ADVERTISEMENT

ತುಳು ಸಂಸ್ಕಾರ ಪಾಲನೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 30 ಜುಲೈ 2012, 8:05 IST
Last Updated 30 ಜುಲೈ 2012, 8:05 IST
ತುಳು ಸಂಸ್ಕಾರ ಪಾಲನೆ ಅಗತ್ಯ
ತುಳು ಸಂಸ್ಕಾರ ಪಾಲನೆ ಅಗತ್ಯ   

ವಿಟ್ಲ: ತುಳು ಸಂಸ್ಕೃತಿ, ಸಂಸ್ಕಾರವನ್ನು ಉಳಿಸುವ ಕಾರ್ಯವನ್ನು ಎಲ್ಲರೂ ಒಟ್ಟುಗೂಡಿ ಮಾಡಬೇಕು ಎಂದು ಒಡಿಯೂರು ಗುರುದೇವಾನಂದ ಸ್ವಾಮೀಜಿ ಹೇಳಿದರು.

ವಿಟ್ಲದ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನಮ್ ವತಿಯಿಂದ ಭಾನುವಾರ ಕ್ಷೇತ್ರದಲ್ಲಿ ನಡೆದ `ಆಟಿದ ಆಯನೊ~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತುಳು ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಭಾವನೆ ನಮ್ಮಲ್ಲಿರಬೇಕು. ಸರ್ಕಾರವೂ ಇದಕ್ಕೆ ಸಂಪೂರ್ಣ ಸಹಕಾರ ನೀಡಬೇಕು. ಇದಕ್ಕಾಗಿ ತುಳು ಅಕಾಡೆಮಿ ಜತೆ ಸೇರಿ ಮಂಗಳೂರಿನಲ್ಲಿ ಒಂದು ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಅತಿಥಿಯಾಗಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಎ.ಕೋಟ್ಯಾನ್ ಮಾತನಾಡಿ ಹಿಂದಿನ ಕಾಲದಲ್ಲಿ ಆಟಿ ತಿಂಗಳಲ್ಲಿ ಜನರಿಗೆ ಕೆಲಸವಿರುತ್ತಿರಲಿಲ್ಲ. ಆಷಾಢದ ಅವಧಿಯಲ್ಲಿ ಜೀವನ ನಿರ್ವಹಣೆ  ಕಷ್ಟಕರವಾಗಿತ್ತು. ಆ ನೆನಪನ್ನು ಇಂದು ನಮ್ಮ ಮಕ್ಕಳಿಗೆ ತೋರಿಸಲು ಬೇಕಾಗಿ ಆಟಿ ಆಯನೊ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ~ ಎಂದರು.

ಮಲಾರ್ ಜಯರಾಮ ರೈ ಅವರ ಸಂಪಾದಕತ್ವದ `ನುಗ್ಗಿ ಬರುತಾವೆ ನೂರು ನೆನಪುಗಳು~ ಎಂಬ ಕೃತಿಯನ್ನು ಗುರುದೇವಾನಂದ ಸ್ವಾಮೀಜಿ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಆಟಿ ತಿಂಗಳಲ್ಲಿ ವಿಶೇಷವಾಗಿ ತಯಾರಿಸುವ ಹಲಸಿನ ಬೀಜದ ಸುಟ್ಟಾವು, ಪ್ರತ್ರೋಡೆ, ಮೂಡೆ, ಸುಕುರುಂಡೆ, ಮೆಂತೆ ಮನ್ನಿ, ಅಪ್ಪ (ನೈಯ್ಯದ್ದಿ), ಹುರುಳಿ ಚಟ್ನಿ, ರಾಗಿ ಮನ್ನಿ, ಉಪ್ಪಡ್ ಪಚ್ಚಿಲ್ ಪೆಲತ್ತರಿ ಸೇರಿದಂತೆ ಹಲವು ಬಗೆಯ ತಿಂಡಿಗಳನ್ನು ಸ್ಪರ್ಧೆಗೆ ಇಡಲಾಗಿತ್ತು. ಇದರಲ್ಲಿ ಸರಿತಾ ಡಿ.ಶೆಟ್ಟಿ ಪ್ರಥಮ ಸ್ಥಾನ ಹಾಗೂ ವಸಂತಿ ಎನ್.ಶೆಟ್ಟಿ ದ್ವಿತೀಯ ಸ್ಥಾನ ಪಡೆದರು. ಸಭಾ ಕಾರ್ಯಕ್ರಮದ ಮಧ್ಯ `ಆಟಿ ಕಳೆಂಜ~ ನೃತ್ಯ ಪ್ರದರ್ಶನಗೊಂಡಿತ್ತು.

ಒಡಿಯೂರು ಸಾಧ್ವಿ ಮಾತಾನಂದ ಮಯಿ, ಆಕಾಶವಾಣಿಯ ವಸಂತ ಕುಮಾರ್ ಪೆರ್ಲ, ಸಂಘಟಕ ದಯಾನಂದ ಕತ್ತಲ್‌ಸಾರ್, ಬನಾರಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ನಿರ್ಮಾಣ ಮತ್ತು ನಿರ್ವಹಣಾ ಸಮಿತಿ ಅಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ಗ್ರಾಮ ವಿಕಾಸ ವಾಹಿನಿಯ ಸ್ವಸಹಾಯ ಸಂಘಗಳ ಮೇಲ್ವಿಚಾರಕ ಸದಾಶಿವ ಅಳಿಕೆ, ಗುರುದೇವ ಗ್ರಾಮ ವಿಕಾಸ ಯೋಜನೆ ಸಂಚಾಲಕ ತಾರಾನಾಥ ಕೊಟ್ಟಾರಿ, ಶಶಿಕಲಾ, ಧನ್ಯಶ್ರೀ, ಗಿರೀಶ್ ಕೋಟ್ಯಾನ್ ಸರಪ್ಪಾಡಿ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.