ADVERTISEMENT

ಯುವಕನಿಗೆ ಇರಿತ: ಹತ್ತು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 25 ಮೇ 2019, 16:42 IST
Last Updated 25 ಮೇ 2019, 16:42 IST

ಮಂಗಳೂರು: ನಗರದ ಉರ್ವ ಚರ್ಚ್ ಬಳಿ ಶುಕ್ರವಾರ ರಾತ್ರಿ ರಿತೇಶ್ (23) ಎಂಬಾತನಿಗೆ ಚೂರಿಯಿಂದ ಇರಿದ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತರು ಸೇರಿದಂತೆ 10ಮಂದಿಯನ್ನು ಉರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೋಳೂರು ನಿವಾಸಿಗಳಾದ ಆಶಿತ್ (18), ವಿಜು (19), ಸುಶಾಂತ್ (20), ಸಾಗರ್ (22), ಕಿಶನ್ (19), ಅನುಷ್ (18), ಅಂಕಿತ್ (20), ನಿಶಾಂತ್ (22) ಮತ್ತು ಇಬ್ಬರು ಅಪ್ರಾಪ್ತರನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ. ರಿತೇಶ್ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ರಿತೇಶ್ ಮತ್ತು ಹಲ್ಲೆಗೈದ ಯುವಕರ ಮಧ್ಯೆ ವೈಮನಸ್ಸಿದ್ದು ಪದೇ ಪದೇ ಕುಡಿದು ಗಲಾಟೆ ಮಾಡಿಕೊಳ್ಳುತ್ತಿದ್ದರು. ಶುಕ್ರವಾರ ರಾತ್ರಿ ರಿತೇಶ್ ಈ ತಂಡದ ಮೇಲೆ ದಾಳಿ ಮಾಡಲು ಚೂರಿ ಹಿಡಿದುಕೊಂಡು ಬಂದಿದ್ದ. ಈ ಸಂದರ್ಭ ರಿತೇಶ್ ಮತ್ತು ತಂಡದ ಮಧ್ಯೆ ಮಾತಿಗೆ ಮಾತು ಬೆಳೆದು ರಿತೇಶ್ ತಂದ ಚೂರಿಯಿಂದಲೇ ಎದುರಾಳಿಗಳು ಆತನಿಗೆ ಹಲ್ಲೆ ಮಾಡಿದ್ದಾರೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ಉರ್ವ ಠಾಣೆ ಪೊಲೀಸರು ಬಳಿಕ ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸುರತ್ಕಲ್‍ನಲ್ಲಿ ಬಂಧಿಸಿದ್ದಾರೆ.

ADVERTISEMENT

ಗಾಯಗೊಂಡವ ರೌಡಿಶೀಟರ್: ಗಾಯಗೊಂಡ ರಿತೇಶ್ ವಿರುದ್ಧ ಬರ್ಕೆ ಮತ್ತು ಉರ್ವ ಠಾಣೆಗಳಲ್ಲಿ ಪ್ರಕರಣಗಳಿದ್ದು, ಆತನ ಹೆಸರು ರೌಡಿ ಪಟ್ಟಿಯಲ್ಲಿದೆ.

ಮಂಗಳೂರು ನಗರ ಪೊಲೀಸ್‌ ಕಮಿಷನರ್ ಡಾ.ಸಂದೀಪ್ ಪಾಟೀಲ್, ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮಿಗಣೇಶ್‌, ಎಸಿಪಿ ಶ್ರೀನಿವಾಸ ಗೌಡ ಅವರ ಮಾರ್ಗದರ್ಶನದಲ್ಲಿ ಉರ್ವ ಠಾಣೆ ಇನ್‍ಸ್ಪೆಕ್ಟರ್ ಗುರುಪ್ರಸಾದ್, ಸಬ್‌ ಇನ್‌ಸ್ಪೆಕ್ಟರ್‌ ಆರನ್ ಅಖ್ತರ್, ಎಎಸ್‍ಐ ಬಾಲಕೃಷ್ಣ, ಕಾನ್‌ಸ್ಟೆಬಲ್‌ಗಳಾದ ಸಂತೋಷ್, ಲೋಕೇಶ್, ಪ್ರಕಾಶ್, ಬಸವರಾಜು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.