ADVERTISEMENT

ಗೊಂದಲ, ವಾಗ್ವಾದ- ಸಭೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 9:15 IST
Last Updated 20 ಸೆಪ್ಟೆಂಬರ್ 2011, 9:15 IST

ಪುತ್ತೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯನ್ನು ಒಳಗೊಂಡು ಕಾರ್ಯಾಚರಿಸುತ್ತಿದ್ದ ದ,ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಮಹಾಸಭೆ ಎರಡು ಬಣಗಳ ನಡುವಿನ ವಾದ ವಿವಾದದಿಂದ ಗೊಂದಲದ ಗೂಡಾಯಿತು. ಸೋಮವಾರದ ಈ ಸಭೆಯನ್ನು ಕೊನೆಗೂ ಮುಂದೂಡಲಾಯಿತು.

ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಮಹಾಸಭೆಯನ್ನು ಪುತ್ತೂರಿನ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆಸಲು ಈ ಹಿಂದಿನ ಆಡಳಿತ ಮಂಡಳಿ ನಿರ್ಧರಿಸಿತ್ತು. ಆದರೆ ಸರ್ಕಾರ ಶನಿವಾರ ಆಡಳಿತ ಮಂಡಳಿಯನ್ನು ಬರ್ಕಾಸ್ತುಗೊಳಿಸಿ ಆದೇಶ ಹೊರಡಿಸಿತ್ತು. ಅಲ್ಲದೆ ಆಡಳಿತಾಧಿಕಾರಿಯಾಗಿ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಎ.ಆರ್.ವಿಜಯ ಕುಮಾರ್ ಅವರನ್ನು ನೇಮಿಸಿತ್ತು.

ಆಡಳಿತ ಮಂಡಳಿ ಬರ್ಕಾಸ್ತುಗೊಂಡ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿ ವಿಜಯ ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಯಿತು. ಸಭೆ ಆರಂಭವಾಗುತ್ತಿದ್ದಂತೆ, ಸದಸ್ಯ ತಾಳ್ತಜೆ ಚಂದ್ರಶೇಖರ್ ಸಭೆಯ ಔಚಿತ್ಯ ಪ್ರಶ್ನಿಸಿದರು. ಈ ಹಿಂದೆ ಕೋರಂ ಇಲ್ಲದೆ ಬರ್ಕಾಸ್ತುಗೊಂಡ ಸಮಿತಿ ನಿಗದಿಪಡಿಸಿದ್ದ ಸಭೆಯನ್ನು ಈಗ ನಡೆಸುವುದು ಸರಿಯಲ್ಲ ಎಂದು ಅವರು ವಾದಿಸಿದರು.

ಸಂಘದ ಮಾಜಿ ಅಧ್ಯಕ್ಷ ಐ.ಸಿ.ಕೈಲಾಸ್ ಕೆದಂಬಾಡಿ ಮಾತನಾಡಿ, ತಮ್ಮ ಅಡಳಿತಾವಧಿಯಲ್ಲಿ ಪೂರ್ಣ ಬಹುಮತದೊಂದಿಗೆ ಕೋರಂ ಇದ್ದೇ ಈ ಸಭೆ ನಿಗದಿ ಮಾಡಲಾಗಿತ್ತು. ಆಡಳಿತ ಮಂಡಳಿಯನ್ನು ಬರ್ಕಾಸ್ತುಗೊಳಿಸಲಾಗಿದ್ದರೂ ಸಭೆ ಮುಂದೂಡುವಂತೆ ಯಾವುದೇ ಸೂಚನೆ ಬಂದಿಲ್ಲ. ಹೀಗಿರುವಾಗ ಸಭೆ ಮುಂದೂಡುವುದು ಸೂಕ್ತವಲ್ಲ ಎಂದು ವಾದಿಸಿದರು.
 
ಇದಕ್ಕೆ ಸಭೆಯಲ್ಲಿ ಹಾಜರಿದ್ದ ಕೆಲ ಮಂದಿಯಿಂದ ವಿರೋಧ ವ್ಯಕ್ತವಾಯಿತು. ಇದರ ನಡುವೆಯೇ ಸದಸ್ಯ ಪುಟ್ಟಣ್ಣ ಗೌಡ ಅವರು ಸಂಘಕ್ಕೆ ಜೇನು ಹಾಕುವವರು ಮಾತ್ರ ಮಾತನಾಡಲಿ. ಯಾರುಯಾರೊ ಇಲ್ಲಿ ಮಾತನಾಡುವುದು ಬೇಡ ಎಂದರು. ಇದಕ್ಕೆ ಕ್ಷೇತ್ರ ಬಿಜೆಪಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ ವಿರೋಧ ವ್ಯಕ್ತಪಡಿಸಿ, ಇಲ್ಲಿ ಸದಸ್ಯರಲ್ಲದವರು ಮಾತನಾಡುತ್ತಿಲ್ಲ. ನೀವು ಸುಮ್ಮನೆ ಕುಳಿತುಕೊಳ್ಳಿ ಎಂದು ಕಟುವಾಗಿ ಹೇಳಿದರು. ಈ ಸಂದರ್ಭದಲ್ಲಿ ಎರಡು ಬಣಗಳ ನಡುವೆ ಮಾತಿನ ಚಕಮಕಿ ಆರಂಭವಾಗಿ ಗದ್ದಲ ಉಂಟಾಯಿತು.

