ADVERTISEMENT

ಮಕ್ಕಳೇ ವಿಶೇಷ..ಮಕ್ಕಳಿಗೆ ಕ್ರೀಡೆಯೇ ವಿಶೇಷ..

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 10:40 IST
Last Updated 2 ಫೆಬ್ರುವರಿ 2011, 10:40 IST

ಮಣಿಪಾಲ(ಉಡುಪಿ):  ಓಟಕ್ಕೆ ಸಿದ್ಧರಾಗಿ ನಿಂತ ಇವರಲ್ಲಿ ಕೆಲವರು ನೀಲಿ ಬಣ್ಣದ ಅಂಗಿ ಧರಿಸಿದ್ದರೆ, ಇನ್ನು ಕೆಲವರು ಅದೇ ಬಣ್ಣದ ಬನಿಯನ್ ಧರಿಸಿದ್ದರು. ಕೆಲವು ಮಕ್ಕಳ ಕಾಲಲ್ಲಿ ಕ್ಯಾನ್ವಾಸ್ ಶೂ ಇತ್ತು, ಇನ್ನು ಕೆಲವರು ಬರಿಗಾಗಲಲ್ಲಿ ಇದ್ದರು. ಆದರೆ ಮೊಗದಲ್ಲಿ ಅದೇನೂ ಉಲ್ಲಾಸ, ಉತ್ಸಾಹ, ಎಲ್ಲವನ್ನೂ ಗೆದ್ದುಬಿಟ್ಟೇನು ಎನ್ನುವ ವಿಶ್ವಾಸ...

ಆನ್ ಯುವರ್ ಮಾರ್ಕ್, ರೆಡಿ... ಗೆಟ್, ಸೆಟ್, ಗೋ...ಎಂದು ವಿಷಲ್ ಊದಿದ ಕೂಡಲೇ ಕೆಲವು ಮಕ್ಕಳು ಓಡಿದರು, ಕೆಲವರನ್ನು ಅಲ್ಲಿದ್ದವರು ಓಡಿ ಓಡಿ ಎಂದು ಹುರಿದುಂಬಿಸಿದರು, ಇನ್ನು ಕೆಲವರು ಧ್ವನಿ ಬಂದತ್ತ ಮುಖಮಾಡಿ ಒಡಲಾರದೇ ಮೆಲ್ಲಗೆ ಸಾಗಿದರು... ಇಲ್ಲಿ ನೆರದಿದ್ದವರಿಗೆ ಈ ಮಕ್ಕಳೇ ವಿಶೇಷ...ಈ ಮಕ್ಕಳಿಗೋ ಈ ಕ್ರೀಡೆಯೇ ವಿಶೇಷ...

 ಮಣಿಪಾಲ ಎಂಐಟಿ ಅಥ್ಲೆಟಿಕ್ ಮೈದಾನದಲ್ಲಿ ಬೆಳಗಿನ ಎಳೆ ಬಿಸಿಲು.ಆ ಮೈದಾನದಲ್ಲಿ ವಿವಿಧ ಕಡೆಗಳಿಂದ ಬಂದ ಸಮವಸ್ತ್ರದಲ್ಲಿನ ಚಿಣ್ಣರು, ಯುವಕರು. ಜಿಲ್ಲಾ ಮಟ್ಟದ ‘ವಿಶೇಷ ಮಕ್ಕಳ ಒಲಂಪಿಕ್ಸ್’ ಕ್ರೀಡಾಕೂಟಕ್ಕಾಗಿ ಸೇರಿದ್ದ ಅವರಲ್ಲಿ ಮೊದಲಿಗೆ ಪ್ರಾರಂಭವಾಗಿದ್ದು 100 ಮೀಟರ್ ಓಟ. ಟ್ರ್ಯಾಕ್‌ನಲ್ಲಿ ರೆಡಿಯಾಗಿ ನಿಂತವರಿಗೆ ವಿಷಲ್ ಹಾಕಿದ ಕೂಡಲೇ ಕೆಲವರಿಗೆ ಓಡಲು ಕಷ್ಟವೇ ಆಯಿತು. ಅದನ್ನು ಗ್ರಹಿಸಲಿಕ್ಕೆ ಕೆಲಕ್ಷಣ ತೆಗೆದುಕೊಂಡರು. ಇವರೆಲ್ಲ ಸಾಮಾನ್ಯರಲ್ಲ ‘ವಿಶೇಷ ಮಕ್ಕಳು’ ಎಂಬ ಮಮತೆ ಬೇರೆ. ಅವರನ್ನು ನೋಡಿಕೊಳ್ಳಲು ಶಿಕ್ಷಕರು, ಪೋಷಕರು ಅಲ್ಲಿದ್ದರು. 

 ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಮತ್ತು ಜಿಲ್ಲಾ ಕ್ರೀಡಾ ಇಲಾಖೆ, ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಂಗಳವಾರದಿಂದ ಹಮ್ಮಿಕೊಂಡಿರುವ ವಿಶೇಷ ಮಕ್ಕಳ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಡ ದೃಶ್ಯವಿದು. ಈ ಕ್ರೀಡಾಕೂಟದಲ್ಲಿ ಜಿಲ್ಲೆಯ 14 ವಿಶೇಷ ಶಾಲೆಯ 212 ‘ವಿಶೇಷ ಮಕ್ಕಳು’ ಪಾಲ್ಗೊಂಡಿದ್ದರು.

