ADVERTISEMENT

ನವಮಂಗಳೂರಿಗೆ ವಿಲಾಸಿ ಹಡಗು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2012, 8:05 IST
Last Updated 9 ಮಾರ್ಚ್ 2012, 8:05 IST

ಮಂಗಳೂರು: ಎಂ.ವಿ. ಸೀಬೋರ್ನ್ ಲೆಜೆಂಡ್ ಹೆಸರಿನ ಪ್ರಯಾಣಿಕ ಹಡಗು ಗುರುವಾರ ನವಮಂಗಳೂರು ಬಂದರಿಗೆ ಆಗಮಿಸಿತು. ಪ್ರಸಕ್ತ ಸಾಲಿನಲ್ಲಿ ಈ ಬಂದರಿಗೆ ಬಂದ 13ನೇ ಹಡಗು ಇದಾಗಿದ್ದು, 190 ಪ್ರಯಾಣಿಕರು ಮತ್ತು 173 ಸಿಬ್ಬಂದಿ ಹಡಗಿನಲ್ಲಿ ಇದ್ದರು.

ಹಡಗು ಇಲ್ಲಿಂದ ಗೋವಾ ಮೂಲಕ ಮುಂಬೈಗೆ ಪಯಣಿಸಲಿದೆ. 134 ಪ್ರಯಾಣಿಕರು ಮಂಗಳೂರು ನಗರ ದರ್ಶನ ಬಯಸಿದ್ದು, ಇವರಲ್ಲಿ ಹೆಚ್ಚಿನವರು ಅಮೆರಿಕ ಮತ್ತು ಇಂಗ್ಲೆಂಡ್ ದೇಶದವರು.

ಪ್ರಯಾಣಿಕರು ಬೈಕಂಪಾಡಿಯ ಗೇರುಬೀಜ ಸಂಸ್ಕರಣೆ ಕಾರ್ಖಾನೆ, ಮೂಡುಬಿದಿರೆಯ ಸೋನ್ಸ್ ಫಾರ್ಮ್, ಕಾರ್ಕಳದ ಗೋಮಟೇಶ್ವರ ಪ್ರತಿಮೆ, ಗೋಕರ್ಣನಾಥ, ಕದ್ರಿ ದೇವಸ್ಥಾನ, ಅಲೋಷಿಯಸ್ ಚಾಪೆಲ್‌ಗಳಿಗೆ ಭೇಟಿ ನೀಡಿದರು.

ಹಡಗಿನಲ್ಲಿದ್ದ 14 ಪ್ರಯಾಣಿಕರು ಮಂಗಳೂರು ವಿಮಾನ ನಿಲ್ದಾಣ ಮೂಲಕ ದೆಹಲಿ ಮತ್ತು ಆಗ್ರಾಕ್ಕೆ ತೆರಳಿದರು. ಅವರು ಮುಂಬೈನಲ್ಲಿ ಹಡಗನ್ನು ಹತ್ತಲಿದ್ದಾರೆ. ಬೆಂಗಳೂರು ಇಮಿಗ್ರೇಷನ್ ಅಥಾರಿಟಿ ಸೂಚನೆಯಂತೆ ಇಲ್ಲಿ ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು.

 ಈ ತಿಂಗಳ ಕೊನೆಯ ವಾರ ಇನ್ನೂ ನಾಲ್ಕು ಹಡಗುಗಳು ಇಲ್ಲಿಗೆ ಬರುವ ಸಾಧ್ಯತೆಯಿದೆ ಎಂದು ಎನ್‌ಎಂಪಿಟಿ ಅಧ್ಯಕ್ಷ ತಮಿಳುವಾಣನ್ ಹೇಳಿದರು.

ದೊಡ್ಡ ಹಡಗು: ಮೂರು ಸಾವಿರ ಪ್ರಯಾಣಿಕರು ಹಾಗೂ 1,200 ಸಿಬ್ಬಂದಿಯನ್ನು ಒಳಗೊಂಡ ಭಾರೀ ಗಾತ್ರದ ಹಡಗು ಏಪ್ರಿಲ್ 1ರಂದು ಇಲ್ಲಿಗೆ ಬರುವ ಸಾಧ್ಯತೆಯಿದೆ. ಇದು ಇಲ್ಲಿಗೆ ಬರಲಿರುವ ಅತ್ಯಂತ ದೊಡ್ಡ ಹಡಗು ಎನಿಸಲಿದೆ. ಸುಮಾರು 298 ಮೀಟರ್ ಉದ್ದದ ಇನ್ನೊಂದು ಹಡಗು ಏಪ್ರಿಲ್ 12ರಂದು ಬರುವ ನಿರೀಕ್ಷೆಯಿದೆ ಎಂದು ಟ್ರಾಫಿಕ್ ಮ್ಯಾನೇಜರ್ ಎಸ್.ಗೋಪಾಲಕೃಷ್ಣನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.