ADVERTISEMENT

ಭ್ರಷ್ಟಾಚಾರದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 8:30 IST
Last Updated 17 ಆಗಸ್ಟ್ 2012, 8:30 IST

ಸುಳ್ಯ: ಬಿಜೆಪಿ ಧರ್ಮ, ದೇವರು, ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದೆ. ಭ್ರಷ್ಟಾಚಾರದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ತಂದು ಕೊಟ್ಟಿರುವುದು, ನೈಸರ್ಗಿಕ ಸಂಪತ್ತು ಲೂಟಿ ಹೊಡೆದಿರುವುದು ಬಿಜೆಪಿ ಸರ್ಕಾರದ ಸಾಧನೆ ಎಂದು ಎಐಸಿಸಿ ಕಾರ್ಯದರ್ಶಿ ವಿನಯಕುಮಾರ್ ಸೊರಕೆ ಟೀಕಿಸಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧಗೊಳ್ಳುವ ನಿಟ್ಟಿನಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಮಹತ್ವದ ತಯಾರಿ ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಸುಳ್ಯ ಪುರಭವನದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಯಾವಾಗಲೂ ಚುನಾವಣೆ ಕೆಲಸಗಳಲ್ಲಿ ಹಿಂದೆ, ಅಭಿವೃದ್ಧಿ ಕೆಲಸಗಳಲ್ಲಿ ಮುಂದೆ. ಆದರೆ ಬಿಜೆಪಿಯವರು ಅಧಿಕಾರಿಗಳ ಮೇಲೆ ಪ್ರಭಾವ ಬೀರುವುದು, ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ರದ್ದುಗೊಳಿಸುವುದು ಮೊದಲಾದ ಮಾರ್ಗಗಳ ಮೂಲಕ ಚುನಾವಣೆ ಮೇಲೆ ಪ್ರಭಾವ ಬೀರಿ ಲಾಭ ಮಾಡಿಕೊಳ್ಳುತ್ತಾರೆ. ಅದನ್ನು ಈ ಬಾರಿ ಹಿಮ್ಮೆಟ್ಟಿಸಬೇಕು. ತಮ್ಮ ತಮ್ಮ ಕ್ಷೇತ್ರಗಳಲ್ಲಿ  ಒಗ್ಗಟ್ಟಾಗಿ ನಿಂತು ಹೋರಾಟ ಮಾಡಿದರೆ ಕಾಂಗ್ರೆಸ್‌ಗೆ ಸಕಾರಾತ್ಮವಾಗಬಹುದು ಎಂದು ಅವರು  ಕರೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಮಾಜಿ ಅಧ್ಯಕ್ಷ ಭರತ್ ಮುಂಡೋಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎನ್.ಜಯಪ್ರಕಾಶ್ ರೈ, ಮಹಿಳಾ ಘಟಕದ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಕೆಪಿಸಿಸಿ ಸದಸ್ಯ ಡಾ.ರಘು, ಪ.ಪಂ. ಸದಸ್ಯ ದಿನೇಶ್ ಅಂಬೆಕಲ್ಲು  ಪಕ್ಷ ಸಂಘಟನೆಯ ಬಗ್ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.