ADVERTISEMENT

ಮೊದಲು ಮಗು; ನಂತರ ಮದುವೆ!

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 12:10 IST
Last Updated 18 ಜನವರಿ 2011, 12:10 IST

ಸುಳ್ಯ: ಪ್ರೇಮಿಗಳಿಬ್ಬರು ಆತುರಕ್ಕೆ ಬಿದ್ದು ಮೊದಲಿಗೇ ಮಗು ಮಾಡಿಕೊಂಡಿದ್ದವರು, ತಗಾದೆ ಠಾಣೆ ಮೆಟ್ಟಿಲೇರಿದ ಬಳಿಕ ದೇವಸ್ಥಾನದಲ್ಲಿ ಹಾರ ಬದಲಿಸಿಕೊಂಡು ‘ದಂಪತಿ’ಗಳಾದ ಅಪರೂಪದ ಪ್ರಸಂಗ ಪಟ್ಟಣದಲ್ಲಿ ನಡೆದಿದೆ.

ಪ್ರೇಯಸಿಗೆ ಮಗುವಾದ ಬಳಿಕ ಮದುವೆಗೆ ನಿರಾಕರಿಸಿದ್ದ ‘ಅಪ್ಪ’ ಮಹಾಶಯ ವಿರುದ್ಧ ‘ಅಮ್ಮ’ನ ಪೋಷಕರು ಪೋಲೀಸ್ ಠಾಣೆ ಮೆಟ್ಟಿಲೇರಿದರು. ಈಗ ಪ್ರಕರಣ ಮದುವೆಯೊಂದಿಗೆ ಸುಖಾಂತ್ಯ ಕಂಡಿದೆ. ಅಪ್ಪ-ಅಮ್ಮನ ಮದುವೆಗೆ ಒಂದು ತಿಂಗಳ ಪುತ್ರನೇ ಸಾಕ್ಷಿಯಾಗಿದ!

ಅರಂತೋಡು ಗ್ರಾಮದ ಉಳುವಾರು ಮಾಧವ ಗೌಡ ಅವರ ಪುತ್ರಿ ನವ್ಯಾ ಮತ್ತು ಮಂಗಳೂರು ಕೂಳೂರು ಬಳಿಯ ಪಂಜಿಮೊಗರು ನಿವಾಸಿ ಚಂದ್ರಯ್ಯ ಭಂಡಾರಿ ಅವರ ಪುತ್ರ ಪ್ರಿಯಾಸ್ ಭಂಡಾರಿ, ಇಲ್ಲಿನ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಸಪ್ತಪದಿ ತುಳಿದರು. ಕೆಲ ಸಮಯದ ಹಿಂದೆ ಮೈಸೂರಿನಲ್ಲಿ ಹೋಂ ನರ್ಸ್ ಆಗಿದ್ದ ನವ್ಯ, ಕಲ್ಲುಗುಂಡಿಯಲ್ಲಿದ್ದ ಮಾವನ ಮನೆಗೆ ಆಗ್ಗಾಗ್ಗೆ ಬರುತ್ತಿದ್ದಳು. ಆಗ ಪ್ರಿಯಾಸ್ ಪರಿಚಯವಾಗಿದ್ದ. ಆಗ ಆರಂಭಗೊಂಡ ಪ್ರೇಮ ‘ಬಲಿತ; ಪರಿಣಾಮ ನವ್ಯ ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದಳು. ಅಲ್ಲಿಯವರೆಗೂ ‘ಸಂತೃಪ್ತ’ ಪ್ರೇಮಿಯಾಗಿದ್ದ ಪ್ರಿಯಾಸ್, ಮದುವೆಗೆ ಅದೇಕೋ ನಿರಾಕರಿಸಿದ.

