ADVERTISEMENT

ಸಂಚಾರ ದಟ್ಟಣೆ: ಸಮಸ್ಯೆ ಸುಳಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ

​ಪ್ರಜಾವಾಣಿ ವಾರ್ತೆ
Published 5 ಜೂನ್ 2013, 9:12 IST
Last Updated 5 ಜೂನ್ 2013, 9:12 IST

ಸುಬ್ರಹ್ಮಣ್ಯ: ಕೆಸರುಮಯ ರಸ್ತೆ. ಪೇಟೆಯುದ್ದಕ್ಕೂ ವಾಹನಗಳು ಸಾಲಾಗಿ ನಿಂತು ಉಂಟಾದ ಸಂಚಾರ ದಟ್ಟಣೆ. ಕಳ್ಳಕಾಕರ ಭಯ. ಇವೆಲ್ಲಾ ಸಮಸ್ಯೆಗಳು ಕುಕ್ಕೆ ಕ್ಷೇತ್ರ  ದರ್ಶನ ಮಾಡುವ ಜನಸಾಮಾನ್ಯರಿಗೆ, ಯಾತ್ರಾರ್ಥಿಗಳ ಪಾಲಿಗೆ ಎದುರಾಗುತ್ತಿವೆ.

ಇಳೆಗೆ ಮಳೆಯ ಸಿಂಚನವಾಗುತ್ತಿದ್ದಂತೆ ಹಲವಾರು ಸಮಸ್ಯೆಗಳು ಜನಸಾಮಾನ್ಯರನ್ನು ಕಾಡತೊಡಗಿವೆ. ಮಳೆಗಾಲಕ್ಕೆ ಮುನ್ನ ರಸ್ತೆಯ ಎರಡೂ ಬದಿಯಲ್ಲಿ ತೋಡುಗಳನ್ನು ನಿರ್ಮಿಸಿ ನೀರು ಹರಿದು ಹೋಗುವಂತೆ ಮುಂಜಾಗ್ರತೆ ವಹಿಸದಿರುವುದೇ ಸಮಸ್ಯೆಗೆ ಕಾರಣವಾಗಿದೆ.

ಕುಮಾರಧಾರಾದಿಂದ ಸಮಸ್ಯೆಗಳ ದರ್ಶನ: ನಾಡಿನೆಲ್ಲೆಡೆ ಮುಂಗಾರು ಜೋರಾಗಿದೆ. ರಾಜ್ಯದ ಹೆಚ್ಚು ಆದಾಯವುಳ್ಳ ಕುಕ್ಕೆಯಲ್ಲಿ  ವರುಣನ ಆರ್ಭಟ ಆರಂಭಗೊಂಡಿದೆ. ಮೊದಲ ಮಳೆಗೆ ಪ್ರವೇಶದ್ವಾರದ ಕುಮಾರಾಧಾರೆಯಿಂದ ರಥಬೀದಿ ವರೆಗಿನ ಡಾಂಬರು ರಸ್ತೆಯ ಇಕ್ಕೆಲ ಹಾಕಿದ ಕೆಂಪು ಮಣ್ಣು ಡಾಂಬರು ರಸ್ತೆಯನ್ನು ಪ್ರವೇಶಿಸಿ ರಸ್ತೆಯನ್ನು ಮುಚ್ಚಿಕೊಂಡು ಕೆರೆಯಂತೆ ನಿಂತ ದೃಶ್ಯ ಕಂಡು ಬರುತ್ತದೆ.

ನಿರಂತರವಾಗಿ ವಾಹನಗಳು ವೇಗವಾಗಿ ಚಲಿಸುವುದರಿಂದ ರಸ್ತೆ ಬದಿ ಸಂಚರಿಸುವ ಪಾದಚಾರಿಗಳಿಗೆ ಕೆಸರು ಮಿಶ್ರಿತ ಕೆಂಪು ನೀರಿನ ಸಿಂಚನವಾಗಿ ಬಟ್ಟೆ ಕೊಳಕಾಗುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ಹೊತ್ತು ರಸ್ತೆ ಬದಿ ತೆರಳುವ ವಿದ್ಯಾರ್ಥಿಗಳು ಗಂಭೀರವಾಗಿ ಈ ತೊಂದರೆ ಅನುಭವಿಸುತ್ತಿದ್ದಾರೆ.

ಸಂಚಾರ ದಟ್ಟಣೆ: ತೀರ್ಥ ಕ್ಷೇತ್ರವಾದ ಕುಕ್ಕೆಗೆ ನಾಡಿನ ಎಲ್ಲೆಡೆಯಿಂದ ಜನ ಸಾಗರೋಪಾದಿಯಲ್ಲಿ ಸಾಗಿ ಬರುತ್ತಾರೆ. ಮಂತ್ರಿಗಳು, ಕ್ರಿಕೆಟ್ ತಾರೆಯರು, ಚಲನಚಿತ್ರ ನಟ, ನಟಿಯರು, ಉದ್ಯಮಿಗಳು ಸೇರಿದಂತೆ ಅನೇಕ ಮಂದಿ ದರ್ಶನಕ್ಕಾಗಿ ಆಗಮಿಸುತ್ತಾರೆ. ಇವರೆಲ್ಲರೂ ಸಂಚಾರ ದಟ್ಟಣೆಯ ಸಮಸ್ಯೆ ಎದುರಿಸಬೇಕಾಗಿದೆ.

