ಮೂಡುಬಿದಿರೆ: ಜಾತಿ ಆಧಾರದಲ್ಲಿ ಜನಪ್ರತಿನಿಧಿಗಳು ಆಯ್ಕೆ ಆಗುವುದು ಸಾಮಾಜಿಕ ಅಸಮತೋಲನಕ್ಕೆ ಕಾರಣವಾಗುತ್ತದೆ. ಇದು ಪ್ರಜಾಪ್ರಭುತ್ವಕ್ಕೂ ಮಾರಕ. ಜಾತಿ ಬಲವಿಲ್ಲದೆ ಜನಬಲದಿಂದ ಆಯ್ಕೆಯಾಗಿರುವ ಅಭಯಚಂದ್ರ ಪ್ರಜಾಪ್ರಭುತ್ವದ ಶ್ರೇಷ್ಠ ಸಂಕೇತ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ಇಂಧನ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.
ಸತತ ನಾಲ್ಕು ಬಾರಿ ಶಾಸಕರಾಗಿ ಹಾಗೂ ಯುವಜನ ಸೇವೆ ಮತ್ತು ಮೀನುಗಾರಿಕೆ ಸಚಿವರಾದ ಅಭಯಚಂದ್ರ ಅವರನ್ನು ಭಾನುವಾರ ಪದ್ಮಾವತಿ ಕಲಾ ಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನಿಸಿ ಮಾತನಾಡಿದರು.
ಜಾತಿ, ಮತವನ್ನು ವಿಭಜಿಸಿ ಆಡಳಿತ ನಡೆಸಿದ ಬಿಜೆಪಿಯ ವಿರುದ್ಧ ಜನ ತೀರ್ಪು ನೀಡಿ ಜಾತ್ಯತೀತ ತತ್ವದ 10 ಕಾಂಗ್ರೆಸ್ ಶಾಸಕರನ್ನು ಜಿಲ್ಲೆಯಿಂದ ಆಯ್ಕೆ ಮಾಡಿರುವುದು ಇತಿಹಾಸ. ಈ ಕಾರಣಕ್ಕಾಗಿ ಜಿಲ್ಲೆಗೆ ನಾಲ್ಕು ಮಂತ್ರಿ ಸ್ಥಾನ ಸಿಕ್ಕಿದೆ. ಈ ಜಿಲ್ಲೆಯ ಸಂಸ್ಕೃತಿ, ಪರಂಪರೆ ನಿರಂತರವಾಗಿ ಮುಂದುವರಿಯಲು ಜನ ಕಾಂಗ್ರೆಸನ್ನು ಬೆಂಬಲಿಸಬೇಕು ಎಂದರು.
ಜನಸಾಮಾನ್ಯರ ಧ್ವನಿಯಾಗುವೆ: ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಜನಸಾಮಾನ್ಯರ ಧ್ವನಿಯಾಗುವೆ ಎಂದು ಅಭಯಚಂದ್ರ ಹೇಳಿದರು.
ಕ್ಷೇತ್ರದ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವೆ ಎಂದು ನಾನು ಹೇಳಲಾರೆ. ನಾನು ಕೆಲವೊಮ್ಮೆ ನಿಷ್ಠುರವಾದಿಯಾಗಿದ್ದರೆ ಅದು ಜನತೆಯ ಹಿತಕ್ಕೋಸ್ಕರವೇ ಹೊರತು ನನ್ನದೇನೂ ಸ್ವಾರ್ಥ ಇಲ್ಲ. ನನ್ನ ರಾಜಕೀಯ ಗುರು ವೀರಪ್ಪ ಮೊಯಿಲಿಯವರಂತೆ ಸರಳತೆ ಹಾಗೂ ಪ್ರಾಮಾಣಿಕತೆಯನ್ನು ಮುಂದುವರಿಸುವೆ. ಮಂಗಳೂರು- ಮೂಡುಬಿದಿರೆ ಚತುಷ್ಪಥ ರಸ್ತೆ, ಸ್ವರಾಜ್ ಮೈದಾನ ಕಡಲಕೆರೆ ಮೂಲಕ ಅಲಂಗಾರಿಗೆ ಸಂಪರ್ಕ ಕಲ್ಪಿಸಲು ವರ್ತುಲ ರಸ್ತೆ ಹಾಗೂ ಬೈಪಾಸ್ ರಸ್ತೆ ರಚನೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮಕ್ಕೆ ಮೊದಲು ಅಭಯಚಂದ್ರರನ್ನು ಕಾಂಗ್ರೆಸ್ ಕಾರ್ಯಕರ್ತರು ಸ್ವರಾಜ್ ಮೈದಾನದಿಂದ ಮುಖ್ಯ ರಸ್ತೆಯಲ್ಲಿ ಸಭಾಂಗಣದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆತಂದರು.
ವಿವಿಧ ಸ್ಥಳಿಯ ಸಂಸ್ಥೆ ಪ್ರತಿನಿಧಿಗಳಾದ ಅಂಬಿಕಾ ಡಿ. ಶೆಟ್ಟಿ, ರುಕ್ಕಯ ಪೂಜಾರಿ, ಪ್ರಕಾಶ್, ಪ್ರೇಮಾ ನಾಯ್ಕ, ಪಕ್ಷದ ಪ್ರಮುಖರಾದ ಪಯ್ಯ್‌ಟ್ಟು ಸದಾಶಿವ ಸಾಲ್ಯಾನ್, ಪ್ರೇಮಾನಂದ ಪ್ರಭು, ಗುರುಪಾದ ಶೆಟ್ಟಿ, ಗುಣಪಾಲ ಶೆಟ್ಟಿ, ಹೆಬ್ರಿ ಪ್ರಸನ್ನ ಬಲ್ಲಾಳ್, ಅವಿಲಿನ್ ಲೂಯಿಸ್, ತುಳು ವಿದ್ವಾಂಸ ಗಣೇಶ್ ಅಮೀನ್ ಸಂಕಮಾರ್ ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೇಘನಾಥ ಶೆಟ್ಟಿ ಸ್ವಾಗತಿಸಿದರು. ರತ್ನಾಕರ ಮೊಯಿಲಿ ನಿರೂಪಿಸಿದರು. ಸಂಪತ್ ಸಾಮ್ರೋಜ್ಯ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.