ADVERTISEMENT

ಗೃಹ ಸಚಿವ ರಾಜೀನಾಮೆಗೆ ತಿಮರೋಡಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 9:10 IST
Last Updated 10 ಡಿಸೆಂಬರ್ 2013, 9:10 IST

ಬಂಟ್ವಾಳ :  ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾ­ರ್ಥಿನಿ ಸೌಜನ್ಯಾ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟದಲ್ಲಿ ವಿದ್ಯಾರ್ಥಿ ಸಮೂಹ ಭಾಗವಹಿಸದಂತೆ ಮಾಡುವಲ್ಲಿ ಧರ್ಮಸ್ಥಳ ಪಾಳೇಗಾರಿಕೆ ತಂಡವೊಂದು ಹರಸಾಹಸ ಪಡುತ್ತಿದೆ.

ಈ ಪ್ರಕರಣವನ್ನು ಕೇವಲ ಸಿಬಿಐಗೆ ಒಪ್ಪಿಸುವ ಹೇಳಿಕೆಯಲ್ಲೇ ಕಾಲಹರಣ ಮಾಡುತ್ತಿ­ರುವ ರಾಜ್ಯ ಸರ್ಕಾರದ ನಿಷ್ಕ್ರಿಯ ಗೃಹಸಚಿವ ಕೆ.ಜೆ.ಜಾರ್ಜ್ ಕೂಡಲೇ ರಾಜೀನಾಮೆ ಸಲ್ಲಿಸಬೇಕು ಎಂದು ಸೌಜನ್ಯಾಪರ ಹೋರಾಟ ಸಮಿತಿ ಅಧ್ಯಕ್ಷ ಮಹೇಶ ಶೆಟ್ಟಿ ತಿಮರೋಡಿ ಆಗ್ರಹಿಸಿದ್ದಾರೆ.

ತಾಲ್ಲೂಕಿನ ಬಿ.ಸಿ.ರೋಡ್‌ನಲ್ಲಿ ಸೌಜನ್ಯಾ ಪರ ಹೋರಾಟ ಸಮಿತಿ ವತಿಯಿಂದ ಸೋಮವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತ­ನಾಡಿದರು. ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಪರಿಸರದಲ್ಲಿ ಈ ಹಿಂದೆ ನಡೆದ ವೇದವಲ್ಲಿ, ಪದ್ಮಲತಾ ಮತ್ತಿತರ ನೂರಾರು ಅಸಹಜ ಸಾವಿನ ಪ್ರಕರಣಗಳ ಬಗ್ಗೆ ಯೂ ಸಿಬಿಐ ತನಿಖೆಗೆ ಒಪ್ಪಿಕೊಳ್ಳುವ ತನಕ ಹೋರಾಟ ಮುಂದುವರಿಯಲಿದೆ. ಮುಂಬರುವ ಜನವರಿ ತಿಂಗಳ ಅಂತ್ಯದೊಳಗೆ ಸಿಬಿಐ ತನಿಖೆ ಪ್ರಕ್ರಿಯೆ ಆರಂಭಿಸದಿದ್ದಲ್ಲಿ ಒಟ್ಟು ಒಂದು ಲಕ್ಷಕ್ಕೂ ಮಿಕ್ಕಿ ಮಂದಿ ಸಹಿ ಸಂಗ್ರಹಿಸಿ ಸುಪ್ರಿಂ ಕೋರ್ಟಿನ ಮೆಟ್ಟಿಲು ಏರುವುದಾಗಿ ಅವರು ಎಚ್ಚರಿಸಿದರು.

ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಪಿಎಸ್‍ಐ ಯೋಗೀಶ್ ಕುಮಾರ್, ಜಿಲ್ಲಾ ಎಸ್ಪಿ ಅಭಿಷೇಕ್ ಗೋಯಲ್, ವೈದ್ಯಾಧಿಕಾರಿಗಳಾದ ಆದಂ ಹಾಗೂ ರಶ್ಮಿ ಅವರನ್ನು ಸೂಕ್ತ ತನಿಖೆಗೊಳಪಡಿಸಿದಲ್ಲಿ ಮಾತ್ರ ಇದರ ಹಿಂದಿರುವ ಪ್ರಭಾವಿಗಳ ಬಣ್ಣ ಬಯಲಾಗುವ ಮೂಲಕ ಸತ್ಯ ಸಂಗತಿ ಹೊರಬೀಳಲಿದೆ ಎಂದು ಅವರು ಆಶಾ ಭಾವನೆ ವ್ಯಕ್ತಪಡಿಸಿದರು. 

