ಮಂಗಳೂರು: ಜಾತಿ ಹೆಸರು ಕರೆದು ಅವಮಾನಿಸಲಾಗಿದೆ ಎಂಬ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಲಾಗದು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ಇಲ್ಲಿ ಹೇಳಿದರು.
ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಭಾನುವಾರ ಪರಿಶಿಷ್ಟ ಜಾತಿ-ಪಂಗಡದ ಸದಸ್ಯರ ಅಹವಾಲು ಸ್ವೀಕಾರ ಮಾಸಿಕ ಸಭೆಯಲ್ಲಿ ಪರಿಶಿಷ್ಟ ಜಾತಿಯ ಯುವತಿಯೊಬ್ಬರ ಮನವಿಗೆ ಅವರು ಉತ್ತರಿಸಿದರು.
ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ದಲಿತ ಹಕ್ಕು ಹೋರಾಟ ಸಮಿತಿಯ ತಾಲ್ಲೂಕು ಘಟಕದ ಕಾರ್ಯದರ್ಶಿ ಈಶ್ವರಿ, ದಿನೇಶ್ ನಾಯ್ಕ ಎಂಬವರ ವಿರುದ್ಧ ದಾಖಲಾಗಿದ್ದ ಪ್ರಕರಣ ಕುರಿತು ವಿಚಾರಿಸಲು ಠಾಣೆಗೆ ಹೋಗಿದ್ದಾಗ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ಜಿ.ಬಾಲಕೃಷ್ಣಯ್ಯ, ತನ್ನನ್ನು ಜಾತಿ ಹೆಸರಿನಿಂದ ಕರೆದು ಅವಮಾನಿಸಿದರು.
ಠಾಣೆಯಿಂದ ಹೊರ ಹೋಗುವಂತೆ ಸೂಚಿಸಿದರು. ಪೊಲೀಸ್ ಅಧಿಕಾರಿ ವಿರುದ್ಧ ಜಾತಿ ನಿಂದನೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದೆ. ಆದರೆ, ಈವರೆಗೂ ಕ್ರಮವನ್ನೇ ತೆಗೆದುಕೊಂಡಿಲ್ಲ. ಪ್ರಕರಣವನ್ನೂ ದಾಖಲಿಸಿಲ್ಲ~ ಎಂದು ದೂರಿದರು.
ಇದಕ್ಕೆ ಉತ್ತರಿಸಿದ ಗೋಯಲ್, `ಈ ಸಂಬಂಧ ವಿಚಾರಣೆ ನಡೆಸಲಾಗಿದೆ. ಈ ಪ್ರಕರಣದಲ್ಲಿ ಯಾವುದೇ ಸಾಕ್ಷಾಧಾರ ಲಭ್ಯವಾಗಿಲ್ಲ. ಕೇವಲ ಹೇಳಿಕೆ ಆಧರಿಸಿ ಎಫ್‌ಐಆರ್ ದಾಖಲಿಸಲಾಗದು~ ಎಂದು ಉತ್ತರಿಸಿದರು.
ಆದರೆ ಪಟ್ಟುಬಿಡದ ಈಶ್ವರಿ `ನನ್ನನ್ನು ನಿಂದಿಸುತ್ತಾರೆ ಎಂದು ಮೊದಲೇ ತಿಳಿದಿದ್ದರೆ ಜತೆಗೆ ಯಾರನ್ನಾದರೂ ಕರೆದೊಯ್ಯಬಹುದಿತ್ತು.
ಆದರೆ ಅದನ್ನು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ ಕೂಡಲೇ ಇನ್‌ಸ್ಪೆಕ್ಟರ್ ವಿರುದ್ಧ ದೂರು ದಾಖಲಿಸಿ ಅವರನ್ನು ಅಮಾನತುಗೊಳಿಸಬೇಕು ಅಥವಾ ವರ್ಗ ಮಾಡಬೇಕು~ ಎಂದು ಆಗ್ರಹಿಸಿದರು.
