ADVERTISEMENT

ಸಂಬಂಧ ನಿರಾಕರಿಸಿದ್ದರಿಂದ ಕೊಲೆ: ತಪ್ಪೊಪ್ಪಿಕೊಂಡ ಸಂದೀಪ್‌ ರಾಥೋಡ್‌

ಪೊಲೀಸರ ಎದುರು ತಪ್ಪೊಪ್ಪಿಕೊಂಡ ಆರೋಪಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 20:20 IST
Last Updated 9 ಜೂನ್ 2019, 20:20 IST
ಸಂದೀಪ್‌ ರಾಥೋಡ್‌
ಸಂದೀಪ್‌ ರಾಥೋಡ್‌   

ಮಂಗಳೂರು: ಗುಪ್ತವಾಗಿ ತನ್ನನ್ನು ಮದುವೆಯಾಗಿದ್ದ ತರೀಕೆರೆಯ ಅಂಜನಾ ವಸಿಷ್ಠ (22) ದಿಢೀರನೆ ಸಂಬಂಧ ಕಡಿದುಕೊಳ್ಳಲು ಮುಂದಾಗಿದ್ದೇ ಕೊಲೆಗೆ ಕಾರಣ ಎಂದು ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಸಂದೀಪ್‌ ರಾಥೋಡ್‌ (22) ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ.

ಅತ್ತಾವರದಲ್ಲಿರುವ ಬಾಡಿಗೆ ಕೊಠಡಿಯಲ್ಲಿ ಶುಕ್ರವಾರ ಬೆಳಿಗ್ಗೆ ಅಂಜನಾ ಕೊಲೆ ನಡೆದಿತ್ತು. ಬಳಿಕ ಸಂದೀಪ್‌ ಸ್ಥಳದಿಂದ ಪರಾರಿಯಾಗಿದ್ದ. ಆತನನ್ನು ಬೆನ್ನಟ್ಟಿ ಹೋದ ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆಯ ಪೊಲೀಸರು, ಸಿಂದಗಿಯಲ್ಲಿ ಶನಿವಾರ ಬೆಳಿಗ್ಗೆ ಬಂಧಿಸಿದ್ದರು. ಭಾನುವಾರ ಆತನನ್ನು ನಗರಕ್ಕೆ ಕರೆತಂದಿರುವ ಪೊಲೀಸರು, ಸ್ಥಳ ಮಹಜರು ಮತ್ತು ವಿಚಾರಣೆ ನಡೆಸಿದರು.

ಇದನ್ನೂ ಓದಿ:ಯುವತಿಯ ಕೊಲೆ: ಯುವಕ ಪರಾರಿ

ADVERTISEMENT

2018ರ ಜೂನ್‌ನಲ್ಲಿ ಫೇಸ್‌ಬುಕ್‌ ಮೂಲಕ ಇಬ್ಬರಿಗೂ ಪರಿಚಯವಾಗಿತ್ತು. ಅದು ಪ್ರೀತಿಗೆ ತಿರುಗಿತ್ತು. ಜುಲೈ ಬಳಿಕ ಕೆಲವು ಬಾರಿ ಸಂದೀಪ್‌ ರಾಥೋಡ್‌ ನಗರಕ್ಕೆ ಬಂದಿದ್ದು, ಅಂಜನಾಳನ್ನು ಭೇಟಿಯಾಗಿದ್ದ. ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದರು. 2018ರ ನವೆಂಬರ್‌ 1ರಂದು ಕದ್ರಿ ದೇವಸ್ಥಾನದಲ್ಲಿ ಆಕೆಗೆ ತಾಳಿ ಕಟ್ಟಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.

ಮದುವೆಯ ಬಳಿಕ ಇಬ್ಬರೂ ನಗರದ ಕೆಲವು ಲಾಡ್ಜ್‌ಗಳಲ್ಲಿ ಉಳಿದುಕೊಂಡಿದ್ದರು. ಇಬ್ಬರ ನಡುವೆ ದೈಹಿಕ ಸಂಬಂಧವೂ ಇತ್ತು. ಕೆಲವು ಲಾಡ್ಜ್‌ಗಳಿಗೆ ಆರೋಪಿಯನ್ನು ಕರೆದೊಯ್ದ ಪೊಲೀಸರು, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದಾರೆ.