ಒಟ್ಟು ವಿದ್ಯಮಾನಗಳಿಗೆ ಪ್ರತಿಕ್ರಿಯಿಸಿದ, ಆಡಳಿತಾಧಿಕಾರಿ ವಿಜಯಕುಮಾರ್, ಸಹಕಾರಿ ಕಾಯಿದೆಯಂತೆ ಸಭೆಯನ್ನು ಮುಂದೂಡುವ ಇಲ್ಲವೇ ವಿಶೇಷ ಸಭೆಯಾಗಿ ನಡೆಸುವ ಅವಕಾಶವಿದೆ. ಎಲ್ಲರ ಸಮ್ಮತಿ ಇದ್ದರೆ ಮಾತ್ರ ಸಭೆ ಮುಂದುವರಿಸಬಹುದು ಎಂದರು. ಸಭೆ ಮುಂದುವರಿಸುವುದಕ್ಕೆ ಕೈಲಾಸ್ ಅವರ ವಿರೋಧಿ ಗುಂಪಿನವರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಸಭೆಯನ್ನು ಮುಂದೂಡುವುದಾಗಿ ಆಡಳಿತಾಧಿಕಾರಿ ವಿಜಯ ಕುಮಾರ್ ಘೋಷಿಸಿದರು.

ಷಡ್ಯಂತ್ರ: ಕೈಲಾಸ್ ಆರೋಪ
ಪುತ್ತೂರು:
ದ.ಕ. ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಆಡಳಿತ ಮಂಡಳಿ ಬರ್ಕಾಸ್ತುಗೊಳಿಸಿ ಇಂದಿನ ಮಹಾಸಭೆ ರದ್ದುಗೊಳಿಸುವಲ್ಲಿ ಸ್ಥಾಪಿತ ಹಿತಾಸಕ್ತಿಗಳ ಷಡ್ಯಂತ್ರವಿದೆ ಎಂದು ಬರ್ಕಾಸ್ತುಗೊಂಡ ಸಂಘದ ಅಧ್ಯಕ್ಷ ಐ.ಸಿ. ಕೈಲಾಸ್ ಆರೋಪಿಸಿದರು.

ಸೋಮವಾರ ಸಂಘದ ಮಹಾಸಭೆ ರದ್ದುಗೊಂಡ ಬಳಿಕ ಅದೇ ವೇದಿಕೆಯಲ್ಲಿ ತನ್ನ ಬಳಗದ ಸದಸ್ಯರ ಸಭೆ ನಡೆಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಹೆಸರು ದುರ್ಬಳಕೆ ಮಾಡಿಕೊಂಡು ತಂತ್ರಗಾರಿಕೆ ನಡೆಸಿ ತನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಕೆಲಸ ಮಾಡಲಾಗಿದೆ. ತನ್ನ ಆಡಳಿತಾವಧಿಯಲ್ಲಿ ರೂ. 6 ಕೋಟಿ ವ್ಯವಹಾರ ನಡೆಸಿ ಸಂಘಕ್ಕೆ 4 ಲಕ್ಷ ಲಾಭ ಬರುವಂತೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.

ಉತ್ತಮವಾಗಿ ಆಡಳಿತ ನಡೆಸುತ್ತಿದ್ದ ಆಡಳಿತ ಸಮಿತಿಯನ್ನು ಬರ್ಕಾಸ್ತು ಮಾಡಿರುವ ಮತ್ತು  ಆಡಳಿತಾಧಿಕಾರಿ ಒತ್ತಡಕ್ಕೆ ಮಣಿದು ಸಂಘದ ಮಹಾಸಭೆಯನ್ನು ಮುಂದೂಡಿರುವ ಕ್ರಮದ ಕುರಿತು ತನಿಖೆಗೆ ಆಗ್ರಹಿಸಿ ಮುಖ್ಯ ಮಂತ್ರಿಯವರಿಗೆ ದೂರು ನೀಡುವುದಾಗಿ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.