ADVERTISEMENT

ಸಿಇಟಿ ಕೌನ್ಸೆಲಿಂಗ್ ಮೊದಲೊಂದು ತರಬೇತಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 10:34 IST
Last Updated 6 ಜೂನ್ 2013, 10:34 IST

ಮಂಗಳೂರು: ನಗರದ ಕಂದಕದಲ್ಲಿರುವ ಬದ್ರಿಯಾ ಪದವಿಪೂರ್ವ ಕಾಲೇಜಿನ ಸಭಾಂಗಣ ಬುಧವಾರ ಬೆಳಿಗ್ಗೆ 10 ಗಂಟೆಗೆಲ್ಲಾ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು. ಅದೊಂದು ಸ್ವಲ ಇಕ್ಕಟ್ಟಾದ ಸಭಾಂಗಣ, ಗಾಳಿ, ಬೆಳಕಿನ ಕೊರತೆಯೂ ಇತ್ತು. ಆದರೆ ಅಲ್ಲಿದ್ದವರಲ್ಲಿ ಸಿಇಟಿ ಬಗ್ಗೆ ಗೊಂದಲ ನಿವಾರಿಸಿಕೊಳ್ಳುವ ತುಡಿತ ಇತ್ತು. ಹೀಗಾಗಿ ನೀಡುತ್ತಿದ್ದ ಮಾರ್ಗದರ್ಶನವನ್ನು ಆಸಕ್ತಿಯಿಂದ ಆಲಿಸಿದರು.

ಬದ್ರಿಯಾ ಕಾಲೇಜಿನಲ್ಲಿ ನಡೆದ ಎಂಟನೇ ವರ್ಷದ ಸಿಇಟಿ ಕೌನ್ಸೆಲಿಂಗ್ ಪೂರ್ವ ಮಾರ್ಗದರ್ಶನ ಶಿಬಿರ ಇದಾಗಿತ್ತು. ಹಿದಾಯಾ ಫೌಂಡೇಷನ್ ಸಹಯೋಗದೊಂದಿಗೆ ನಗರದ ಕೆರಿಯರ್ ಗೈಡೆನ್ಸ್ ಆಂಡ್ ಇನ್‌ಫರ್ಮೇಷನ್ ಸೆಂಟರ್ ತರಬೇತಿ ನಡೆಸಿಕೊಟ್ಟಿತು. ಸಂಸ್ಥೆಯ ಯು.ಎಚ್.ಉಮರ್ ಅವರು ಸರಳ ಭಾಷೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಅರ್ಥವಾಗುವ ರೀತಿಯಲ್ಲಿ ತರಬೇತಿ ನೀಡಿದರು.

ವೈದ್ಯಕೀಯ, ದಂತವೈದ್ಯಕೀಯ, ಆಯುರ್ವೇದ, ಹೋಮಿಯೋಪಥಿ, ಯುನಾನಿ, ಯೋಗ, ನ್ಯಾಚುರೋಪಥಿ ಹಾಗೂ ವಿವಿಧ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ನಡೆಯುವ ಆನ್‌ಲೈನ್ ಕೌನ್ಸೆಲಿಂಗ್‌ನ ವಿಧಾನ, ನೋಂದಣಿಗೆ ಬೇಕಾದ ಕಾಗದ ಪತ್ರಗಳು, ಸೀಟುಗಳ ಆಯ್ಕೆ ಪ್ರಕ್ರಿಯೆ ಮತ್ತು ಇತರ ಪೂರಕ ಮಾಹಿತಿಗಳನ್ನು ಅವರು ನೀಡಿದರು.

ಹಿದಾಯಾ ಫೌಂಡೇಷನ್‌ನ ಖಾಸಿಂ ಅಹ್ಮದ್, ಕಾಲೇಜಿನ ಪ್ರಾಚಾರ್ಯ ಎನ್.ಇಸ್ಮಾಯಿಲ್, ಇಮ್ತಿಯಾಜ್, ಅಕ್ಬರಲಿ ಇತರರು ಇದ್ದರು. ಬದ್ರಿಯಾ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಇಲ್ಲ. ಆದರೆ ಸುತ್ತಮುತ್ತಲಿನ ಹಲವಾರು ಕಾಲೇಜುಗಳ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎಂಬ ಕಾರಣಕ್ಕೆ ಕಾಲೇಜಿನಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಉಡುಪಿ, ಪುತ್ತೂರು ಸಹಿತ ಹಲವಾರು ಭಾಗಗಳಿಂದ ಸಿಇಟಿ ತೇರ್ಗಡೆಯಾದ ನೂರಾರು ವಿದ್ಯಾರ್ಥಿಗಳು ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.