ADVERTISEMENT

ಬ್ಯಾರಿ ಅಕಾಡೆಮಿ: ಕಲಾವಿದ, ಸಾಧಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 8:20 IST
Last Updated 23 ಜನವರಿ 2012, 8:20 IST

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಮೂರು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಬ್ಯಾರಿ ಭಾಷೆ, ಸಾಹಿತ್ಯ, ಕಲೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಅಕಾಡೆಮಿಯ ಅಧ್ಯಕ್ಷ ಎಂ.ಬಿ. ಅಬ್ದುಲ್ ರೆಹಮಾನ್ ಬೆಲ್ಲ ಹಂಚಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಬ್ಯಾರಿ ಸಮುದಾಯದಲ್ಲಿ ಸಾಧಕರಿಗೆ ಕಡಿಮೆಯಿಲ್ಲ. ಆದರೆ ಸಾಧಕರನ್ನು ಗುರುತಿಸುವ ಕೆಲಸ ಆಗಬೇಕಿದೆ. ಬ್ಯಾರಿ ಸಾಧಕರನ್ನು ಗುರುತಿಸಿ ಮತ್ತುಷ್ಟು ಸಾಧನೆ ಮಾಡಲು ಪ್ರೇರೇಪಿಸಬೇಕಿದೆ ಎಂದರು.

ಬ್ಯಾರಿ ಸಂಸ್ಕೃತಿ ಕನ್ನಡ ನಾಡಿನಲ್ಲಿ ಅತ್ಯಂತ ಶ್ರೀಮಂತವಾದುದು. ಕನ್ನಡ ನಾಡನ್ನು ಶ್ರೀಮಂತಗೊಳಿಸಿದ ಸಾಹಿತಿಗಳು, ಕಲಾವಿದರು ಬ್ಯಾರಿಗಳಾಗಿದ್ದಾರೆ. ಮೂರು ವರ್ಷಗಳ ಕಾಲ ಬ್ಯಾರಿ ಅಕಾಡೆಮಿಯು ಉತ್ತಮ ಸಾಧನೆಯನ್ನು ಮಾಡಿದೆ. ಅನೇಕ ಪ್ರಕಟಣೆಯನ್ನು ಹೊರತಂದಿದೆ. ಇದೇ ರೀತಿ ಸಾಧಕರನ್ನು ಗುರುತಿಸುವುದೂ ನಮ್ಮ ಕರ್ತವ್ಯವಾಗಿದ್ದು, ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಖಾಲಿದ್ ತಣ್ಣೀರ್‌ಬಾವಿ, ಹಮೀದ್ ಕಣ್ಣೂರು, ಸಮೀರ್ ಮೂಲ್ಕಿ, ಶೌಕತ್ ಅಲಿ, ಇಬ್ರಾಹಿ ಬಾತಿಷಾ, ಕಲಾ ಕ್ಷೇತ್ರದ ಹನೀಫ್ ಪುತ್ತೂರು, ಮಹಮ್ಮ ದಲಿ ತಣ್ಣೀರುಬಾವಿ, ನಾಟಕ ಕ್ಷೇತ್ರದ ಮುಹಮ್ಮದ್ ಶರೀಫ್ ಕಾಟಿಪಳ್ಳ, ಅಬೂಬಕ್ಕರ್ ಬಡ್ಡೂರು, ಝಕರಿಯಾ ವೇಣೂರು, ಮುಹಮ್ಮದ್ ಅಲಿ ಬಡ್ಡೂರು, ಅಬ್ದುಲ್ ಸತ್ತಾರ್, ಸಾಹಿತ್ಯ ಕ್ಷೇತ್ರದಲ್ಲಿ ಮುಹಮ್ಮದ್ ಅಶ್ರಫ್ ಅಪೋಲೋ, ಮಯರ್ಮ್ ಇಸ್ಮಾಯಿಲ್, ಅಬ್ದುಲ್ ರಝಾಕ್ ಅನಂತಾಡಿ, ಸಮಾಜ ಸೇವೆಯಲ್ಲಿ ರುಕಿಯಾ ಎಂ. ಅಲಿ, ಪತ್ರಿಕೋದ್ಯಮದಲ್ಲಿ ಅಬ್ದುಲ್ ಹಮೀದ್ ಪಡುಬಿದ್ರಿ ಅವರನ್ನು ಸನ್ಮಾನಿಸಲಾಯಿತು.

ಮಾಜಿ ಶಿಕ್ಷಣ ಸಚಿವ ಬಿ.ಎ. ಮೊಯಿದಿನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾರಿ ಸಮುದಾಯದಲ್ಲಿ ಸಾಹಿತ್ಯ ಸಾಧಕರು ಸಾಕಷ್ಟಿದ್ದಾರೆ. ಅವರು ಮತ್ತಷ್ಟು ಬರೆಯಬೇಕು. ಬ್ಯಾರಿ ಭಾಷೆಗೂ ಹೆಚ್ಚಿನ ಮಹತ್ವ ನೀಡಿ ಸಾಹಿತ್ಯ ಕೃಷಿ ಮಾಡಬೇಕು ಎಂದು ಕರೆಕೊಟ್ಟರು.

ಮುಹಮ್ಮದ್ ಕುಳಾಯಿ ರಚಿಸಿರುವ ಬ್ಯಾರಿ ಭಾಷೆಯಲ್ಲಿನ ಬ್ಯಾರಿ ಬಾಸೆಲ್ ಅರೇಬಿಯನ್ ನೈಟ್ಸ್ ಕೃತಿ ಬಿಡುಗಡೆ ಮಾಡಲಾಯಿತು.

ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಜಿ.ಎ. ಬಾವಾ, ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಗೋಳ್ತಮಜುಲು, ಯು.ಜೆ.ಎಂ.ಎ. ಹಕ್, ಸ್ಥಾಪಕಾಧ್ಯಕ್ಷ ಅಬ್ದುಲ್ ರಹೀಂ ಟಿ.ಕೆ. ಅತಿಥಿಗಳಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.