ADVERTISEMENT

ನದಿಗೆ ಮಲಿನ ದ್ರವ– ಕ್ರಮಕ್ಕೆ ಆಗ್ರಹ

ಉಪ್ಪಿನಂಗಡಿ: ಘನ ತ್ಯಾಜ್ಯ ನಿರ್ವಾಹಣಾ ಸಭೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 10:06 IST
Last Updated 19 ಡಿಸೆಂಬರ್ 2013, 10:06 IST

ಉಪ್ಪಿನಂಗಡಿ: ಪೇಟೆಯಲ್ಲಿರುವ ವಸತಿ ಸಮುಚ್ಚಯ, ವಸತಿ ಗೃಹಗಳಲ್ಲಿ ಹೊರ ಬರುವ ಮಲಿನ ದ್ರವ ತ್ಯಾಜ್ಯ ನೇರವಾಗಿ ಹರಿಯುವ ನದಿಯ ಒಡಲು ಸೇರುತ್ತಿದೆ. ಕುಡಿಯುವ ನೀರು ಮಲಿನವಾಗುತ್ತಿದೆ, ಇದರಿಂದಾಗಿ ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡುತ್ತಿದ್ದೇವೆ. ಇದರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ನಳಿನಾಕ್ಷಿ ಶೆಟ್ಟಿ ಅಧ್ಯಕ್ಷತೆಯಲ್ಲಿ ಮಂಗಳವಾರ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ ಘನ ತ್ಯಾಜ್ಯ ನಿರ್ವಾಹಣೆ ಬಗ್ಗೆ ಕರೆಯಲಾದ ಸಭೆಯಲ್ಲಿ ಈ ವಿಚಾರದ ತೀವ್ರ ಚರ್ಚೆಗೆ ಬಂತು. ನದಿಗೆ ಮಲಿನ ನೀರು ಹರಿದು ಹೋಗುವುದನ್ನು 15 ದಿನಗಳಲ್ಲಿ ನಿಲ್ಲಿಸಬೇಕು, ಇಲ್ಲದಿಂದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ದಾವೆ ಹೂಡಬೇಕು ಎಂಬ ಸಲಹೆ ಸಭೆಯಲ್ಲಿ ವ್ಯಕ್ತವಾಯಿತು.

ಘನ ತ್ಯಾಜ್ಯ ವಿಲೇವಾರಿ ಬಗ್ಗೆ ಪಿಡಿಒ ನಾಗೇಶ್ ಮಾಹಿತಿ ನೀಡಿ ಇದರ ಅನುಷ್ಠಾನಕ್ಕೆ ವರ್ತಕರು, ಗ್ರಾಮಸ್ಥರು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ವಿನಂತಿಸುತ್ತಿದ್ದಂತೆ ನೇತ್ರಾವತಿ ನದಿ ತಿರುವು ಯೋಜನೆಯ ಸಹ ಸಂಚಾಲಕ ಜಯಂತ ಪೊರೋಳಿ ಮಾತನಾಡಿ ಘನ ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆ ಆಯಿತು. ಹಾಗಾದರೆ ದ್ರವ ತ್ಯಾಜ್ಯ ವಿಲೇವಾರಿಗೆ ಏನು ಕ್ರಮ ಕೈಗೊಂಡಿದ್ದೀರಿ? ಪಂಚಾಯಿತಿ ವ್ಯಾಪ್ತಿ­ಯಲ್ಲಿ ಹೊರ ಬರುವ ಎಲ್ಲಾ ದ್ರವ ತ್ಯಾಜ್ಯವನ್ನು ನೇರವಾಗಿ ನದಿಗೆ ಬಿಡಲಾಗುತ್ತಿದೆ. ಇದರ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ವಸತಿ ಸಮುಚ್ಚಯ, ಹೋಟೆಲ್‌ನವರು ನೇರ­ವಾಗಿ ನದಿಗೆ ಬಿಡುತ್ತಿದ್ದಾರೆ. ಅದರ ಬದಲು ಇಂಗುಗುಂಡಿ ಮಾಡಿ ಅದಕ್ಕೆ ಬಿಡುವಂತೆ ಆಗಬೇಕು. 15 ದಿನಗಳ ಕಾಲಾವಕಾಶ ನೀಡಿ ನದಿಗೆ ಬಿಡುವಂತದ್ದು ನಿಲ್ಲಿಸದಿದ್ದರೆ ಅಂತಹವರ ವಿರುದ್ಧ ಕ್ರಿಮಿನಲ್ ದಾವೆ ಹೂಡಬೇಕು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

