ADVERTISEMENT

ಸಸಿಹಿತ್ಲು-ಕದಿಕೆ ಸೇತುವೆ ಮರೀಚಿಕೆ

ನಾಗರಾಜ ಶೆಟ್ಟಿಗಾರ್
Published 5 ಜುಲೈ 2011, 8:55 IST
Last Updated 5 ಜುಲೈ 2011, 8:55 IST

ಸುರತ್ಕಲ್: ಸುಮಾರು ಮೂರರಿಂದ ನಾಲ್ಕುಸಾವಿರ ಜನಸಂಖ್ಯೆ ಹೊಂದಿರುವ ಸಸಿಹಿತ್ಲು ಪ್ರದೇಶದ ನಿವಾಸಿಗಳು ಸಮುದ್ರದಿಂದ ಅಪಾಯ ಉಂಟಾದರೆ ಪಾರಾಗಲು ಅಗತ್ಯವಾಗಿರುವ `ಎಸ್ಕೇಪ್ ಬ್ರಿಡ್ಜ್~ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಸಸಿಹಿತ್ಲು -ಕದಿಕೆ ಸಂಪರ್ಕಿಸುವ ಈ ಸೇತುವೆ ಸಮೀಪದ ಹಳೆಯಂಗಡಿ- ಸಸಿಹಿತ್ಲು ಸಂಪರ್ಕಕ್ಕೆ ನೆರವಾಗುತ್ತದೆ.

ವ್ಯಾಪಾರ ವಹಿವಾಟು, ಗ್ರಾಮ ಪಂಚಾಯಿತಿ ಕಚೇರಿ ಕೆಲಸ, ನ್ಯಾಯಬೆಲೆ ಅಂಗಡಿಗೆ ಹಳೆಯಂಗಡಿಯನ್ನೇ ಇಲ್ಲಿನ ನಾಗರಿಕರು ಆಶ್ರಯಿಸಬೇಕಾಗುತ್ತದೆ. ಕದಿಕೆಯಿಂದ ನಂದಿನಿ ನದಿ ದಾಟಿದರೆ ಕೇವಲ 15 ನಿಮಿಷದಲ್ಲೇ ಹಳೆಯಂಗಡಿ ತಲುಪಬಹುದು. ಸೇತುವೆ ಸಂಪರ್ಕದ ಕೊರತೆಯಿಂದ ಇಲ್ಲಿನ ಜನತೆ ಹಳೆಯಂಗಡಿ ತಲುಪಬೇಕಾದರೆ ಸುತ್ತು ಬಳಸಿ ತೆರಳಬೇಕಾದುದು ಅನಿವಾರ್ಯ.

ಸಸಿಹಿತ್ಲುವಿನಿಂದ ಮುಕ್ಕವರೆಗೆ ಒಂದು ಬಸ್, ಮುಕ್ಕದಿಂದ ಪಾವಂಜೆ ಮೂಲಕ ಹಳೆಯಂಗಡಿಗೆ ಇನ್ನೊಂದು ಬಸ್ ಮೂಲಕ ಪ್ರಯಾಣಿಸಬೇಕಾಗಿದ್ದು, ಸುಮಾರು 45 ನಿಮಿಷದಿಂದ ಒಂದು ಗಂಟೆ ಸಮಯ ವ್ಯಯಿಸಬೇಕಾಗುತ್ತದೆ. ಆದ್ದರಿಂದ ಇಲ್ಲಿನ ಹೆಚ್ಚಿನ ಮಂದಿ ಸುರತ್ಕಲ್ ಅನ್ನೇ ವ್ಯಾಪಾರ ವಹಿವಾಟಿಗೆ ಆಶ್ರಯಿಸಿಕೊಂಡಿದ್ದಾರೆ.

ಇತಿಹಾಸ ಪ್ರಸಿದ್ಧ ಭಗವತಿ ದೇವಸ್ಥಾನದ ಭಂಡಾರ ಮನೆ, ಅರ್ಚಕರ ಮನೆ ಕೂಗಳತೆ ದೂರದ ಕದಿಕೆಯಲ್ಲಿದೆ. ದೇವಸ್ಥಾನಕ್ಕೆ ಭಂಡಾರವನ್ನು ದೋಣಿ ಮೂಲಕವೇ ತರಬೇಕಾದ ಪರಿಸ್ಥಿತಿ ಇದ್ದು, ಭಕ್ತರಿಗೆ ಅಪಾಯ ಉಂಟಾಗುವ ಸಾಧ್ಯತೆಯೂ ಇದೆ ಎಂಬುದು ಸ್ಥಳೀಯರ ಆತಂಕ.

