ADVERTISEMENT

ಶಿಸ್ತುಬದ್ಧ ಶಿಕ್ಷಣಕ್ಕೆ ಶ್ರೀರಾಮ ಸಂಸ್ಥೆ ಮಾದರಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 8:39 IST
Last Updated 27 ಅಕ್ಟೋಬರ್ 2017, 8:39 IST

ಬಂಟ್ವಾಳ: ವಿದ್ಯಾರ್ಥಿಗಳಿಗೆ ರಾಷ್ಟ್ರೀ ಯತೆ ಮತ್ತು ಸಂಸ್ಕಾರಯುತ ಶಿಕ್ಷಣ ನೀಡುವುದರ ಜೊತೆಗೆ ಶಿಸ್ತುಬದ್ಧ ಬದುಕಿಗೆ ಆತ್ಮಸ್ಥೈರ್ಯ ತುಂಬುವ ಇಲ್ಲಿನ ಶಿಕ್ಷಣ ಪದ್ಧತಿ ಮಾದರಿಯಾಗಿದೆ ಎಂದು ಚಿತ್ರನಟಿ ಅಮೂಲ್ಯ ಶ್ಲಾಘಿಸಿದರು. ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ₹10 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶಿಶುಮಂದಿರದ 'ಸೀತಾ ಕುಟೀರ'ವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂಸ್ಥೆ ನನಗೆ ತುಂಬಾ ಇಷ್ಟವಾಗಿದ್ದು, ಇಂತಹ ಶಿಕ್ಷಣ ಸಂಸ್ಥೆಯನ್ನು ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಕೂಡಾ ಆರಂಭಿಸಿದಾಗ ನಮ್ಮಂತಹ ಚಿತ್ರನಟರು ಸಹಕಾರ ನೀಡಲು ಸಿದ್ಧರಿದ್ದೇವೆ. ಇಲ್ಲಿನ ಶಿಕ್ಷಣ ಸಂಸ್ಥೆಗೆ ಬಂದಿರುವುದು ನನ್ನ ಸುಯೋಗ. ಇಲ್ಲಿನ ಶಿಸ್ತು ಮತ್ತು ಧೈರ್ಯಶಾಲಿ ವಿದಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆ ಕಂಡು ಸಂತಸವಾಗಿದೆ ಎಂದರು.

ಬೆಂಗಳೂರಿನ ಲಹರಿ ಆಡಿಯೋ ಕಂಪೆನಿ ಮುಖ್ಯಸ್ಥ ಬಿ.ವೇಲು ಅವರು ₹1.5ಕೋಟಿ ವೆಚ್ಚದ 'ಮಹೇಂದ್ರ' ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಕಲ್ಲಡ್ಕ ಮಾದರಿಯಲ್ಲಿ ಹಿಂದುತ್ವಕ್ಕೆ ಶಕ್ತಿ ತುಂಬುವ ಧೈರ್ಯವಂತ ಶಿಕ್ಷಣ ಸಂಸ್ಥೆಗಳು ದೇಶದೆಲ್ಲೆಡೆ ಆರಂಭಗೊಳ್ಳಬೇಕು’ ಎಂದರು. ಇಲ್ಲಿನ 'ವಸುಧಾರ ಗೋಶಾಲೆ'ಯಲ್ಲಿ ಗೋವುಗಳಿಗೆ ಹೂಮಾಲೆ ಹಾಕಿ ಆರತಿ ಬೆಳಗುವ ಮೂಲಕ ಗೋಪೂಜೆ ನೆರವೇರಿಸಲಾಯಿತು.

ADVERTISEMENT

ಮೈಸೂರು ಸುಬ್ರಹ್ಮಣ್ಯ ತಂತ್ರಿ, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ, ಶಾಂತ ಕುಮಾರ ತಿಪಟೂರು, ಹಾಸನ ಜಿಲ್ಲಾ ಬಿಜೆಪಿ ಪರಿಶಿಷ್ಟ ಘಟಕ ಮೋರ್ಚಾ ಅಧ್ಯಕ್ಷ ಮುರಳಿ ಮೋಹನ್ ಸಕಲೇಶಪುರ, ವಕೀಲ ಗಿರೀಶ್ ಕುಮಾರ್ ಸಕಲೇಶಪುರ, ಬಿಜೆಪಿ ಮುಖಂಡರಾದ ಎನ್.ಆರ್.ಹಿತೇಶ್ ಸಕಲೇಶಪುರ, ಹೆಮಂತ್ ಸಕಲೇಶಪುರ, ಸಾಮಾಜಿಕ ಜಾಲತಾಣ ಘಟಕ ಸಕಲೇಶಪುರ ಸಂಚಾಲಕ ಪೃಥ್ವಿ, ಹೆಬ್ಬಾಳ ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷೆ ಸುನಿತಾ ಮಂಜುನಾಥ್ , ಬ್ಯಾಡಗಿ ಕ್ಷೇತ್ರದ ಬಿಜಿಪಿ ಮುಖಂಡ ಬಾಲಚಂದ್ರ ಎಸ್. ಪಾಟೀಲ, ಧಾರವಾಡ ಮಾಜಿ ಮೇಯರ್ ಶಿವು ಹಿರೇಮಠ್ ಕಲ್ಲಡ್ಗಿ, ಪ್ರಮುಖರಾದ ಶಿವಯೋಗಿ ಶಿರೂರು, ದಿನಕರ ಜೋಶಿ ಧಾರವಾಡ, ಸುನಿಲ್ ಕುಲಕರ್ಣಿ, ನಿಕೇಶ್ ಕುಲಕರ್ಣಿ, ಮಹೇಂದ್ರ ನಾಯ್ಕ್, ಅಮೂಲ್ಯ ಅವರ ಪತಿ ಜಗದೀಶ್ ಮತ್ತು ಅವರ ತಂದೆ ರಾಮಚಂದ್ರ ಜಿ.ಎಚ್., ವಿದ್ಯಾಕೇಂದ್ರದ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ ಇದ್ದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ.ಪ್ರಭಾಕರ ಭಟ್ ಪ್ರಾಸ್ತಾವಿಕ ಮಾತನಾಡಿ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಬೆಳೆದು ಬಂದ ರೀತಿ ಮತ್ತು ಇಲ್ಲಿನ ಶಿಕ್ಷಣ ಪದ್ದತಿ ಬಗ್ಗೆ ವಿವರಿಸಿದರು. ವಕೀಲೆ ಆಶಾ ಪ್ರಸಾದ್ ರೈ ಸ್ವಾಗತಿಸಿ, ಮಲ್ಲಿಕಾ ರಘುರಾಮ್ ಶೆಟ್ಟಿ ವಂದಿಸಿದರು. ರಾಜೀವಿ ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.