಿದ್ದಾರೆ. ಸರ್ಕಾರಿ ಇಲಾಖೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಅಣೆಕಟ್ಟಿನ ಎರಡೂ ಬದಿಗಳಲ್ಲಿರುವ ಬಡ ರೈತರ ಗದ್ದೆಗಳು ಒಡೆದ ಅಣೆಕಟ್ಟಿನಲ್ಲಿ ಸರಾಗವಾಗಿ ಹರಿಯುವ ನೀರಿಗೆ ತಡೆಯೊಡ್ಡುತ್ತಿರುವುದರಿಂದ ಮಳೆ ನೀರಿನ ಪ್ರವಾಹ ಏರ್ಪಟ್ಟು ಅವರ ಕೃಷಿ ನಾಶಕ್ಕೂ ಕಾರಣವಾಗುತ್ತಿದೆ.

ಅಧಿಕಾರಿಗಳಲ್ಲಿ ಈ ಬಗ್ಗೆ ಹಲವು ಬಾರಿ ಹೇಳಿಕೊಂಡರೂ ಕಿಂಚಿತ್ತೂ ಪ್ರಯೋಜನವಾಗಿಲ್ಲ. ಈ ಅಣೆಕಟ್ಟು ಕಾಮಗಾರಿ ದುರಸ್ತಿ ಬಗ್ಗೆ  ಸಂಬಂಧಪಟ್ಟ ಜನಪ್ರತಿನಿಧಿಗಳು ಸಣ್ಣ ನೀರಾವರಿ ಇಲಾಖೆಗೆ ಪ್ರಸ್ತಾಪ ಸಲ್ಲಿಸಿ, ಮುಂದಿನ ಬೇಸಿಗೆಯೊಳಗೆ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.