ADVERTISEMENT

ಭಾರಿ ಮಳೆ: ಮಧೂರು ದೇವಳಕ್ಕೆ ನುಗ್ಗಿದ ಮಧುವಾಹಿನಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2012, 12:05 IST
Last Updated 10 ಆಗಸ್ಟ್ 2012, 12:05 IST

ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ ಧಾರಾಕಾರ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಲ್ಲಿ ನೆರೆ ಹಾವಳಿ ಉಂಟಾಗಿದೆ.

ಕಾಸರಗೋಡಿನ ಮಧೂರು ಮದನಂತೇಶ್ವರ ಸಿದ್ಧಿ ವಿನಾಯಕ ಕ್ಷೇತ್ರ ಸಮೀಪದ ಮಧುವಾಹಿನಿ ನದಿಯ ಪ್ರವಾಹ ಕ್ಷೇತ್ರದ ಅಂಗಣಕ್ಕೆ ನುಗ್ಗಿದೆ. ಇದರಿಂದ ದೇವರ ಪೂಜಾ ಕಾರ್ಯಗಳಿಗೆ ಅಡ್ಡಿಯಾಯಿತು. ಭಕ್ತರು ದೇವರ ದರ್ಶನ ಪಡೆಯಲು ತೊಂದರೆ ಅನುಭವಿಸಿದರು. ಮಧುವಾಹಿನಿಯ ದಡದಲ್ಲಿರುವ ಗದ್ದೆಗಳಲ್ಲಿಯೂ ನೀರು ನಿಂತಿದೆ.

ತಳಂಗೆರೆ ಕಡವತ್, ಚೆಟ್ಟುಂಕುಳಿ, ಎರಿಯಾಲ್, ಕುಕ್ಕಾರ್ ಮೊದಲಾದ ಪ್ರದೇಶಗಳಲ್ಲಿ ನೆರೆ ಬಂದಿದೆ. ನೆಲ್ಲಿಕುಂಜೆ ಕಡಪ್ಪುರ, ಕೀಯೂರು, ಕುಂಬಳೆ ಕೊಯಿಪ್ಪಾಡಿ, ಉಪ್ಪಳ ಅದೀಕ, ಬಂಗ್ರಮಂಜೇಶ್ವರ, ಪಳ್ಳಿಕ್ಕೆರೆ, ಅಜಾನೂರು ತೀರ ಪ್ರದೇಶಗಳಲ್ಲಿ ಕಡಲ್ಕೊರೆತದ ಭೀತಿ ಸೃಷ್ಟಿಯಾಗಿದೆ.

ಮಳೆಯಬ್ಬರಕ್ಕೆ ಕಾಸರಗೋಡು ಸರ್ಕಾರಿ ಕಾಲೇಜಿನ ಆವರಣಗೋಡೆಯ ಮುಖ್ಯದ್ವಾರ ಕುಸಿದು ಬಿದ್ದಿದೆ.
ಎಡನೀರು ಸಮೀಪದ ನೆಲ್ಲಿಕಟ್ಟೆಯಲ್ಲಿ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದು 16 ಕಂಬಗಳಿಗೆ ಹಾನಿಯಾಗಿದೆ. ಮರದಡಿ ಇದ್ದ ರತೀಶ್ ಅವರ ಆಟೊ ರಿಕ್ಷಾ ನಜ್ಜುಗುಜ್ಜಾಗಿದ್ದು, ಬೇಡಡ್ಕದ ಶ್ರೀಧರ  ಗಾಯಗೊಂಡಿದ್ದಾರೆ. ವಿಷಯ ತಿಳಿದು ವಿದ್ಯುತ್ ಇಲಾಖೆ ವಿದ್ಯುತ್ ಸಂಪರ್ಕ ವಿಚ್ಛೇದಿಸಿ ಅಪಾಯ ತಪ್ಪಿಸಿತು.
ಕಾಸರಗೋಡು ರೈಲ್ವೆನಿಲ್ದಾಣಲ್ಲೆ ನೀರು ನುಗ್ಗಿ ಪಾರ್ಸೆಲ್ ಕಚೇರಿಯಲ್ಲಿದ್ದ ಸಾಮಗ್ರಿಗಳು ಒದ್ದೆಯಾದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.