ADVERTISEMENT

ಬಂದ್‌: ಬಜ್ಪೆ ಪ್ರದೇಶದಲ್ಲಿ ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 6:51 IST
Last Updated 4 ಮಾರ್ಚ್ 2014, 6:51 IST

ಬಜ್ಪೆ: ಎತ್ತಿನಹೊಳೆ- ನೇತ್ರಾವತಿ ಯೋಜ­ನೆ­ಯನ್ನು ವಿರೋಧಿಸಿ ಹಲವಾರು ಸಂಘಟನೆಗಳು ನೀಡಿದ್ದ ಜಿಲ್ಲಾ ಬಂದ್‌­ಗೆ ಬಜ್ಪೆ ವ್ಯಾಪ್ತಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಸೋಮವಾರ ಬೆಳಗ್ಗಿನಿಂದ ಬಸ್ ಸಹಿತ ಹಲವಾರು ವಾಹನಗಳು ರಸ್ತೆ­ಗಿಳಿಯಲಿಲ್ಲ. ರಸ್ತೆ ಸಂಚಾರ ಸಂಪೂರ್ಣ ಸ್ತಬ್ದಗೊಂಡಿತ್ತು. ಮುಖ್ಯವಾಗಿ ಆಟೋ­ರಿಕ್ಷಾ ಚಾಲಕ-ಮಾಲಕರು, ಗೂಡ್ಸ್ ಟೆಂಪೋ ಚಾಲಕ- ಮಾಲೀಕರು ಬಂದ್‌ ಬೆಂಬಲಿಸಿದ್ದರು. ವರ್ತಕರು, ಅಂಗಡಿ ಮಾಲೀಕರು, ಹೋಟೆಲ್, ಗೂಡಂಗಡಿಗಳು ಮಳಿಗೆಗೆ ಬೀಗ ಹಾಕಿದ್ದರಿಂದ ಬಂದ್ ಸಂಪೂರ್ಣ­ವಾಗಿ ಯಶಸ್ವಿಯಾಗಿದೆ.

ಬಜ್ಪೆ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ನಡೆಯಲಿಲ್ಲ ಎಂದು ಬಜ್ಪೆ ಪೊಲೀಸ್ ಮೂಲಗಳು ತಿಳಿಸಿವೆ. ವರ್ತ­ಕರ ಸಂಘಟನೆ, ಆಟೋ ರಿಕ್ಷ ಚಾಲಕ ಮಾಲಕರ ಸಂಘ, ಹೋಟೆಲ್ ಮಾಲಿ­ಕರ ಸಂಘ, ವ್ಯಾಪಾರಸ್ಥರು ಬಂದ್‌  ಬೆಂಬಲಿಸಿದ್ದರು. ಪ್ರೊ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ, ಹಿಂದೂ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿದ್ದವು.

ರಸ್ತೆಯಲ್ಲೇ ಕ್ರಿಕೆಟ್: ಬಜ್ಪೆಯಲ್ಲಿ ಬಂದನ್ನು ವಿನೂತನ ರೀತಿಯಲ್ಲಿ ಆಚ­ರಿಸಲಾಯಿತು. ಬಸ್ ಸಹಿತ ಯಾವು­ದೇ ವಾಹನಗಳು ರಸ್ತೆಗಿಳಿಯದ ಕಾರಣ ಕೆಲವು ಉತ್ಸಾಹಿ ಬಜ್ಪೆ ಬಸ್‌­ನಿಲ್ದಾಣದಲ್ಲಿ ಕ್ರಿಕೆಟ್ ಆಡಿ ಬಂದ್‌ಗೆ ಬೆಂಬಲ ಸೂಚಿಸಿದರು. ಸೋಮವಾರ ಬಜ್ಪೆ ಸಂತೆಯಾಗಿದ್ದ­ರಿಂದ ಹಣ್ಣು, ತರಕಾರಿ ಮೀನು ವ್ಯಾಪಾ­ರಸ್ಥರು ಗ್ರಾಹಕರಿಲ್ಲದೆ ಪರದಾ­ಡಿದರು. ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕರು ಕಾಸರ­ಗೋಡು ಮತ್ತಿತರ ದೂರದ ಊರಿಗೆ ಬಸ್ ವ್ಯವಸ್ಥೆ ಇಲ್ಲದೆ ಪರದಾಡ­ಬೇಕಾಯಿತು.

ಗುರುಪುರ ಕೈಕಂಬ, ಎಡಪದವು, ಮರವೂರು, ಮಳವೂರು, ಪೆರ್ಮುದೆ ಮುಂತಾದ ಕಡೆ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಕಟೀಲು ದುರ್ಗಾಪರಮೇಶ್ವರಿ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ­ದಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.