ಈ ಬಗ್ಗೆ ನವ್ಯ ಪೋಷಕರು ಸುಳ್ಯ ಠಾಣೆಗೆ ದೂರು ನೀಡಿದರು. ಅಷ್ಟರಲ್ಲಾಗಲೇ ಕೃಷ್ಣನೂರು ಉಡುಪಿ ಸೇರಿದ್ದ ಪ್ರಿಯಾಸ್, ಕಡೆಗೂ ಪೋಲೀಸರ ಕೈಗೆ ಸಿಕ್ಕಿಬಿದ್ದ.ಆದರೆ, ಪ್ರಿಯಾಸ್, ಖಾಕಿಧಾರಿಗಳ ಮಾತಿಗೂ ಬೆಲೆಕೊಡದೆ ಮದುವೆಗೆ ನಿರಾಕರಿಸಿದ. ಕಡೆಗೆ ಅದು ಹೇಗೋ ಮದುವೆಗೆ ಒಪ್ಪಿಸಿ ಭಾನುವಾರ ರಾತ್ರಿ 8.45ರ ‘ಮುಹೂರ್ತ’ದಲ್ಲಿ ದೇವಸ್ಥಾನದಲ್ಲಿ ಹಾರ ಬದಲಿಸಕೊಳ್ಳುವಂತೆ ಮಾಡಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈಗ ನವ ವಧು-ವರ ಎನ್ನಿಸಿಕೊಳ್ಳುವ ಬದಲು ಪುಟ್ಟ ಕಂದಮ್ಮನ ಅಪ್ಪ-ಅಮ್ಮ ಎನಿಸಿಕೊಂಡಿದ್ದಾರೆ ಎಂಬಲ್ಲಿಗೆ ವರ್ಷ ಹಿಂದಿನ ಪ್ರೇಮಪ್ರಸಂಗ ಸುಖಾಂತ್ಯ ಕಂಡಿದೆ!

ಮದುವೆಗೆ ನಕಾರ:ವರ ಸಹಿತ ಮೂವರು  ‘ಮಾವನ ಮನೆ’ಗೆ..!
ಸುಳ್ಯ:
ನಿಶ್ಚಿತಾರ್ಥ ನಡೆದು ಎಲ್ಲಾ ಸಿದ್ಧತೆ ಪೂರ್ಣಗೊಂಡ ಬಳಿಕ ಮದುವೆ ಆಗಲು ನಿರಾಕರಿಸಿದ ವರ, ಆತನ ತಂದೆ ಮತ್ತು ಸೋದರನನ್ನು ಪೊಲೀಸರು ಬಂಧಿಸಿದ್ದಾರೆ. 
ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ದುಗ್ಗಲಡ್ಕ ನೀರಬಿದರೆ ರಾಮಣ್ಣ ನಾಯ್ಕ ಅವರ ಪುತ್ರ  ಪರಮೇಶ್ವರ ಹಾಗೂ ಐವರ್ನಾಡು ಗ್ರಾಮದ ಉದ್ದಂಪಾಡಿ ಕೃಷ್ಣ ನಾಯ್ಕ ಅವರ ಪುತ್ರಿ ವಿವಾಹ ನಿಶ್ಚಿತಾರ್ಥ ಡಿ. 26ರಂದು ನಡೆದಿತ್ತು. ಜ. 17ರಂದು ಮದುವೆ ನಿಗದಿಪಡಿಸಿ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು. ಕಡೆ ಗಳಿಗೆಯಲ್ಲಿ ವರನ ಕಡೆಯವರು, ನಡತೆ ಬಗ್ಗೆ ಸಂಶಯ ವ್ಯಕ್ತಪಡಿಸಿ ಮದುವೆಗೆ ನಿರಾಕರಿಸಿದರು.
ವರ ಪರಮೇಶ್ವರ, ಸಹೋದರ ಲಿಂಗಪ್ಪ ನಾಯ್ಕ ಹಾಗೂ ತಂದೆ ರಾಮಣ್ಣ ನಾಯ್ಕ ವಿರುದ್ಧ ಕೃಷ್ಣ ನಾಯ್ಕ ನೀಡಿದ ದೂರು ಆಧರಿಸಿ ಪೊಲೀಸರು ಬಂಧಿಸಿದರು. ಮೂವರಿಗೂ ನ್ಯಾಯಾಲಯ ಸದ್ಯ ನ್ಯಾಯಾಂಗ ಬಂಧನ ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.