ADVERTISEMENT

ವಿಟ್ಲ: `ನೀರು, ಗೊಬ್ಬರದಿಂದ ಮಣ್ಣಿಗೆ ಜೀವ'

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 5:47 IST
Last Updated 5 ಡಿಸೆಂಬರ್ 2012, 5:47 IST

ವಿಟ್ಲ:  ನೀರು, ಗೊಬ್ಬರಗಳ ಮೂಲಕ ಮಣ್ಣುಗಳಿಗೆ ಜೀವ ಬರುತ್ತದೆ. ಸಾವಯವ ಕೃಷಿಯ ಪದ್ಧತಿ ಅನುಸರಿಸಿಕೊಂಡು ಹೋದಾಗ ಮಣ್ಣಿನ ಫಲವತ್ತತ್ತೆಯ ಸಂರಕ್ಷಣೆಯೂ ಸಾಧ್ಯವಿದೆ ಆಹಾರ ಧಾನ್ಯವೇ ನಮ್ಮ ನಿಜವಾದ ಸಂಪತ್ತು ಎಂದು ಕೃಷಿ ಸಂಶೋಧಕ ಬದನಾಜೆ ಶಂಕರ ಭಟ್ ಹೇಳಿದರು.

ವಿಟ್ಲದ ಚಂದಳಿಕೆ ಮಂಗಳ ಮಂಟಪದಲ್ಲಿ ಮಂಗಳವಾರ ನಡೆದ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.    

`ವಿಷಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವ ನಾವು ಅನಾರೋಗ್ಯ ಪೀಡಿತರಾಗುತ್ತೇವೆ. ಯಾಂತ್ರೀಕೃತ ಸುಧಾರಿತ ಕೃಷಿ ಪದ್ಧತಿ ಅಡ್ಡ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಸಾವಯುವ ಕೃಷಿ ಕಡೆ ಹೆಚ್ಚು ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಎಸ್.ದಯಾವತಿ ಮಾತನಾಡಿ `ಯೋಜನೆ ಬಂಜರು ಬೂಮಿಯನ್ನು ಹಸಿರು ಮಾಡಲು ಪ್ರೇರೇಪಣೆ ನೀಡುವುದರೊಂದಿಗೆ ಸಾವಯವ ಕೃಷಿ ಪದ್ಧತಿಯ ಅಳವಡಿಕೆಗೆ ಉತ್ತೇಜನ ನೀಡುತ್ತದೆ' ಎಂದು ತಿಳಿಸಿದರು.

ವಿಟ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮಾನಾಥ ವಿಟ್ಲ ಅಧ್ಯಕ್ಷತೆ ವಹಿಸಿದ್ದು, `ಪೌಷ್ಟಿಕ ಆಹಾರದ ಕೊರತೆ ಎದ್ದು ಕಾಣುತ್ತಿದ್ದು, ಇದು ನಾವು ಸೇವಿಸುವ ಬಹಳಷ್ಟು ತರಕಾರಿ, ಧಾನ್ಯಗಳು ರಸಗೊಬ್ಬರದ ಪ್ರಭಾವದಿಂದ ವಿಷದ ಅಂಶ ಹೊಂದಿರುತ್ತವೆ. ನಾವು ಪಡೆಯುವ ರೇಷನ್‌ನಷ್ಟು ವಸ್ತುವನ್ನು ನಾವೇ ಬೆಳೆಯಲು ಆರಂಭಿಸಿದಾಗ ಈ ಸಮಸ್ಯೆ ನೀಗಲಿದೆ' ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಮಟ್ಟದ ಪ್ರಗತಿಶೀಲ ಯುವ ರೈತ ಪ್ರಶಸ್ತಿ ವಿಜೇತ ಪ್ರಗತಿಪರ ಕೃಷಿಕ ದೇವಸ್ಯ ಜಯಂತ ಸಪಲ್ಯ ಅವರನ್ನು ಸನ್ಮಾನಿಸಲಾಯಿತು.

ಬಂಟ್ವಾಳ ತಾಲ್ಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಕಾರಂತ ಎರುಂಬು, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ತನಿಯಪ್ಪ ಮೂಲ್ಯ ಭಾಗವಹಿಸಿದ್ದರು.

ಯೋಜನೆಯ ವಿಟ್ಲ ವಲಯ ಮೇಲ್ವಿಚಾರಕ ಸೂರ್ಯನಾರಾಯಣ ಸ್ವಾಗತಿಸಿದರು. ಪ್ರಗತಿಬಂಧು ಸ್ವ-ಸಹಾಯ ಸಂಘಗಳ ವಲಯ ಅಧ್ಯಕ್ಷ ಹರೀಶ್ ಎಸ್.ಪಿ. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.