ಮಂಗಳೂರು: ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ತ್ವರಿತವಾಗಿ ಚೀಟಿ ನೀಡಬೇಕು ಎಂಬ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಆದೇಶಕ್ಕೆ ಜಿಲ್ಲೆಯಲ್ಲಿ ಮನ್ನಣೆ ದೊರೆತ ಲಕ್ಷಣ ಕಾಣಿಸಿದ್ದು, ಎಲ್ಲಾ 203 ಗ್ರಾ.ಪಂ.ಗಳಲ್ಲಿ ಅರ್ಜಿ ಸಲ್ಲಿಸಿದವರ ಪರಿಶೀಲನಾ ಕಾರ್ಯ ಮುಗಿದಿದೆ.
ಕಳೆದ ಮೇ 6ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ತಮ್ಮ ಪ್ರಥಮ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೇ ಅಂತ್ಯದ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಎಲ್ಲಾ ಬಿಪಿಎಲ್ ಪಡಿತರ ಚೀಟಿದಾರರಿಗೂ ಪಡಿತರ ಚೀಟಿ ವಿತರಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದರು. ಮೇ 10ರೊಳಗೆ ಪರಿಶೀಲನಾ ಕಾರ್ಯ ಕೊನೆಗೊಳ್ಳಬೇಕು, ಮೇ 20ರೊಳಗೆ ಪಡಿತರ ಚೀಟಿ ಮುದ್ರಿಸುವ ಕೆಲಸ ಕೊನೆಗೊಳ್ಳಬೇಕು ಮತ್ತು ಮೇ ಅಂತ್ಯದೊಳಗೆ ವಿತರಿಸಿ ಆಗಿರಬೇಕು ಎಂದು ತಾಕೀತು ಮಾಡಿದ್ದರು.
`ದ.ಕ.ಜಿಲ್ಲೆಯಲ್ಲಿ ಆನ್‌ಲೈನ್ ಮೂಲಕ 43,747 ಮಂದಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದರು. ಗ್ರಾಮಾಂತರ ಪ್ರದೇಶಗಳಲ್ಲಿ 21,933 ಮತ್ತು ನಗರ ಪ್ರದೇಶಗಳಲ್ಲಿ 21,739 ಅರ್ಜಿಗಳು ಬಂದಿದ್ದವು. ಗ್ರಾಮಾಂತರ ಪ್ರದೇಶಗಳಲ್ಲಿ ಅರ್ಜಿ ಸಲ್ಲಿಸಿದವರಲ್ಲಿ ಬಿಪಿಎಲ್ ಚೀಟಿಗಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ 11,545 ಇತ್ತು.
ಗ್ರಾಮ ಲೆಕ್ಕಿಗರು, ಗ್ರಾ.ಪಂ.ಗಳ ಪಿಡಿಒಗಳ ಸಹಾಯದಿಂದ ಈ ಎಲ್ಲಾ ಅರ್ಜಿದಾರರ ಮನೆಗಳಿಗೂ ಭೇಟಿ ನೀಡಿ ಪರಿಶೀಲಿಸುವ ಕಾರ್ಯ ಕೊನೆಗೊಂಡಿದೆ. ನಗರ ಪ್ರದೇಶಗಳಲ್ಲಿ ಪಡಿತರ ಚೀಟಿಗಾಗಿ 4,531 ಅರ್ಜಿಗಳು ಬಿಪಿಎಲ್ ಪಡಿತರ ಚೀಟಿಗಾಗಿ ಬಂದಿದ್ದವು. ಅಲ್ಲಿ ಸಹ ಪರಿಶೀಲನಾ ಕಾರ್ಯ ಕೊನೆಗೊಂಡಿದೆ.
ಎಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರ ಮನೆಗಳನ್ನು ಪರಿಶೀಲಿಸುವ ಕಾರ್ಯವೂ ಬಹುತೇಕ ಕೊನೆಗೊಂಡಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ರಾಜ್ಯದ ಇತರ ಜಿಲ್ಲೆಗಳಿಂದ ಮುಂಚೂಣಿಯಲ್ಲಿದೆ~ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶರಣಬಸಪ್ಪ ಮಂಗಳವಾರ `ಪ್ರಜಾವಾಣಿ~ಗೆ ತಿಳಿಸಿದರು.
