ಮಂಗಳೂರು: `ವಯಸ್ಸಾದ ಮೇಲೂ ಬೇರೆ ಬೇರೆ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದುಕಿನಲ್ಲಿ ಲವಲವಿಕೆ ಉಳಿಸಿಕೊಳ್ಳಬೇಕು' ಎಂದು ಬೆಂದೂರ್ ಚರ್ಚಿನ ಧರ್ಮಗುರು ಫಾ.ಆಂಟೊನಿ ಸೆರಾವೊ ಅಭಿಪ್ರಾಯಪಟ್ಟರು.
ರಚನಾ ಹಿರಿಯ ನಾಗರಿಕರ ಕಲ್ಯಾಣ ಟ್ರಸ್ಟ್ ಆಶ್ರಯದಲ್ಲಿ ಬೆಂದೂರು ಚರ್ಚಿನ ಸಭಾಂಗಣದಲ್ಲಿ ಭಾನುವಾರ ನಡೆದ ರಚನಾ ಹಿರಿಯ ನಾಗರಿಕರ ಕಲ್ಯಾಣ ಸಂಘದ ಬೆಂದೂರು ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
`ಮಂಗಳೂರು ಧರ್ಮಪ್ರಾಂತ್ಯದ 100ನೇ ವರ್ಷಾಚರಣೆ ಸಂದರ್ಭದಲ್ಲೇ ಹಿರಿಯ ನಾಗರಿಕರ ಸಂಘ ಸ್ಥಾಪನೆಯಾಗುತ್ತಿರುವುದು ಸ್ವಾಗತಾರ್ಹ. ಸಂಘ ಸದಾ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಸಕ್ರಿಯವಾಗಿರಬೇಕು' ಎಂದು ಅವರು ಸಲಹೆ ನೀಡಿದರು.
ಸಂಘವನ್ನು ಉದ್ಘಾಟಿಸಿದ ಉದ್ಯಮಿ ಡೆನ್ನಿಸ್ ಡಿ'ಸೋಜ ಮಾತನಾಡಿ, `ಅಮೆರಿಕ ಹಾಗೂ ಐರೋಪ್ಯ ರಾಷ್ಟ್ರಗಳಲ್ಲಿ ಹಿರಿಯ ನಾಗರಿಕರು ಉತ್ತಮ ಸವಲತ್ತು ಪಡೆಯುತ್ತಿದ್ದಾರೆ. ಭಾರತ ಈ ನಿಟ್ಟಿನಲ್ಲಿ ಸಾಗಬೇಕಾದ ಹಾದಿ ಬಹಳಷ್ಟಿದೆ. ಹಿರಿಯ ನಾಗರಿಕರ ಆರ್ಥಿಕ ಸ್ವಾವಲಂಬನೆ ಹಾಗೂ ಆರೋಗ್ಯ ಗುಣಮಟ್ಟ ಹೆಚ್ಚಳದ ಬಗ್ಗೆಯೂ ಕಾಳಜಿ ವಹಿಸಬೇಕಾಗಿದೆ' ಎಂದರು.
ರಚನಾ ಸಂಸ್ಥೆ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ ಮಾತನಾಡಿ, `ಪ್ರತಿ ಚರ್ಚ್‌ಗಳ ವ್ಯಾಪ್ತಿಯಲ್ಲೂ ಹಿರಿಯ ನಾಗರಿಕರ ಸಂಘ ಸ್ಥಾಪಿಸುವ ಉದ್ದೇಶವಿದೆ' ಎಂದರು.
ರಚನಾ ಹಿರಿಯ ನಾಗರಿಕರ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಮಾರ್ಷೆಲ್ ಮೋಂತೆರೊ, ಕಾರ್ಯದರ್ಶಿ ರೊನಾಲ್ಡ್ ಐ.ಗೋಮ್ಸ, ರಚನಾ ಹಿರಿಯ ನಾಗರಿಕರ ಕಲ್ಯಾಣ ಸಂಘದ ಬೆಂದೂರು ಘಟಕದ ಸಂಚಾಲಕ ಫೆಲಿಕ್ಸ್ ಜೆ.ಪಿಂಟೊ, ಸಹಸಂಚಾಲಕ ಎಡ್ಮಂಡ್ ಫ್ರಾಂಕ್, ಕ್ಯಾಥೊಲಿಕ್ ಸಭಾದ ಅಧ್ಯಕ್ಷೆ ಐರಿನ್ ಸಲ್ಡಾನ ಮತ್ತಿತರರು ಉಪಸ್ಥಿತರಿದ್ದರು.
ಕಿಶೋರ್ ಫರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಫೆಲ್ಸಿ ಪಿಂಟೊ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.