ADVERTISEMENT

ಮೀನುಗಾರರಿಗೆ ಪ್ಯಾಕೇಜ್: ಭರವಸೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2012, 7:40 IST
Last Updated 27 ಮಾರ್ಚ್ 2012, 7:40 IST

ಮಂಗಳೂರು: ಎಂಎಸ್‌ಇಜೆಡ್‌ನ ತ್ಯಾಜ್ಯ ಗಳನ್ನು ಸಮುದ್ರಕ್ಕೆ ಬಿಡುವ ಪೈಪ್‌ಲೈನ್ ಅಳವಡಿಕೆಗೆ ಸುರತ್ಕಲ್ ಭಾಗದಲ್ಲಿ ಮೀನುಗಾರರು ತೀವ್ರ ವಿರೋಧ ವ್ಯಕ್ತಪಡಿಸಿ ರುವುದರಿಂದ ಎಚ್ಚೆತ್ತಿರುವ ಜಿಲ್ಲಾಡಳಿತ, ಮೀನುಗಾರಿಗೆ ಸೂಕ್ತ ಪ್ಯಾಕೇಜ್ ಮೂಲಕ ನಷ್ಟ ಪರಿಹಾರದ ಕೊಡುಗೆ ಮುಂದಿಟ್ಟಿದೆ.

ಪಣಂಬೂರು ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಬಿ.ಕೆ.ವಾಸುದೇವ್ ಅವರ ನೇತೃತ್ವದಲ್ಲಿ ಪಣಂಬೂರು, ಚಿತ್ರಾಪುರ, ಮೀನಕಳಿಯ, ಸುರತ್ಕಲ್, ಮುಕ್ಕ ಮತ್ತಿತರ ಭಾಗದ ಸಾಂಪ್ರದಾಯಿಕ ಮೀನುಗಾರರು ಸೋಮವಾರ ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪ ಗೌಡ ಅವರನ್ನು ಭೇಟಿ ಮಾಡಿದಾಗ ಜಿಲ್ಲಾಧಿಕಾರಿ ಅವರಿಂದ ಈ ಭರವಸೆ ವ್ಯಕ್ತವಾಯಿತು.

ಎಂಎಸ್‌ಇಜೆಡ್‌ಗಾಗಿ ಪೈಪ್‌ಲೈನ್ ಅಳವ ಡಿಕೆ ಆಗಲೇಬೇಕು. ಆ ಕೆಲಸವನ್ನು ಕೈಬಿಡುವಂತಿಲ್ಲ. ಇದಕ್ಕೆ ಪ್ರತಿಯಾಗಿ ಮೀನು ಗಾರರಿಗೆ ಸೂಕ್ತ ಬದಲಿ ವ್ಯವಸ್ಥೆ ಮಾಡ ಬಹುದು. ತಾವು ಇದರ ಹೊಣೆ ಹೊತ್ತು ಕೊಂಡು ಸೂಕ್ತ ಸೌಲಭ್ಯ ಸಿಗುವಂತೆ ನೋಡಿ ಕೊಳ್ಳುವುದಾಗಿ ಜಿಲ್ಲಾಧಿಕಾರಿ ಹೇಳಿದರು.

ಈಗಾಗಲೇ ಸಮುದ್ರಕ್ಕೆ ಬಿಡುತ್ತಿರುವ ತ್ಯಾಜ್ಯಗಳಿಂದ ಮೀನಿನ ಸಂತತಿ ನಶಿಸಿದೆ. ಎಂಎಸ್‌ಇಜೆಡ್ ಬಂದ ಬಳಿಕ ನಾಡದೋಣಿ ಮೀನುಗಾರಿಕೆಯನ್ನೇ ನಂಬಿಕೊಂಡವರ ಬದುಕು ಶೋಚನೀಯವಾಗುವುದು ನಿಶ್ಚಿತ ಎಂದು ಮೀನುಗಾರರು ಅಳಲು ತೋರಿಕೊಂಡರು.