ಕ್ರೀಡಾಕೂಟವನ್ನು ಉದ್ಘಾಟಿಸಿದ ಮಣಿಪಾಲ ವಿವಿ ಸಹ ಕುಲಪತಿ ಡಾ.ರಾಮನಾರಾಯಣ್ ಮಾತನಾಡಿ, ಕ್ರೀಡೆಯಲ್ಲಿ ಕ್ರೀಡಾಮನೋಭಾವದಿಂದ ಸ್ಪರ್ಧಿಸುವುದು ಮುಖ್ಯ. ಇದು ಸವಾಲಲ್ಲ, ಇದೊಂದು ಮಕ್ಕಳಿಗೆ ಅವಕಾಶ, ಇದನ್ನು ಮಕ್ಕಳು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹೇಳಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.

ಜಿಲ್ಲಾಧಿಕಾರಿ ಹೇಮಲತಾ ಮಾತನಾಡಿ, ಈ ‘ವಿಶೇಷ ಮಕ್ಕಳು’ ದೇವರಿಗೆ ತುಂಬ ಹತ್ತಿರದವರು. ನಮ್ಮ ರಾಜ್ಯದ ವಿಶೇಷ ಮಕ್ಕಳು ರಾಷ್ಟ್ರಮಟ್ಟದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪ್ರತಿ ವರ್ಷವೂ ಏನಾದರೂ ಸಾಧನೆ ಮಾಡುತ್ತ ಇರುತ್ತಾರೆ. ಇಲ್ಲಿ ಭಾಗವಹಿಸಿದ ಮಕ್ಕಳು ರಾಜ್ಯಮಟ್ಟದಲ್ಲಿಯೂ ಪಾಲ್ಗೊಂಡು ಕೀರ್ತಿಶಾಲಿಗಳಾಗಿ ಎಂದು ಹಾರೈಸಿದರು.


ಇದೇ ಸಂದರ್ಭದಲ್ಲಿ ಆಶಾ ನಿಲಯದ ಮಕ್ಕಳಾದ ರಾಜೇಶ್ವರಿ ಹಾಗೂ ಕವಿತಾ ಜಿಲ್ಲಾಧಿಕಾರಿಯವರಿಗೆ  ಒಲಿಂಪಿಕ್ಸ್ ಕ್ರೀಡಾ ಜ್ಯೋತಿಯನ್ನು ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಆಗಮಿಸಿದ ಶಾಸಕ ರಘುಪತಿ ಭಟ್ ಮಾತನಾಡಿ, ವಿಶೇಷ ಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇಂತಹ ಕ್ರೀಡಾಕೂಟ ಬಹಳ ಅವಶ್ಯಕ. ವಿಶೇಷ ಮಕ್ಕಳನ್ನು ನೋಡಿಕೊಳ್ಳುವುದು ಕೂಡ ಬಹಳ ಕಷ್ಟದ ಕೆಲಸ. ಇವರನ್ನು ‘ಬುದ್ಧಿಮಾಂದ್ಯ’ಮಕ್ಕಳು ಎಂದು ಕರೆಯಬಾರದು ಎನ್ನುವ ಕಾರಣಕ್ಕೇ ಸರ್ಕಾರ ‘ವಿಶೇಷ ಮಕ್ಕಳು’ ಎಂದು ಕರೆಯುತ್ತಿದೆ ಎಂದರು.

ವಿಶೇಷ ಮಕ್ಕಳಾದ ರಾಷ್ಟ್ರೀಯ ಅಥ್ಲೀಟ್ ಅರ್ಚನಾ ಎಂ.ಜೆ. ಹಾಗೂ ಪ್ರಮೀಳಾ ಪಿಂಟೋ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಏರ್ ಕಮಾಂಡರ್ ಎ.ವಿ.ಎಸ್. ರಾವ್, ಇಂದಿರಾ ಬಲ್ಲಾಳ್,  ರಾಜೇಶ್ ಭಕ್ತ, ಅಂಗವಿಕಲರ ಒಕ್ಕೂಟದ ಅಧ್ಯಕ್ಷ ವಿಲಿಯಂ ಗೋಮ್ಸ್, ಕ್ರೀಡಾಕೂಟದ ಜಿಲ್ಲಾ ಸಂಯೋಜಕ ಕೆ.ಎಸ್.ಜಯವಿಠ್ಠಲ, ಸಾಧನಾ ಕಿಣಿ, ರಮೇಶ್ ನಾಯಕ್ ಉಪಸ್ಥಿತರಿದ್ದರು.ಅಥ್ಲೆಟಿಕ್, 100 ಮೀಟರ್ ಓಟ, 100 ಮೀಟರ್ ನಡಿಗೆ, ಉದ್ದಜಿಗಿತ, ರಿಲೇ, ಶಾಟ್‌ಪುಟ್ ಹೀಗೆ ಬಗೆ ಬಗೆಯ ಕ್ರೀಡೆಗಳನ್ನು ಇಲ್ಲಿ ಆಯೋಜಿಸಲಾಗಿದ್ದು ಬುಧವಾರವೂ ಕ್ರೀಡಾಕೂಟ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.