ADVERTISEMENT

ಬಡಗನ್ನೂರಿನ ಮೋಡಿಕೆಗೆ ರಸ್ತೆ ಸಂಪರ್ಕ: ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 8:15 IST
Last Updated 19 ಮಾರ್ಚ್ 2012, 8:15 IST

ಪುತ್ತೂರು: ತಾಲ್ಲೂಕಿನ ಬಡಗನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬಡಗನ್ನೂರು ಗ್ರಾಮದ ಪಟ್ಟೆ ಸಮೀಪದ ಮುಂಡೋಲೆ ಮಸೀದಿ ಬಳಿಯಿಂದ ಮೋಡಿಕೆ ಎಂಬಲ್ಲಿಗೆ  ರಸ್ತೆ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿ ಅಲ್ಲಿನ ನಾಲ್ಕು ಕುಟುಂಬಗಳು  ಕಳೆದ ಒಂದು ವರ್ಷದಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸುತ್ತಾ ಅಲೆದಾಡುತ್ತಿವೆ.

ಮುಂಡೋಲೆ ಮಸೀದಿ ಬಳಿಯಿಂದ ಮೋಡಿಕೆ ಎಂಬಲ್ಲಿಗೆ ಸಣ್ಣದಾದ ಕಾಲು ದಾರಿಯೊಂದಿದ್ದು, ಅದು ಸಂಚಾರಕ್ಕೆ ಅಯೋಗ್ಯವಾಗಿದೆ. ಇದರಿಂದಾಗಿ ಸಮಸ್ಯೆಗೊಳಗಾಗಿರುವ ನಾಲ್ಕು ಕುಟುಂಬಗಳು  ರಸ್ತೆ ನಿರ್ಮಿಸಿಕೊಡಬೇಕೆಂದು ಗ್ರಾ.ಪಂ. ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಕಳೆದ ಒಂದು ವರ್ಷದಿಂದ ಅರ್ಜಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿ ಬರುತ್ತಿವೆ.

ಈ ಕಾಲುದಾರಿ ಖಾಸಗಿ ವ್ಯಕ್ತಿಗಳ ಜಮೀನಿನ ಮೂಲಕ ಹಾದು ಹೋಗುತ್ತಿದ್ದು  ಅವರು  ರಸ್ತೆ ನಿರ್ಮಿಸಲು ಅಡ್ಡಿಪಡಿಸುತ್ತಿರುವ ಹಿನ್ನೆಲೆಯಲ್ಲಿ  ರಸ್ತೆ ನಿರ್ಮಿಸಿಕೊಡಲು ಸಾಧ್ಯವಾಗುತ್ತಿಲ್ಲ  ಎಂದು ಸಮಜಾಯಿಕೆ ನೀಡುತ್ತಾ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ ಎಂಬುದು ಅಲ್ಲಿನ ಸ್ಥಳೀಯರ ಆರೋಪ.

ಖಾಸಗಿ ವ್ಯಕ್ತಿಗಳು ಕಾಲುದಾರಿ ಬಂದ್ ಮಾಡಿದರೆ ಸಮಸ್ಯೆ ಖಂಡಿತ ಎಂಬ ಆತಂಕವೂ ಈ ಕುಟುಂಬದ್ದು.
ವರ್ಷದ ಹಿಂದೆ ಅಲ್ಲಿನ ನಿವಾಸಿಗಳಾದ ಅಬ್ದುಲ್ ಖಾದರ್ ಮತ್ತು ಇಬ್ರಾಹಿಂ ಅವರು ರಸ್ತೆ ನಿರ್ಮಿಸಿಕೊಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದರು.ಇದೀಗ ಮೋಡಿಕೆಯ ರತ್ನಾವತಿ ಎಂಬವರು ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ಗ್ರಾ.ಪಂ. ಮತ್ತು ತಾ.ಪಂ.ಗೆ ಮನವಿ ಸಲ್ಲಿಸಿದ್ದಾರೆ. ಬಡವಳಾದ ತನಗೆ ಆಶ್ರಯ ಮನೆ ಮಂಜೂರಾಗಿದೆ.

ಆದರೆ ರಸ್ತೆ ಸಂಪರ್ಕವಿಲ್ಲದೆ ಮನೆ ನಿರ್ಮಿಸುವ ಪರಿಸ್ಥಿತಿಯಲ್ಲಿ ತಾನಿಲ್ಲ ಎಂದು ಅವರು ಅವಲತ್ತುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.