ADVERTISEMENT

ಸುಬ್ರಹ್ಮಣ್ಯ: ಬೀದಿ ಮಡೆಸ್ನಾನ ನೀರಸ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 12:56 IST
Last Updated 14 ಡಿಸೆಂಬರ್ 2012, 12:56 IST

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಜಾತ್ರಾ ಸಂದರ್ಭ ಸುಬ್ರಹ್ಮಣ್ಯದಲ್ಲಿ ವಿವಿಧ ರೀತಿಯ ಉರುಳು ಸೇವೆ ನಡೆಯುತ್ತಿದ್ದು, ಇದರಲ್ಲಿ ಬೀದಿ ಮಡೆಸ್ನಾನ ವಿಶೇಷವಾದದ್ದು. ಹೈಕೋರ್ಟ್ ಆದೇಶದ ಮೇರೆಗೆ ಈ ಬಾರಿ ಮಡೆಮಡೆಸ್ನಾನ ರೂಪಾಂತರಗೊಂಡಿರುವುದರ ಪರಿಣಾಮ ಬೀದಿ ಮಡೆಸ್ನಾನಕ್ಕೂ ತಟ್ಟಿದೆ.

ಹರಕೆ ಹೊತ್ತ ಭಕ್ತರು ಕುಮಾರಧಾರ ಹೊಳೆಯಲ್ಲಿ ತೀರ್ಥ ಸ್ನಾನ ಮಾಡಿ ಸುಮಾರು 2 ಕಿ.ಮೀ ದೂರದ ರಥಬೀದಿವರೆಗೆ ಬೀದಿಯಲ್ಲಿ ಉರುಳುತ್ತಾ ಸಾಗುತ್ತಿದ್ದರು. ಉರುಳುತ್ತಲೇ ದೇವಳದ  ಮುಂಭಾಗದ ದರ್ಪಣ ತೀರ್ಥ ನದಿಯಲ್ಲಿ ಬಿದ್ದು ಅಲ್ಲಿಂದ ದೇವರ ದರ್ಶನ ಮಾಡುತ್ತಿದ್ದರು. ಈ ಉರುಳುಸೇವೆ ಪ್ರತಿ ವರ್ಷ ಲಕ್ಷದೀಪೋತ್ಸವದಂದು ಆರಂಭಗೊಳ್ಳುತ್ತಿತ್ತು.

ಈ ಬಾರಿ ಬುಧವಾರ ಲಕ್ಷದೀಪೋತ್ಸವದ ವೇಳೆ ಉರುಳುಸೇವೆ ನಡೆಯಲಿಲ್ಲ. ಗುರುವಾರ ಬೆರಳಣಿಕೆಯ ಭಕ್ತರು ಮಾತ್ರ ಈ ಸೇವೆ ಸಲ್ಲಿಸಿದರು.

ಮೇಲ್ವರ್ಗದವರ ಎಂಜಲೆಲೆ ಮೇಲೆ ಕೆಳವರ್ಗದವರು ಉರುಳುವ ಮಡೆಮಡೆಸ್ನಾನ ಅಸ್ಪೃಶ್ಯತೆಯ ಸಂಕೇತವಾಗಿದ್ದು, ಇದನ್ನು ನಿಲ್ಲಸಬೇಕೆಂದು ಒಂದು ವರ್ಗ ಆರೋಪಿಸಿತ್ತು. ಇನ್ನೊಂದು ವರ್ಗದವರು  ಈ ಸಂಪ್ರದಾಯ ಮುಂದು ವರಿಸುವಂತೆ ಪಟ್ಟು ಹಿಡಿದಿದ್ದರು.

ಮುಜರಾಯಿ ಇಲಾಖೆಗೊಳಪಟ್ಟ ಕುಕ್ಕೆಯಲ್ಲಿ ಭೇದ ಭಾವವಿಲ್ಲದೆ ಸಹಪಂಕ್ತಿ ಭೋಜನಕ್ಕೆ ಅವಕಾಶ ಕಾಯ್ದುಕೊಳ್ಳುವಂತೆ ಕೋರ್ಟ್‌ನ ಆದೇಶ ನೀಡಿದ್ದರಿಂದ ಹೊರಾಂಗಣದಲ್ಲಿ ಭೋಜನ ವ್ಯವಸ್ಥೆ ಇಲ್ಲ. ಹಾಗಾಗಿ  ವಿವಾದ ಬಗೆಹರಿದಂತಾಗಿದೆ.

ಗುಟ್ಕಾ, ಸಿಗರೇಟು, ಮದ್ಯಪಾನ  ನಿಷೇಧ?
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇದೇ 15ರಿಂದ ಜ.15ರವರೆಗೆ ವಿಶೇಷ ಜನಸಂದಣಿ ಇರುವುದರಿಂದ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಯು  ಸುಬ್ರಹ್ಮಣ್ಯ ಗ್ರಾ.ಪಂ ಕೇಂದ್ರ ಕಚೇರಿಯ ಸುತ್ತಲಿನ 2.ಕಿ.ಮೀ ವ್ಯಾಪ್ತಿಯಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸ್ಥಳದಲ್ಲಿ ಧೂಮಪಾನ, ಮದ್ಯಪಾನ ಹಾಗೂ ಗಲಿಜು ಮಾಡುವುದನ್ನು ತಾತ್ಕಾಲಿಕ ನಿಷೇಧಿಸಿದೆ.

ಒಂದು ತಿಂಗಳವರೆಗೆ ಯಾವುದೇ ವರ್ತಕರು ಬೀಡಿ, ಸಿಗರೇಟು, ಗುಟ್ಕಾ ಹಾಗೂ ಮದ್ಯ ಮಾರಬಾರದು. ತಪ್ಪಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು  ಪಂಚಾಯತ್ ನಿರ್ಣಯ ಕೈಗೊಂಡಿದೆ. ಆರೋಗ್ಯ ಇಲಾಖೆ ಸಹಕಾರದೊಂದಿಗೆ, ಸಾರ್ವಜನಿಕರ ಆರೋಗ್ಯಕ್ಕಾಗಿ ಪರಿಸರವನ್ನು ಶುಚಿತ್ವವಾಗಿ ಇಟ್ಟುಕೊಳ್ಳುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾ.ಪಂ ಆಡಳಿತ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವರ್ತಕ ಸಂಘ ಆಕ್ರೋಶ
ಗ್ರಾ.ಪಂ ಆಡಳಿತ ಮನ್ಸೂಚನೆ ಇಲ್ಲದೆ ಗುಟ್ಕಾ, ಧೂಮಪಾನ, ಮದ್ಯಪಾನ ನಿಷೇಧಿಸಿರುವುದರಿಂದ ವರ್ತಕರು  ನಷ್ಟ ಅನುಭವಿಸುವಂತಾಗಿದೆ. ಈ ಬಗ್ಗೆ ಒಂದು ತಿಂಗಳಿಗೆ ಮುಂಚಿತವಾಗಿ ಸೂಚನೆ ನೀಡಬೇಕಿತ್ತು ಎಂದು ವರ್ತಕರು ಆಕ್ರೊಶ ವ್ಯಕ್ತ ಪಡಿಸ್ದ್ದಿದಾರೆ. ಈ ನಿಷೇಧವನ್ನು ಸಡಿಲಿಸುವಂತೆ ವರ್ತಕರ ಸಂಘ ಸಾರ್ವಜನಿಕ ಸಹಿ ಸಂಗ್ರಹಿಸಿ ಪಂಚಾಯತ್‌ಗೆ ಮನವಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.