ಗೋಯಲ್ ಪ್ರತಿಕ್ರಿಯಿಸಿ, `ಕಾನೂನು ವ್ಯವಸ್ಥೆ ಸಾಕ್ಷಿಗಳನ್ನು ಆಧಿರಿಸಿರುತ್ತದೆ. ಪ್ರಕರಣ ದಾಖಲಿಸಲಾಗದು. ಅಮಾನತು ಸಾಧ್ಯವಿಲ್ಲ. ನಮ್ಮ ಈ ಕ್ರಮ ಪ್ರಶ್ನಿಸಿ ನೀವು ನ್ಯಾಯಾಲಯದ ಮೊರೆ ಹೋಗಬಹುದು~ ಎಂದು ಸಲಹೆ ನೀಡಿದರು.
`ಪ್ರಕರಣ ಸುಮ್ಮನೆ ಬಿಡುವುದಿಲ್ಲ. ಖಂಡಿತಾ ನ್ಯಾಯಾಲಯದ ಮೊರೆ ಹೋಗುವೆ~ ಎಂದು ಈಶ್ವರಿ ಪಟ್ಟುಹಿಡಿದರು.
ಇದಕ್ಕೂ ಮುನ್ನ ದಲಿತ ಸಂಘರ್ಷ ಸಮಿತಿ ಸದಸ್ಯ ಎಸ್.ಪಿ.ಆನಂದ್ ಮಾತನಾಡಿ, ಸುಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಮೋಹನ್ ಗೌಡ (50) ಎಂಬವರು ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದ ಯುವತಿ(22)ಯನ್ನು ಅಪಹರಿಸಿ, 1 ವರ್ಷದ ಕಾಲ ಲೈಂಗಿಕ ಕಿರುಕುಳ ನೀಡಿದ್ದು, ಪ್ರಕರಣ ಬೆಳಕಿಗೆ ಬಂದು ಬಂಧನಕ್ಕೊಳಗಾಗಿದ್ದರು.
ಯುವತಿಯನ್ನು ಮಂಗಳೂರಿನ ಪ್ರಜ್ಞಾ ಕೌನ್ಸೆಲಿಂಗ್ ಕೇಂದ್ರದ ವಶಕ್ಕೆ ನೀಡಲಾಗಿತ್ತು. ಮೋಹನ್ ಗೌಡ ಅವರನ್ನು ಕಂಕನಾಡಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿತ್ತು. ಆದರೆ ಕಳೆದ ತಿಂಗಳು ಮತ್ತೆ ಮೋಹನ್ ಗೌಡ ಹಾಗೂ ಯುವತಿ ಇಬ್ಬರೂ ಕಾಣೆಯಾಗಿದ್ದಾರೆ.
ಪೊಲೀಸ್ ವಶದಲ್ಲಿದ್ದ ಆರೋಪಿ ತಪ್ಪಿಸಿಕೊಳ್ಳಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. ಇದರಿಂದ ಅಚ್ಚರಿಗೊಳಗಾದ ಗೋಯಲ್, ಈ ಬಗ್ಗೆ ತಕ್ಷಣ ಸೂಕ್ತ ವಿಚಾರಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಂಟ್ವಾಳದ ಎಂ.ಎ.ನಾಯ್ಕ ಮಾತನಾಡಿ, ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣವನ್ನು ಉ್ದ್ದದೇಶ ಪೂರ್ವಕವಾಗಿ ಸ್ವೀಕರಿಸುತ್ತಿಲ್ಲ. ಸಂಬಂಧ ಕ್ರಮ ತೆಗೆದುಕೊಳ್ಳಬೇಕಾಗಿ ಮನವಿ ಮಾಡಿದರು.
ವಾಹನ ಚಾಲನೆ ವೇಳೆ ಪೊಲೀಸ್ ಅಧಿಕಾರಿಗಳು ಮೊಬೈಲ್‌ನಲ್ಲಿ ಮಾತನಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದಾರೆ. ಈ ಸಂಬಂಧ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹವೂ ಸಭೆಯಲ್ಲಿ ಕೇಳಿಬಂದಿತು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾಕರ್, ಪುತ್ತೂರು ಎಎಸ್‌ಪಿ ಅನುಚೇತ್, ಡಿವೈಎಸ್‌ಪಿ ಎಂ.ಬಿ.ನಾಗರಾಜ್, ಪ್ರೊಬೆಷನರಿ ಡಿವೈಎಸ್‌ಪಿ, ಪ್ರೊಬೆಷನರಿ ಐಪಿಎಸ್ ದಿವ್ಯಾ ಗೋಪಿನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.