ರೋಹಿತಾಕ್ಷ ಮಾತನಾಡಿ ವಸತಿ ಸಮುಚ್ಚ­ಯವೊಂದರ ತ್ಯಾಜ್ಯ ನದಿಗೆ ಹೋಗುತ್ತಿರುವ ಬಗ್ಗೆ ಅದನ್ನು ತೆಗೆಸುವ ಬಗ್ಗೆ ಈಗಾಗಲೇ ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಆದರೆ ಅದು ಅನುಷ್ಠಾನ ಆಗಿಲ್ಲ, ಅದನ್ನು ತಕ್ಷಣ ಅನುಷ್ಠಾನ ಮಾಡಬೇಕು ಎಂದರು.
ಇದಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಶ್ ಪ್ರತಿಕ್ರಿಯಿಸಿ ‘ನಾನೀಗ ಹೊಸದಾಗಿ ಪ್ರಭಾರ ಅಧಿಕಾರ ವಹಿಸಿಕೊಂಡಿದ್ದೇನೆ. ಮುಂದೆ ಪಂಚಾಯಿತಿ ಸಭೆಯಲ್ಲಿ ಚರ್ಚಿಸಲಾಗಿ ಅಗತ್ಯ ಕ್ರಮ ಕೈಗೊಳ್ಳ­ಲಾಗುವುದು’ ಎಂದರು.

ತ್ಯಾಜ್ಯದ ಜೊತೆ ಪ್ಲಾಸ್ಟಿಕ್ ಹಾಕಬಾರದು.  ಕೊಳೆಯುವ ತ್ಯಾಜ್ಯ ಮತ್ತು ಕೊಳೆಯದ ತ್ಯಾಜ್ಯ ಬೇರೆಯಾಗಿ ವಿಂಗಡಿಸಿ ಅದನ್ನು ಗೊಬ್ಬರ ಮಾಡಲಾಗುತ್ತದೆ. ಸ್ವಚ್ಛತೆ ಸಲುವಾಗಿ ವರ್ತಕರು, ಗ್ರಾಮಸ್ಥರು ಪಂಚಾಯಿತಿಗೆ ಸಹಕಾರ ನೀಡಬೇಕು ಎಂದು ಅಧ್ಯಕ್ಷೆ ನಳಿನಾಕ್ಷಿ ಶೆಟ್ಟಿ ವಿನಂತಿಸಿದರು. ಜಿಲ್ಲಾ ಪಂಚಾಯಿತಿ ತ್ಯಾಜ್ಯ ವಿಲೇವಾರಿ ನಿರ್ವಹಣಾ ಸಮನ್ವಯಾಧಿಕಾರಿ ರೋಹಿತ್ ಪೂರಕ ಮಾಹಿತಿ ನೀಡಿದರು.

ವರ್ತಕ ಸಂಘದ ಹಾರೂನ್ ರಶೀದ್, ಗ್ಯಾರೇಜ್ ಮಾಲೀಕರ ಸಂಘದ ಎಂ.ವಿಶ್ವನಾಥ, ಆರೋಗ್ಯ ರಕ್ಷಾ ಸಮಿತಿಯ ಮಹಮ್ಮದ್ ಕೆಂಪಿ, ಹರಿರಾಮಚಂದ್ರ, ಉದಯಕುಮಾರ್, ಸರ್ವೇಶ್ ಕುಮಾರ್, ಆದಂ ಮಠ ಮಾತನಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಂಗಾಧರ ಟೈಲರ್, ಸದಸ್ಯರು ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಉಪೇಂದ್ರ ಪೈ, ಸಹಸ್ರಲಿಂಗೇಶ್ವರ ದೇವಸ್ಥಾನದ ಸದಸ್ಯ ವಿಶ್ವನಾಥ ಶೆಟ್ಟಿ ಕಂಗ್ವೆ, ಶಾಂಭವಿ ರೈ ಇದ್ದರು. ಕಾರ್ಯದರ್ಶಿ ವಾಮನ ಸಪಲ್ಯ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.