ADVERTISEMENT

ಪ್ರತಿ ಆಸ್ಪತ್ರೆಯಲ್ಲೂ ಪುನರ್ವಸತಿ ಕೇಂದ್ರ ಅಗತ್ಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 6:05 IST
Last Updated 16 ಫೆಬ್ರುವರಿ 2012, 6:05 IST

ಮಂಗಳೂರು: ದೈಹಿಕ ಅಶಕ್ತರನ್ನು ನೋಡಿಕೊಳ್ಳುವುದಕ್ಕಾಗಿ ಪ್ರತಿ ಆಸ್ಪತ್ರೆಯಲ್ಲಿಯೂ ಪುನರ್ವಸತಿ ಕೇಂದ್ರ ಇರಬೇಕು ಎಂಬ ನಿಯಮ ಇದ್ದರೂ ದೇಶದಲ್ಲಿ ಪಾಲಿಸಲಾಗುತ್ತಿಲ್ಲ ಎಂದು ಭಾರತೀಯ ಪುನರ್ವಸತಿ ಮಂಡಳಿ(ಆರ್‌ಸಿಐ) ಅಧ್ಯಕ್ಷ ಮೇಜರ್ ಜನರಲ್ (ನಿವೃತ್ತ) ಇಯಾನ್ ಕಾರ್ಡೊಜೊ ವಿಷಾದಿಸಿದರು.

ನಗರದಲ್ಲಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ಮಂಗಳವಾರ `ವೈದ್ಯಕೀಯ ಜಗತ್ತು ಮತ್ತು ಪುನರ್ವಸತಿ~ ವಿಷಯವಾಗಿ ಉಪನ್ಯಾಸ ನೀಡಿದ ಅವರು, ಅಶಕ್ತರನ್ನು ನೋಡಿಕೊಳ್ಳುವುದಕ್ಕಾಗಿಯೇ ತಯಾರಾದ ಸಿಬ್ಬಂದಿಗೆ ದೇಶದಲ್ಲಿ ಭಾರಿ ಬೇಡಿಕೆ ಇದೆ. ಸದ್ಯ ಇಂತಹ 1.40 ಲಕ್ಷ ಮಂದಿಗೆ ಉದ್ಯೋಗ ಅವಕಾಶ ಇದೆ. ಆದರೆ ಸೂಕ್ತ ವೇತನ ನೀಡದ ಕಾರಣ ಈ ಹುದ್ದೆಗೆ ಸೇರಲು ಅವರು ಮುಂದೆ ಬರುತ್ತಿಲ್ಲ ಎಂದರು.

ಕಿವುಡರು, ಮೂಗರು ಸಹಿತ ಅಶಕ್ತರ ಆರೈಕೆ ಎಷ್ಟು ಕಷ್ಟ ಎಂಬುದನ್ನು ಅನುಭವಿಸಿಯೇ ತಿಳಿಯಬೇಕಷ್ಟೆ. ಪರಿಣತಿ ಪಡೆದವರಿಗೆ ಸೂಕ್ತ ವೇತನ ನೀಡುವ ವ್ಯವಸ್ಥೆ ಜಾರಿಗೆ ಬರಬೇಕು. ದೆಹಲಿ ಸುತ್ತ ತಮ್ಮ ಪ್ರಯತ್ನದಿಂದಾಗಿ ನ್ಯಾಯಾಲಯದ ಆದೇಶದೊಂದಿಗೆ ಸೂಕ್ತ ವೇತನ ಸಿಗುತ್ತಿದ್ದು, ಇದೀಗ ಈ ಹುದ್ದೆಗೆ ಬರಲು ಅಭ್ಯರ್ಥಿಗಳು ಮುಗಿಬೀಳುತ್ತಿದ್ದಾರೆ ಎಂದರು.

ಸೇನಾಪಡೆ ನಾಯಕತ್ವ ವಹಿಸಿ ಪಾಕಿಸ್ತಾನದ ಮೇಲೆ 1971ರಲ್ಲಿ ನಡೆಸಿದ ಯುದ್ಧದ ಅನುಭವ ಹಂಚಿಕೊಂಡ ಅವರು, ಸ್ಪಷ್ಟ ಗುರಿ, ನಾಯಕತ್ವ ಗುಣ ಇದ್ದರೆ ಮಾತ್ರ ಯುವಜನತೆಗೆ ರಾಷ್ಟ್ರ ನಿರ್ಮಿಸುವುದಕ್ಕೆ ಸಾಧ್ಯ ಎಂದರು.

ಸಂಸ್ಥೆ ನಿರ್ದೇಶಕ ಫಾ.ಪ್ಯಾಟ್ರಿಕ್ ರಾಡ್ರಿಗಸ್, ಆಡಳಿತಾಧಿಕಾರಿ ಫಾ. ಡೆನಿಸ್ ಡೇಸಾ, ಡೀನ್ ಜೆ.ಪಿ.ಆಳ್ವ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.