ADVERTISEMENT

ಮುಳ್ಳಿನ ಹಾದಿ ಕ್ರಮಿಸಿ ಪದಕ ಪಡೆದರು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2018, 6:03 IST
Last Updated 27 ಫೆಬ್ರುವರಿ 2018, 6:03 IST
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಘಟಿಕೋತ್ಸವದಲ್ಲಿ ರ‍್ಯಾಂಕ್‌ ವಿಜೇತರಾದ ಚಂದನಾ ಕೆ.ಎಸ್‌. ಅವರು ಕುಲಪತಿ ಪ್ರೊ.ಕೆ.ಭೈರಪ್ಪ ಅವರಿಂದ ಪದವಿ ಸ್ವೀಕರಿಸಿದರು. ಪರೀಕ್ಷಾಂಗ ಕಲುಸಚಿವ ಪ್ರೊ.ಎ.ಎಂ.ಖಾನ್‌, ಸಿಂಗಪುರದ ನಾನ್ಯಾಂಗ್‌ ವಿವಿ ಅಧ್ಯಕ್ಷ ಪ್ರೊ.ಸುಬ್ರ ಸುರೇಶ್‌, ಕುಲಸಚಿವ ಡಾ. ನಾಗೇಂದ್ರ ಪ್ರಕಾಶ್ ಇದ್ದರು. ಪ್ರಜಾವಾಣಿ ಚಿತ್ರ
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಘಟಿಕೋತ್ಸವದಲ್ಲಿ ರ‍್ಯಾಂಕ್‌ ವಿಜೇತರಾದ ಚಂದನಾ ಕೆ.ಎಸ್‌. ಅವರು ಕುಲಪತಿ ಪ್ರೊ.ಕೆ.ಭೈರಪ್ಪ ಅವರಿಂದ ಪದವಿ ಸ್ವೀಕರಿಸಿದರು. ಪರೀಕ್ಷಾಂಗ ಕಲುಸಚಿವ ಪ್ರೊ.ಎ.ಎಂ.ಖಾನ್‌, ಸಿಂಗಪುರದ ನಾನ್ಯಾಂಗ್‌ ವಿವಿ ಅಧ್ಯಕ್ಷ ಪ್ರೊ.ಸುಬ್ರ ಸುರೇಶ್‌, ಕುಲಸಚಿವ ಡಾ. ನಾಗೇಂದ್ರ ಪ್ರಕಾಶ್ ಇದ್ದರು. ಪ್ರಜಾವಾಣಿ ಚಿತ್ರ   

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ 36ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಮತ್ತು ಐದು ನಗದು ಬಹುಮಾನಗಳನ್ನು ಪಡೆದ ಚಂದನಾ ಕೆ.ಎಸ್‌. ಅವರಿಗೆ ಬಲಗಣ್ಣು ಮಾತ್ರ ತುಸುವೇ ಕಾಣುತ್ತದೆ. ಕನ್ನಡದ ಮೇಲಿನ ಪ್ರೀತಿಯಿಂದ ಅವರು ಕನ್ನಡ ಎಂ.ಎ.ಆಯ್ಕೆ ಮಾಡಿಕೊಂಡವರು.

ಓದು ಎಂದರೆ ಅಪಾರ ಪ್ರೀತಿ. ಶಿವರಾಮ ಕಾರಂತರಿಂದ ಹಿಡಿದು ಪೂರ್ಣಚಂದ್ರ ತೇಜಸ್ವಿಯವರೆಗೆ ಕಾದಂಬರಿಗಳನ್ನು ಓದಿದ್ದಾರೆ. ಈಗಂತೂ ಕೆ.ಎನ್‌.ಗಣೇಶಯ್ಯನವರ ಕಾದಂಬರಿಗಳಿಗೆ ಕಾಯುತ್ತಾ ಇರುತ್ತೇನೆ ಎನ್ನುವ ಅವರ ಮನೆಯಲ್ಲಿ ಟೀವಿ ಇಲ್ಲ. ‘ಕಪಾಟುಗಟ್ಟಲೆ ಪುಸ್ತಕಗಳನ್ನು ಪೇರಿಸಿಟ್ಟಿದ್ದಾಳೆ’ ಎನ್ನುತ್ತಾರೆ ಅವರಮ್ಮ ಸೌದಾಮಿನಿ.

ಅಪ್ಪ ಶ್ರೀಕೃಷ್ಣ ಅಹಿತಾನಲ. ‘ಪರೀಕ್ಷೆ ಹತ್ರ ಬಂದಾಗ ಒಂದು ಸರ್ತಿ ಮಾತ್ರ ಓದುತ್ತೇನೆ. ಹೆಚ್ಚು ಓದಿದರೆ ಕಣ್ಣು ದಣಿಯುತ್ತದೆ.’ ಎನ್ನುವ ಅವರು ಕುಂದಾಪುರದ ಕೋಟ ನಿವಾಸಿ.