60 ವೆಬ್ ಕ್ಯಾಮರಾ: ಆರಂಭದಲ್ಲಿ ಜಿಲ್ಲೆಯ 25 ಗ್ರಾ.ಪಂ.ಗಳಿಗೆ ವೆಬ್ ಕ್ಯಾಮರಾ ಮತ್ತು ಬಯೊಮೆಟ್ರಿಕ್ ಯಂತ್ರಗಳನ್ನು ಸರ್ಕಾರ ಒದಗಿಸಿತ್ತು. ಅವುಗಳನ್ನು ಬಳಸಿ ಈಗಾಗಲೇ ಪಡಿತರ ಚೀಟಿದಾರರ ಭಾವಚಿತ್ರ ತೆಗೆಸುವ ಕಾರ್ಯ ಆರಂಭವಾಗಿದೆ.
ಇದೀಗ ಮತ್ತೆ 60 ಕ್ಯಾಮರಾ ಮತ್ತು ಬಯೊಮೆಟ್ರಿಕ್ ಯಂತ್ರಗಳು ಜಿಲ್ಲೆಗೆ ರವಾನೆಯಾಗಿವೆ. ವಿಪ್ರೊ ಕಂಪೆನಿಯಿಂದ ಪೂರೈಕೆಯಾಗಿರುವ ಈ ಉಪಕರಣಗಳು ಈಗಾಗಲೇ ಚಿಕ್ಕಮಗಳೂರಿಗೆ ಬಂದಿದ್ದು, ಜಿಲ್ಲೆಗೆ ಒಂದರೆಡು ದಿನಗಳಲ್ಲಿ ಬರಲಿವೆ. ವಾರದೊಳಗೆ ಉಳಿದ ಗ್ರಾ.ಪಂ.ಗಳಿಗೂ ಈ ಉಪಕರಣಗಳು ಬರುವ ನಿರೀಕ್ಷೆ ಇದೆ.
`ಪಡಿತರ ಚೀಟಿ ವಿತರಣೆಯಲ್ಲಿ ಅರ್ಜಿ ಪರಿಶೀಲಿಸುವ ಕಾರ್ಯವೇ ಮುಖ್ಯವಾದುದು. ಅರ್ಜಿದಾರರು ನಿಜವಾಗಿಯೂ ಚೀಟಿ ಪಡೆಯಲು ಅರ್ಹರು ಎಂಬುದು ಪರಿಶೀಲನೆ ವೇಳೆ ಸ್ಪಷ್ಟವಾಗುತ್ತದೆ. ಈ ಮಹತ್ವದ ಕೆಲಸವನ್ನು ನಾವು ಈಗಾಗಲೇ ಗ್ರಾಮಾಂತರ ಪ್ರದೇಶಗಳಲ್ಲಿ ಕೊನೆಗೊಳಿಸಿದ್ದೇವೆ.
ಇದೀಗ ವೆಬ್ ಕ್ಯಾಮರಾಗಳೂ ಎಲ್ಲಾ ಗ್ರಾ.ಪಂ.ಗಳಿಗೆ ರವಾನೆಯಾಗುತ್ತಿದೆ. ಪರಿಶೀಲನೆ ಕಾರ್ಯ ಕೊನೆಗೊಂಡಂತೆ ಅರ್ಜಿದಾರರಿಗೆ ಮೊಬೈಲ್ ಸಂದೇಶದ ಮೂಲಕ ಭಾವಚಿತ್ರ ತೆಗೆಸುವ ಸಂದೇಶವನ್ನೂ ರವಾನಿಸಲಾಗುತ್ತದೆ. ಇನ್ನು ಮುಂದೆ ಚೀಟಿದಾರರು ಕುಟುಂಬ ಸಮೇತರಾಗಿ ಭಾವಚಿತ್ರ ತೆಗೆಸಿಕೊಳ್ಳಲು ಬಂದರೆ ಅವರಿಗೆ ಶೀಘ್ರವೇ ಚೀಟಿ ವಿತರಿಸುವ ಕಾರ್ಯ ನಡೆಯಲಿದೆ~ ಎಂದು ಉಪನಿರ್ದೇಶಕರು ಹೇಳಿದರು.