ಮೀನುಗಾರರಿಗೆ ಸೂಕ್ತ ತರಬೇತಿ ಕೊಟ್ಟು, ಉದ್ಯೋಗಕ್ಕೆ ಸೇರಿಸಿಕೊಳ್ಳಬಹುದು ಎಂದು ಚನ್ನಪ್ಪ ಗೌಡ ಅವರು ತಿಳಿಸಿದರು. ಮೀನುಗಾರಿಕೆಯಲ್ಲಿ 65 ವರ್ಷದವರೂ ತೊಡಗಿಕೊಳ್ಳುವುದರಿಂದ ಅವರಿಗೆ ಕೆಲಸ ಕೊಡಿಸಲು ಸಾಧ್ಯವೇ ಎಂದು ನಿಯೋಗದಲ್ಲಿದ್ದವರು ಪ್ರಶ್ನಿಸಿದರು.

20 ಮಂದಿಯ ಗುಂಪು ರಚಿಸಿ ಅವರಿಗೆ ಯಾಂತ್ರೀಕೃತ ದೋಣಿಗಳ ಖರೀದಿಗೆ ಸಾಲ ಸೌಲಭ್ಯ ಒದಗಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಲಿದೆ, ಬಂಡವಾಳದ ಒಂದಿಷ್ಟು ಭಾಗವನ್ನು ಮಾತ್ರ ಮೀನುಗಾರರು ತೊಡಗಿಸಿದರೆ ಸಾಕು. ಈ ಪ್ರಸ್ತಾಪ ಒಪ್ಪಿಗೆಯಾದರೆ ಅದರ ಬಗ್ಗೆ ಶೀಘ್ರ ಕಾರ್ಯತಂತ್ರ ರೂಪಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾಡಳಿತ ನೀಡಿದ ಈ ಕೊಡುಗೆ ಮೀನುಗಾರರಿಗೆ ಒಪ್ಪಿಗೆಯಾಗುವಂತೆ ಕಂಡಿದ್ದು, ಈ ಪ್ರಸ್ತಾವದ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರವುದಾಗಿ ಮೀನುಗಾರರು ತಿಳಿಸಿದರು.

ಆದರೆ ಪರಿಹಾರ ಪ್ಯಾಕೇಜ್‌ಗೆ ಸ್ಪಷ್ಟ ರೂಪ ಸಿಗುವವರೆಗೆ ಎಂಎಸ್‌ಇಜೆಡ್ ಪೈಪ್‌ಲೈನ್ ಕಾಮಗಾರಿ ಆರಂಭಕ್ಕೆ ಅವಕಾಶ ನೀಡಲಾಗದು ಎಂದು ಮೀನುಗಾರರು ಸ್ಪಷ್ಟಪಡಿಸಿದರು.

ನಿಯೋಗದಲ್ಲಿ ವಾಸುದೇವ್ ಜತೆ ವಾಮನ ಅಮೀನ್, ಯತೀಶ್ ಬೈಕಂಪಾಡಿ, ದಿನೇಶ್ ಪಣಂಬೂರು ಮತ್ತಿತರರು ಇದ್ದರು.

ಎಂಎಸ್‌ಇಜೆಡ್ ಪೈಪ್‌ಲೈನ್ ಅಳವಡಿಸಲು ಕಳೆದ ಗುರುವಾರ ಬಾರ್ಜ್ ಮೇಲಿನ ಯಂತ್ರ ಸಿದ್ಧತೆ ನಡೆಸುತ್ತಿದ್ದಂತೆಯೇ ಹತ್ತಾರು ದೋಣಿ ಗಳಲ್ಲಿ ತೆರಳಿದ ಮೀನುಗಾರರು ತೀವ್ರ ಪ್ರತಿ ಭಟನೆ ನಡೆಸಿದ್ದರು. ಬೆಚ್ಚಿದ ಗುತ್ತಿಗೆ ದಾರರು ಯಂತ್ರ ಸಮೇತ ಸ್ಥಳದಿಂದ ಕಾಲ್ಕಿತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.