ಕಾಶಿಕಟ್ಟೆಯಿಂದಲೇ ಸಂಚಾರ ದಟ್ಟಣೆ ಆರಂಭವಾಗುತ್ತದೆ. ದೇವಳದ ರಾಜಗೋಪುರದಿಂದ ಸ್ವಲ್ಪದೂರ ಮುಖ್ಯ ರಸ್ತೆವರೆಗೆ ಕ್ಷೇತ್ರದ ಭದ್ರತೆ ದೃಷ್ಟಿಯಿಂದ ವಾಹನ ನಿಲುಗಡೆಗೆ ನಿಷೇಧ ಹೇರಲಾಗಿದೆ. ಕೆಲವು ವಿ.ಐ.ಪಿಗಳಿಗೆ ಇದು ಅನ್ವಯವಾಗದ ಕಾರಣ ಅವರ ವಾಹನ ಸಲೀಸಾಗಿ ಒಳ ಪ್ರವೇಶಿಸುತ್ತವೆ. ಇಲ್ಲೇ ವೃತ್ತದ ಬಳಿ ವಾಹನದಲ್ಲಿ ಬಂದು ಪ್ರಯಾಣಿಕರನ್ನು ಇಳಿಸಿ ವಾಹನಗಳನ್ನು ಪಾರ್ಕ್ ಮಾಡಲು ಮುಂದಕ್ಕೆ ಕಳಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಆದರೆ ವಾಹನಗಳಿಂದ ಪ್ರಯಾಣಿಕರು ಇಳಿಯಲು ಅಧಿಕ ಸಮಯ ತೆಗೆದುಕೊಳ್ಳುವ ಕಾರಣ  ತಡವಾಗಿ ವಾಹನಗಳು ಒಂರೆ ಹಿಂದೆ ಒಂದರಂತೆ ಸಾಲಾಗಿ ನಿಲ್ಲುತ್ತವೆ. ಮುಖ್ಯ ರಸ್ತೆಗೆ ತಾಗಿಕೊಂಡೇ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣವೂ ಇದೆ. ಬಸ್‌ಗಳು ನಿಲ್ದಾಣದಿಂದ ಮುಖ್ಯ ರಸ್ತೆಗೆ ಇಳಿಯುವ ಸಂದರ್ಭ ತಿರುಗಿಸುವ ರಭಸದಲ್ಲಿ ಸಮಸ್ಯೆಗಳು ಉಂಟಾಗಿ ಟ್ರಾಫಿಕ್ ಜಾಮ್ ಆಗುತ್ತಲಿದೆ.

ವಾಹನಗಳನ್ನು ಪಾರ್ಕ್ ಮಾಡಲು ಪಾರ್ಕಿಂಗ್ ವ್ಯವಸ್ಥೆ  ಇದ್ದರೂ ಸ್ಥಳೀಯರು ರಸ್ತೆೆ ಬದಿಯಲ್ಲೇ ವಾಹನ ನಿಲ್ಲಿಸುತ್ತಿರುವುದು ಕೂಡ ಗಂಭೀರ ಸಮಸ್ಯೆಯಾಗಿದೆ. ಮಳೆಗಾಲದಲ್ಲಿ ಸಮಸ್ಯೆಗಳು ಬಿಗಡಾಯಿಸುತ್ತವೆ.

ಕಳ್ಳಕಾಕರ ಭಯ: ಇಲ್ಲಿ ಕಳ್ಳರ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಇತ್ತೀಚೆಗೆ ಕಂಡು ಬರುತ್ತಿದೆ. ಕ್ಷೇತ್ರಕ್ಕೆ ಬರುವ ಭಕ್ತರ ನಗ, ನಗದು ಬೆಲೆಬಾಳುವ ಮೊಬೈಲ್‌ಗಳನ್ನು ಕಳ್ಳರು ಎಗರಿಸುತ್ತಿದ್ದು ಸ್ನಾನಘಟ್ಟದ ಬಳಿ ಇದು ಭಕ್ತರನ್ನು ಹೆಚ್ಚಾಗಿ ಕಾಡುತ್ತಿದೆ. ದೇವಳದ ಒಳಾಂಗಣ, ಹೊರಾಂಗಣಗಳಲ್ಲೂ  ಅಮೂಲ್ಯ ಸೊತ್ತುಗಳು ಕಳ್ಳರ ಪಾಲಾಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.