ಅಗತ್ಯಕಾರ್ಯಕ್ಕೆ ಬರಬೇಕಾದ ಅರ್ಚಕರೂ ಆಟೊ ರಿಕ್ಷಾ ಮೂಲಕ ಹಳೆಯಂಗಡಿ ತಲುಪಿ ಹಳೆಯಂಗಡಿಯಿಂದ ಮುಕ್ಕ, ಮುಕ್ಕದಿಂದ ಸಸಿಹಿತ್ಲುವಿಗೆ ಬಸ್ ಮೂಲಕ ಬರಬೇಕಾಗುತ್ತದೆ. ಅಲ್ಲದೆ ಸಸಿಹಿತ್ಲುವಿನ ಭಗವತಿಯ ಭಕ್ತರು ಕದಿಕೆ ಹಳೆಯಂಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಕ್ಷೇತ್ರಕ್ಕೆ ಆಗಮಿಸಬೇಕಾದರೆ ಪರದಾಡಬೇಕಾದ ಪರಿಸ್ಥಿತಿಯಿದೆ.

ಸಸಿಹಿತ್ಲುವಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮೊಗವೀರ ಸಮುದಾಯದ ಸಾಲ್ಯಾನ್, ಅಮೀನ್, ಸುವರ್ಣ ಮೂಲಸ್ಥಾನಗಳೂ ಕದಿಕೆಯಲ್ಲಿರುವುದರಿಂದ ಸೇತುವೆಯಿಲ್ಲದೆ ಕದಿಕೆಗೆ ಪ್ರಯಾಸದಿಂದ ಪ್ರಯಾಣ ಮಾಡಬೇಕಾದುದು ಅನಿವಾರ್ಯವಾಗಿದೆ.

ಕಣ್ಮರೆಯಾದ ಕಡವು: ಹಿಂದಿನ ದಿನಗಳಲ್ಲಿ ನದಿ ದಾಟಲು ಮೂರು ಕಡವಿನ ವ್ಯವಸ್ಥೆ ಇತ್ತು. ಎನ್ನುತ್ತಾರೆ ಸ್ಥಳೀಯರಾದ ಭಾಸ್ಕರ್ ಸಸಿಹಿತ್ಲು. ಹಳೆಯಂಗಡಿಗೆ  ಗುರುವಪ್ಪ ಹಳೆಯಂಗಡಿ, ಪಡುಪಣಂಬೂರಿಗೆ  ಲಿಂಗಪ್ಪ, ಚಿತ್ರಾಪುವಿಗೆ ದೀನನಾಥ ಮೊದಲಾದವರು ಕಡವು ಮೂಲಕ ಜನರನ್ನು ತಲುಪಿಸುತ್ತಿದ್ದರು ಎಂದು ಅವರು ನೆನಪಿಸುತ್ತಾರೆ. ಆದರೆ ಈಗ ಈ ಕಡವು ಕಣ್ಮರೆಯಾಗಿದೆ, ದೋಣಿಯಿರುವವರು ದೋಣಿ ಮೂಲಕ ಸಂಚರಿಸುತ್ತಾರೆ.

ಸಿದ್ಧವಾಗಿದ್ದ ಯೋಜನೆ: ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕದಿಕೆ ಸಸಿಹಿತ್ಲು ಸಂಪರ್ಕ ಕಲ್ಪಿಸುವ ಸೇತುವೆಗೆ ಯೋಜನೆ ಸಿದ್ಧಗೊಂಡಿತ್ತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ನಾಗರಾಜ ಶೆಟ್ಟಿ, ರೂ. 1.73 ಕೋಟಿ ವೆಚ್ಚ ಸೇತುವೆ ಯೋಜನೆಯನ್ನು ಘೋಷಿಸಿದ್ದರು. ಬಳಿಕ ಶಾಸಕ ಅಭಯಚಂದ್ರ ಜೈನ್ ಕೂಡ ಈ ಬಗ್ಗೆ ಪ್ರಸ್ತಾಪಿಸಿದ್ದರು. ಬಳಿಕ ರಾಜಕೀಯದಿಂದ ಯೋಜನೆ ಸ್ಥಗಿತಗೊಂಡಿತು ಎಂದು ಸ್ಥಳೀಯರು ದೂರುತ್ತಾರೆ.

ಸೇತುವೆಗಾಗಿ ಭೂಮಿ ನೀಡುತ್ತೇನೆ: ಸೇತುವೆ ನಿರ್ಮಾಣಕ್ಕೆ ಜಮೀನು ನೀಡಲು ಸಿದ್ಧ ಎಂದು ಹೇಳುವ ಸಸಿಹಿತ್ಲು ನಂದಿನಿ ನದಿ ತಟದ ನಿವಾಸಿ ಜನಾರ್ದನ ಎಸ್. ಕರ್ಕೇರ, ಯೋಜನೆಯನ್ನು ಸರ್ಕಾರ ಶೀಘ್ರವಾಗಿ ಕಾರ್ಯಗತಗೊಳಿಸಬೇಕು ಎಂದು ಒತ್ತಾಯಿಸುತ್ತಾರೆ.

ಪಾಲೆಮಾರ್ ಭರವಸೆ: ಈ ಬಾರಿಯ ಬಜೆಟ್‌ನಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನ ಮೀಸಲಿರಿಸಲು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ಭರವಸೆ ನೀಡಿದ್ದಾರೆ. ರೂ.3 ಕೋಟಿ ವೆಚ್ಚದ ಸೇತುವೆ ನಿರ್ಮಾಣ ಯೋಜನೆ ಜಾರಿಗೆ ತರುವುದಾಗಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.