ADVERTISEMENT

ಎಂ.ಕಾಂ.ನಲ್ಲಿ ರ‍್ಯಾಂಕ್‌ ಪಡೆದು ವೇದಿಕೆ ಇಳಿಯುತ್ತಿದ್ದ ಬಂಟ್ವಾಳದ ಝರೀನಾ ಬಾನು ಅವರ ಗಂಟಲು ಕಟ್ಟಿಬಂದಿತ್ತು. ಕೂಲಿ ಕೆಲಸ ಮಾಡುತ್ತಿದ್ದ ಅಪ್ಪ ಇರೋಬರೋ ಹಣವನ್ನೆಲ್ಲ ಖರ್ಚು ಮಾಡಿ ಓದಿಸಿದ್ದರು. ಆದರೆ ಪದವಿ ಮಗಿಯುತ್ತಲೇ ಅಪ್ಪ ತೀರಿಕೊಂಡಿದ್ದರು. ಹುಡುಗಿಯರು ಶಿಕ್ಷಣ ಪಡೆಯಬೇಕು ಎಂಬ ಅಪ್ಪನ ಆಸೆಯೇ ಝರೀ
ನಾರಿಗೆ ಓದು ಮುಂದುವರಿಸಲು ಪ್ರೇರಣೆ. ಅವಿಭಕ್ತ ಕುಟುಂಬದಲ್ಲಿದ್ದರೂ, ಅಮ್ಮ ಸಫಿಯಾ ನಿರಂತರ ಬೀಡಿ ಕಟ್ಟಿ ಪತಿಯ ಕನಸು ನನಸು ಮಾಡಲು ಮಗಳಿಗೆ ನೆರವಾಗಿದ್ದರು. ‘ಇವತ್ತು ಅಪ್ಪ ಇರಬೇಕಿತ್ತು’ ಎಂದು ಮೆತ್ತಗೆ ಹೇಳಿಕೊಂಡರು. ‌

ಇಂಡಸ್ಟ್ರಿಯಲ್‌ ಕೆಮಿಸ್ಟ್ರಿಯಲ್ಲಿ ಎಂ.ಎಸ್ಸಿ ಓದಿದ ಶಕುಂತಲ ಅವರ ಕೈಯಲ್ಲಿ ಎರಡು ಚಿನ್ನದ ಪದಕಗಳಿದ್ದವು. ಬ್ರಹ್ಮಾವರದ ಬಡ ಕುಟುಂಬದಲ್ಲಿ ಬೆಳೆದ ಶಕುಂತಲ ಅವರಿಗೆ ಉಪನ್ಯಾಸಕರಿಂದ ಮತ್ತು ಸಾಮಾಜಿಕ ಕ್ಷೇತ್ರದಿಂದ ದೊರೆತ ಹಣಕಾಸಿನ ನೆರವಿನಿಂದ ಶಿಕ್ಷಣ ಪೂರೈಸುವುದು ಸಾಧ್ಯವಾಗಿದೆ.

‘ಮೊದಲ ವರ್ಷದಲ್ಲಿ ಶಿಕ್ಷಕರು ಮತ್ತು ಟ್ರಸ್ಟ್‌ನ ನೆರವು ದೊರೆಯಿತು. ಎರಡನೇ ವರ್ಷ ಎ. ಸದಾನಂದ ಶೆಟ್ಟಿ ಅವರು ವಿವಿ ಶುಲ್ಕ ನೀಡಿದರು. ಅಪ್ಪ ಇಲ್ಲ. ಅಮ್ಮನೇ ನನ್ನ ಓದಿಗೆ ಒತ್ತಾಸೆ. ಇದೀಗ ಸರ್ಕಾರದ ಇನ್‌ಸ್ಪೈರ್‌ ಫೆಲೋಶಿಪ್‌ ಮೂಲಕ ರಸಾಯನ ವಿಜ್ಞಾನದಲ್ಲಿ ಸಂಶೋಧನೆ ಆರಂಭಿಸಬೇಕೆಂದಿದ್ದೇನೆ.’ ಎನ್ನುವ ಶಕುಂತಲ, ‘ಉದ್ಯೋಗ ದೊರೆತ ಕೂಡಲೇ ನನ್ನಂತೆಯೇ ಬಡತನದಲ್ಲಿ ಓದುವ ವಿದ್ಯಾರ್ಥಿಗಳಿಗೆ ನೆರವಾಗುತ್ತೇನೆ’ ಎನ್ನುತ್ತಾರೆ.

ಕನ್ನಡ ಎಂ.ಎ.ಯಲ್ಲಿ 1 ಚಿನ್ನ, ಐದು ನಗದು ಬಹುಮಾನ ಗೆದ್ದ ನವ್ಯಶ್ರೀ ಕೂಡ ಬಾಲ್ಯದಲ್ಲಿ ಬಡತನ ಕಂಡವರು. ಟ್ಯಾಂಕರ್‌ ಚಾಲಕ ಅಪ್ಪ ಸದಾಶಿವ ಅವರ ದುಡಿಮೆ ಶಿಕ್ಷಣಕ್ಕೆ ಸಾಲುತ್ತಿರಲಿಲ್ಲ. ‘ಆ ಬಡತನವನ್ನು ದಾಟಿ ಅಕ್ಕ ಮತ್ತು ಅಣ್ಣ ಕೆಲಸಕ್ಕೆ ಸೇರಿದ್ದರಿಂದ ಇಂದು ನಾನು ನೆಮ್ಮದಿಯಿಂದ ಸ್ನಾತಕೋತ್ತರ ಪದವಿ ಪಡೆಯುವುದು ಸಾಧ್ಯವಾಯಿತು’ ಎನ್ನುವ ಅವರಿಗೆ ಉಪನ್ಯಾಸಕಿ ಆಗುವಾಸೆ. ಪ್ರಸ್ತುತ ಆಳ್ವಾಸ್‌ ಕಾಲೇಜಿನಲ್ಲಿ ಉಪನ್ಯಾಸಕಿ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.