ADVERTISEMENT

ತುಟ್ಟಿ ಭತ್ಯೆ, ಕನಿಷ್ಠ ಕೂಲಿ ಪಾವತಿಗೆ ಆಗ್ರಹ

ಕಾರ್ಮಿಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 9:57 IST
Last Updated 13 ಜೂನ್ 2018, 9:57 IST

ಮಂಗಳೂರು: ಕನಿಷ್ಠ ಕೂಲಿ, ತುಟ್ಟಿ ಭತ್ಯೆ ಪಾವತಿಸುವಲ್ಲಿ ಮಾಲೀಕರು ತೋರುತ್ತಿರುವ ನಿರ್ಲಕ್ಷ್ಯವನ್ನು ಖಂಡಿಸಿ ಎಸ್‌.ಕೆ. ಬೀಡಿ ವರ್ಕರ್ಸ್‌ ಫೆಡರೇಷನ್‌ ನೇತೃತ್ವದಲ್ಲಿ ಮಂಗಳವಾರ ಬೆಳಿಗ್ಗೆ ನಗರದ ಕದ್ರಿ ಕಂಬಳದಲ್ಲಿರುವ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಎದುರು ಬೀಡಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಪಿವಿಎಸ್‌ ವೃತ್ತದಿಂದ ಘೋಷಣೆ ಕೂಗುತ್ತ ಮೆರವಣಿಗೆ ನಡೆಸಿದ ಕಾರ್ಮಿಕರು, ಮೂರು ವರ್ಷಗಳಿಂದ ಬಾಕಿ ಇರುವ ತುಟ್ಟಿ ಭತ್ಯೆಯನ್ನು ಕೂಡಲೇ ಪಾವತಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್‌.ಕೆ. ಬೀಡಿ ವರ್ಕರ್ಸ್‌ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ವಿ. ಸೀತಾರಾಮ ಬೇರಿಂಜ, ಬೀಡಿ ಕಾರ್ಮಿಕರಿಗೆ ಏಪ್ರಿಲ್ ಒಂದರಿಂದ ಸಿಗಬೇಕಾದ ಮಜೂರಿಯನ್ನು ಶೀಘ್ರ ಪಾವತಿಸುವುದಾಗಿ ಮಾಲೀಕರು ಒಪ್ಪಿದ್ದರೂ, ಇದೀಗ ತುಟ್ಟಿಭತ್ಯೆ ಮೊತ್ತ ₹10.52 ಮಾತ್ರ ಪಾವತಿಸಲು ಹೊರಟಿದ್ದಾರೆ. ಕನಿಷ್ಠ ಕೂಲಿಯಾದ ₹210 ಪಾವತಿಸದೆ ಮಾತಿಗೆ ತಪ್ಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕನಿಷ್ಠಕೂಲಿ ಕಾಯ್ದೆ ಪ್ರಕಾರ ರಚಿತವಾದ ಕನಿಷ್ಠಕೂಲಿ ನಿರ್ಣಯದ ಉಪಸಮಿತಿಯಲ್ಲಿ ಬೀಡಿ ಮಾಲೀಕರು ಹಾಗೂ ಅವರ ಪ್ರತಿನಿಧಿಗಳು, ಕಾರ್ಮಿಕ ಇಲಾಖೆಯ ಸರ್ಕಾರದ ಪ್ರತಿನಿಧಿಗಳು ಹಾಗೂ ಕಾರ್ಮಿಕ ಯೂನಿಯನ್‌ಗಳ ಪ್ರತಿನಿಧಿಗಳು ಇದ್ದುಕೊಂಡು ಕನಿಷ್ಠ ಕೂಲಿ ನಿರ್ಣಯಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರ ಈ ಕೂಲಿಯನ್ನು ಹಾಗೂ ಬೆಲೆ ಏರಿಕೆಯ ಪ್ರತಿ ಅಂಶಕ್ಕೆ ನಾಲ್ಕು ಪೈಸೆ ತುಟ್ಟಿಭತ್ಯೆಯನ್ನು ಏಪ್ರಿಲ್ ಒಂದರಿಂದ ಪಾವತಿಸಲು ಮಾರ್ಚ್ 14ರಂದು ಅಧಿಸೂಚನೆ ಹೊರಡಿಸಿದೆ ಎಂದು ಹೇಳಿದರು.

ಆದರೆ ಕನಿಷ್ಠ ಕೂಲಿ ನಿರ್ಣಯದ ಉಪಸಮಿತಿಯಲ್ಲಿ ಇದ್ದುಕೊಂಡು, ₹210 ಕನಿಷ್ಠಕೂಲಿಯನ್ನು ಕೊಡಲು ಒಪ್ಪಿ, ಇದೀಗ ಕೂಲಿ ಪಾವತಿಸದೆ ಸತಾಯಿಸುತ್ತಿರುವ ಮಾಲೀಕರ ನೀತಿ ಖಂಡನೀಯ ಎಂದರು.

ಹೊಸ ಕನಿಷ್ಠಕೂಲಿ ಹಾಗೂ ಮೂರು ವರ್ಷಗಳಿಂದ ಪಾವತಿಸದೆ ಬಾಕಿ ಇರುವ ₹12.75 ತುಟ್ಟಿಭತ್ಯೆಗಾಗಿ ಹಂತ ಹಂತದ ತೀವ್ರ ಹೋರಾಟವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಸಿಪಿಐ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ವಿ. ಕುಕ್ಯಾನ್‌ ಮಾತನಾಡಿ, ಬೀಡಿ ಕಾರ್ಮಿಕರ ಹಿತಾಸಕ್ತಿ ಕಾಪಾಡಲು ಕಾರ್ಮಿಕ ಇಲಾಖೆ ಕೂಡಲೇ ಮಧ್ಯ ಪ್ರವೇಶಿಸಬೇಕು. ಕಾರ್ಮಿಕರಿಗೆ ಸಿಗಬೇಕಾದ ನ್ಯಾಯಯುತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಎಐಟಿಯುಸಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಚ್‌.ವಿ. ರಾವ್‌, ಬೀಡಿ ಕಾರ್ಮಿಕ ಮುಖಂಡರಾದ ಸುಲೋಚನಾ ಕವತ್ತಾರು, ಸರಸ್ವತಿ ಕಡೇಶಿವಾಲಯ, ಬಿ.ಎಂ. ಹಸೈನಾರ್‌ ವಿಟ್ಲ, ಒ. ಕೃಷ್ಣ ವಿಟ್ಲ, ಹರ್ಷಿತ್ ಬಂಟ್ವಾಳ, ಚಿತ್ರಾಕ್ಷಿ ಕುಂಜತ್ತಬೈಲ್‌, ಕೆ. ಈಶ್ವರ್‌, ಎಂ. ಶಿವಪ್ಪ ಸೇರಿದಂತೆ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.