ನಗರ ಪ್ರದೇಶಗಳಲ್ಲಿ ಈಗಲೂ ಫ್ರಾಂಚೈಸಿಗಳ ಮೂಲಕ ಫೋಟೊ, ಬಯೊಮೆಟ್ರಿಕ್ಸ್ ತೆಗೆಸುವ ವ್ಯವಸ್ಥೆ ಇದೆ. ಗ್ರಾಮಾಂತರ ಪ್ರದೇಶಗಳಲ್ಲಿ ಇಲಾಖೆಯ ವತಿಯಿಂದಲೇ ಇದೀಗ ಫೋಟೊ ತೆಗೆಸುವ, ಬಯೊಮೆಟ್ರಿಕ್ ಗುರುತು ಪಡೆಯುವ ಕಾರ್ಯ ನಡೆಯುತ್ತಿದೆ. ಇನ್ನು ಮುಂದೆ ಭಾಗ್ಯಲಕ್ಷ್ಮಿ, ಆಶ್ರಯ ಸಹಿತ ಇತರ ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದಕ್ಕೆ ಫಲಾನುಭವಿಗಳು ಪಡಿತರ ಚೀಟಿಗಾಗಿ ತಿಂಗಳುಗಟ್ಟಲೆ ಕಾಯುವ ಪ್ರಸಂಗ ಇರಲಾರದು ಎಂದೇ ಹೇಳಲಾಗುತ್ತಿದೆ.
ಆನ್‌ಲೈನ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಬಂದಾಗಿನಿಂದ ಇದುವರೆಗೆ ಜಿಲ್ಲೆಯಲ್ಲಿ 1200 ಪಡಿತರ ಚೀಟಿಗಳು ಸಿದ್ಧವಾಗಿದ್ದು, ಈಗಾಗಲೇ 700 ಚೀಟಿಗಳನ್ನು ವಿತರಿಸಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ವೆಬ್‌ಕ್ಯಾಮರಾಗಳ ಪೂರೈಕೆಯೊಂದಿಗೆ ಈ ಕಾರ್ಯ ಚುರುಕಾಗುವ ನಿರೀಕ್ಷೆ ಇದೆ.
59 ಬಾರಿ ಅರ್ಜಿ ಸಲ್ಲಿಸಿದ್ದರು!
ವ್ಯವಸ್ಥೆಯೊಂದರ ದುರ್ಬಳಕೆ ಅಂದರೆ ಹೀಗೆಯೇ ಇರಬೇಕು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಮುಕ್ತ ಅವಕಾಶ ಕೊಟ್ಟಿದ್ದಕ್ಕೆ ಸ್ಪಂದಿಸಿದ ವ್ಯಕ್ತಿಯೊಬ್ಬರು 59 ಬಾರಿ ಅರ್ಜಿ ಸಲ್ಲಿಸಿ `ದಾಖಲೆ~ ನಿರ್ಮಿಸಿದ್ದು ಆಹಾರ ಇಲಾಖೆಯ ಕಂಪ್ಯೂಟರ್‌ನಲ್ಲಿ ದಾಖಲಾಗಿದೆ.
ವ್ಯವಸ್ಥೆಯನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುವುದರಿಂದ ಸಿಬ್ಬಂದಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಕಾರಣಕ್ಕಾಗಿಯೇ ಸದ್ಯ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಕಾರ್ಯ ಸ್ಥಗಿತಗೊಂಡಿದೆ. ಈಗಾಗಲೇ ಸಲ್ಲಿಕೆಯಾದ ಅರ್ಜಿಗಳನ್ನೆಲ್ಲ ವಿಲೇವಾರಿ ಮಾಡಿದ ತಕ್ಷಣ ಅಂದರೆ ಜಿಲ್ಲೆಯಲ್ಲಿ ಇನ್ನೊಂದು ವಾರದೊಳಗೆ ಮತ್ತೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿಗೆ ಬರಲಿದೆ ಎಂಬ ಭರವಸೆ ಆಹಾರ ಇಲಾಖೆಗೆ ಹಿರಿಯ ಅಧಿಕಾರಿಗಳಿಂದ ಲಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.