ತರಬೇತಿಗೆ ಸೇರಿಸಿದ್ದಳು

ಸಂದೀಪ್‌ಗೆ ಕೆಲಸ ಇಲ್ಲದಿರುವುದು ಮೃತ ಯುವತಿಯ ಚಿಂತೆಗೆ ಕಾರಣವಾಗಿತ್ತು. ಈ ವಿಚಾರವನ್ನು ಆತನೊಂದಿಗೆ ಚರ್ಚಿಸಿದ್ದಳು. ತಾನು ಸಬ್‌ ಇನ್‌ಸ್ಪೆಕ್ಟರ್‌ ಆಗಲು ಬಯಸಿರುವುದಾಗಿ ಹೇಳಿಕೊಂಡಿದ್ದ. ತಾನೂ ಬ್ಯಾಂಕಿಂಗ್ ಪರೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದ್ದ ಆಕೆ, ಆತನನ್ನು ನಗರದ ರಾಯಲ್‌ ಅಕಾಡೆಮಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ಸೇರಿಸಿದ್ದಳು ಎಂಬುದು ತನಿಖೆಯಲ್ಲಿ ಬಯಲಿಗೆ ಬಂದಿದೆ.

ಇಬ್ಬರೂ ಒಂದೇ ಮನೆಯಲ್ಲಿ ಉಳಿದುಕೊಳ್ಳಲು ನಿರ್ಧರಿಸಿದ್ದರು. ಈ ಕಾರಣದಿಂದ ಆಕೆ ಸಂದೀಪ್‌ನೊಂದಿಗೆ ಬಂದು ಅತ್ತಾವರದ ಫ್ಲೋಸಿ ಪಾಯಸ್‌ ಎಂಬುವವರ ಒಡೆತನದ ಕೊಠಡಿಯನ್ನು ಬಾಡಿಗೆಗೆ ಪಡೆಯುವ ವ್ಯವಸ್ಥೆ ಮಾಡಿದ್ದಳು. ಅಲ್ಲಿಗೆ ಆಗಾಗ ಬಂದು ಹೋಗುತ್ತಿದ್ದಳು ಎಂಬ ವಿಚಾರವನ್ನು ಆರೋಪಿಯೇ ತನಿಖಾ ತಂಡಕ್ಕೆ ತಿಳಿಸಿದ್ದಾನೆ.

ಬೇರೆ ಮದುವೆಗೆ ಒಪ್ಪಿಗೆ

ಸಂದೀಪ್‌ಗೆ ಕೆಲಸ ಇಲ್ಲ ಮತ್ತು ಆರ್ಥಿಕ ಬಲವೂ ಇಲ್ಲ ಎಂಬ ಕಾರಣದಿಂದ ಕೆಲವು ದಿನಗಳಿಂದ ಅಂಜನಾ ಅಸಮಾಧಾನ ಹೊಂದಿದ್ದಳು. ಕಳೆದ ವಾರ ಊರಿಗೆ ಹೋಗಿದ್ದಾಗ ತಂದೆ ಮಂಜುನಾಥ್‌ ಅವರು ಮದುವೆಗಾಗಿ ವರನೊಬ್ಬನನ್ನು ತೋರಿಸಿದ್ದರು. ಆತನನ್ನು ಒಪ್ಪಿಕೊಂಡು ಬಂದಿದ್ದ ಆಕೆ, ಗುರುವಾರ ಮಂಗಳೂರಿಗೆ ವಾಪಸಾಗಿದ್ದಳು. ಆರೋಪಿಯ ಮೊಬೈಲ್‌ಗೆ ಕರೆಮಾಡಿ ವಿಚಾರ ತಿಳಿಸಿದ್ದಳು.

ಶುಕ್ರವಾರ ಕೊಠಡಿಗೆ ಬಂದು ಚರ್ಚಿಸುವಂತೆ ಆರೋಪಿ ತಿಳಿಸಿದ್ದ. ಅದರಂತೆ ಶುಕ್ರವಾರ ಬೆಳಿಗ್ಗೆ ಅಂಜನಾ ಕೊಠಡಿಗೆ ಹೋಗಿದ್ದಳು. ಆಗ ಮದುವೆ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿದೆ. ಸಂಬಂಧ ಕಡಿದುಕೊಳ್ಳುತ್ತಿದ್ದಾಳೆ ಎಂಬ ಕೋಪದಿಂದ ಆಕೆಯನ್ನು ಮಂಚದ ಮೇಲೆ ಕೆಡವಿದ ಆರೋಪಿ, ಟಿವಿ ಕೇಬಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.