ಕೇಮಾರು ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ಇಂತಹ ಸಮಾಜ ಘಾತುಕ ಶಕ್ತಿಗಳ ವಿರುದ್ಧ ವಿದ್ಯಾರ್ಥಿ ಸಮೂಹ ಸೆಟೆದು ನಿಂತು ಸಂವಿಧಾನಬದ್ಧವಾಗಿ ಪ್ರತಿಭಟನೆ ಮತ್ತು ಹೋರಾಟ ನಡೆಸಬೇಕು. ಇಂತಹ ಹೋರಾಟಗಳಿಗೆ ನಾನು ನಿರಂತರವಾಗಿ ನ್ಯಾಯವಂಚಿತ ಜನತೆಯೊಂದಿಗೆ ಇರುವುದಾಗಿ ಅವರು ತಿಳಿಸಿದರು. 

‘ನನ್ನ ಪತ್ನಿ ಶಿಕ್ಷಕಿ ವೇದವಲ್ಲಿ ಕೊಲೆ ನಡೆದಾಗ ನಾನು ಸುಮ್ಮನಿದ್ದ ಪರಿಣಾಮ ದುಷ್ಟಕೂಟಕ್ಕೆ ಸೌಜನ್ಯಾನಂತಹ ಅಮಾಯಕ ಹೆಣ್ಮಕ್ಕಳನ್ನು ಹರಿದು ತಿನ್ನಲು ಸಾಧ್ಯವಾಗಿದೆ. ಇದರಿಂದಾಗಿ ಇಂತಹ ಪಾಪಕೃತ್ಯಗಳಿಂದ ದೇವರು ಕೂಡಾ ಮುನಿಸಿಕೊಂಡು ಜನರಿಗೆ ಹೋರಾಟ ನಡೆಸಲು ಧೈರ್ಯ ತುಂಬುತ್ತಿದ್ದಾನೆ‘ ಎಂದು ಡಾ.ಹರಳೆ ಹೇಳಿದರು.

‘ನನ್ನ ಮಗಳು ಇಂದು ಇರುತ್ತಿದ್ದರೆ ಸಮಾಜದಲ್ಲಿ ನಡೆಯುತ್ತಿರುವ ಇಂತಹ ಅನ್ಯಾಯ ಮತ್ತು ಅನಾಚಾರಗಳ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತಿದ್ದಳು ಎಂದು ಹೇಳಿದ ಸೌಜನ್ಯಾ ತಾಯಿ ಕುಸುಮಾವತಿ ವೇದಿಕೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತರು. ಪ್ರತಿಭಟನೆಯಲ್ಲಿ ಸೌಜನ್ಯಾ ತಂದೆ ಚಂದಪ್ಪ ಗೌಡ, ಸಂಬಂಧಿ ಅನಿಲ್ ಗೌಡ, ಪ್ರಮುಖರಾದ ಚರಣ್ ಜುಮಾದಿಗುಡ್ಡೆ, ಪ್ರಮೋದ್ ಕುಮಾರ್, ಸರಪಾಡಿ ಅಶೋಕ ಶೆಟ್ಟಿ, ಭುವಿತ್ ಶೆಟ್ಟಿ ಪಲ್ಲಮಜಲು, ಶೈಲೇಶ್ ಬಿ.ಸಿ.­ರೋಡ್, ಆನಂದ ಬೆಳ್ತಂಗಡಿ ಮತ್ತಿತರರು ಇದ್ದರು.

ಆರಂಭದಲ್ಲಿ ಬಿ.ಸಿ.ರೋಡ್‌ನ ಪೊಳಲಿ ಕೈಕಂಬ ದ್ವಾರ ಬಳಿಯಿಂದ ಹೊರಟ ಬೃಹತ್ ಮೆರ­ವಣಿಗೆಯಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿ­ಯರು ಉತ್ಸಾಹದಿಂದ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.