ADVERTISEMENT

ಬಿಜೆಪಿ– ಜೆಡಿಎಸ್‌ ಗೋಪ್ಯ ಸ್ನೇಹ: ಜಿಗ್ನೇಶ್

ತೊಕ್ಕೊಟ್ಟುವಿನಲ್ಲಿ ಸ್ವಾಭಿಮಾನಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 13:18 IST
Last Updated 29 ಏಪ್ರಿಲ್ 2018, 13:18 IST

ಉಳ್ಳಾಲ: ‘ಜೆಡಿಎಸ್ ನಾಯಕರು ಮೈಸೂರಿನಲ್ಲಿ ಬಿಜೆಪಿ ಜತೆಗೆ ಮೈತ್ರಿ ಮೂಡಿಸುವ ಸಂದೇಶ ನೀಡಿದ್ದಾರೆ. ಬಿಜೆಪಿಯ ಜತೆಗೆ ಮೈತ್ರಿ ಬೆಳೆಸುವುದಿಲ್ಲ ಅನ್ನುವುದನ್ನು ಘಂಟಾಘೋಷವಾಗಿ ಹೇಳಿದರೆ ಮಾತ್ರ ಜೆಡಿಎಸ್‌ಗೆ ಮತ ಚಲಾಯಿಸಿ’ ಎಂದು ಗುಜರಾತ್‌ನ ಶಾಸಕ ಜಿಗ್ನೇಶ್ ಮೇವಾನಿ ಹೇಳಿದರು.

ತೊಕ್ಕೊಟ್ಟು ಕಲ್ಲಾಪು ಯುನಿಟಿ ಸಭಾಂಗಣದಲ್ಲಿ ಶನಿವಾರ ಸಂವಿಧಾನ ಉಳಿವಿಗಾಗಿ ಕರ್ನಾಟಕ ದ.ಕ ಜಿಲ್ಲಾ ಸಮಿತಿ ಆಯೋಜಿಸಿದ್ದ ಸ್ವಾಭಿಮಾನಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂದೆ ಜೆಡಿಎಸ್ ಅಭ್ಯರ್ಥಿಯನ್ನು ಹಾಕುವ ಮೂಲಕ ಕಾಂಗ್ರೆಸ್ ಜತೆಗೆ ವೈರತ್ವ ಸಾಧಿಸಿದ್ದಾರೆ. ಇದು ಬಿಜೆಪಿ ಜತೆಗೆ ಮೈತ್ರಿ ಮಾಡುವ ಮುನ್ಸೂಚನೆಯಾಗಿದೆ. ಆದರೆ ರಾಜ್ಯದ ಜನತೆ ಜಾತ್ಯತೀತರನ್ನು ಬೆಂಬಲಿಸುವ ವಿಶ್ವಾಸವನ್ನು ಜೆಡಿಎಸ್ ವ್ಯಕ್ತಪಡಿಸಿದಲ್ಲಿ ಮಾತ್ರ ಜೆಡಿಎಸ್ ಗೆ ಮತ ಚಲಾಯಿಸಬೇಕಿದೆ’ ಎಂದರು.

ADVERTISEMENT

‘ಗುಜರಾತಿನಿಂದ ಡಿಫೆಕ್ಟಿವ್ ವಸ್ತುವನ್ನು ದೆಹಲಿಗೆ ಕಳುಹಿಸಿದ್ದೇವೆ ಅನ್ನುವ ವಿಚಾರದ ಕುರಿತು ಗುಜರಾತಿಗನಾಗಿ ವಿಷಾದವಿದೆ. ಈ ಬಗ್ಗೆ ಕ್ಷಮೆಯಾಚಿಸುತ್ತೇನೆ. ರಾಜ್ಯ ಚುನಾವಣೆಗಾಗಿ ಭೇಟಿಯಲ್ಲಿರುವ ಅಮಿತ್ ಶಾ ಜತೆಗೆ ಅಂಬಾನಿ, ಟಾಟ, ಬಿರ್ಲಾ ಎಲ್ಲರೂ ಇದ್ದಾರೆ. ಎಲ್ಲರೂ ವಿವಿಧ ರೀತಿಯಲ್ಲಿ ಮತ ಗಳಿಸಲು ತಂತ್ರಗಾರಿಕೆ ನಡೆಸುತ್ತಲಿದ್ದಾರೆ. ಈ ಚುನಾವಣೆ ಸೆಮಿಫೈನಲ್ ಆಗಿದೆ. ಹಿಂದೂ ಮತ್ತು ಮುಸ್ಲಿಂ ವಿಭಜನೆ ನಡೆಸುವ ರಾಜಕೀಯ ಪಕ್ಷವನ್ನು ಬೆಂಬಲಿಸದೆ ಮತ ಚಾಲಯಿಸಿ ದೇಶ ಉಳಿಸಬೇಕಿದೆ’ ಎಂದರು.

ನಟ ಪ್ರಕಾಶ್ ರೈ, ಮಾತನಾಡಿ, ‘ಜನತಾದಳ ಜಾತ್ಯತೀತ ಅನ್ನುವ ಸಿದ್ಧಾಂತವಿದೆ. ರಾಜ್ಯದಲ್ಲಿ 50-60 ಸೀಟು ಬಂದರೂ ರಾಜ್ಯ ಆಳುವ ಧೈರ್ಯವಿದೆ. ಆದರೆ, ಕನ್ನಡಿಗನ ಅನುಮತಿಯಿಲ್ಲದೆ ಕರ್ನಾಟಕವನ್ನು ಹಿಂದೆ ಮಾಡಿದಂತೆ ಕೋಮುವಾದಿ ಪಕ್ಷಕ್ಕೆ ಸೀಟುಗಳನ್ನು ಮಾರಿದರೆ ನಾವು ಸುಮ್ಮನೆ ಬಿಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.