ADVERTISEMENT

‘ಅಂತರ ಬೇಡ–ಜನರ ಜತೆ ಬೆರೆಯಿರಿ’

ಅಗಲುವಿಕೆ ನೋವಿನಲ್ಲೂ ನಗೆಗಡಲು ಉಕ್ಕಿಸಿದ ಡಿ.ಸಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 7:17 IST
Last Updated 14 ಡಿಸೆಂಬರ್ 2013, 7:17 IST

ಮಂಗಳೂರು: ‘ಈ ವ್ಯಕ್ತಿಗೆ ತಾನು ಡಿ.ಸಿ. ಎಂಬ ವಿಚಾರವೇ ಮರೆತಂತಿದೆ. ಇಷ್ಟು ಒಳ್ಳೆ ಕಚೇರಿ ಮಾಡಿಕೊಟ್ಟರೂ ಹೊರಗಡೆ ಬಂದು ಮೀನಿನ ದುರ್ವಾಸನೆಯಲ್ಲಿ ಸೇವಿಸುತ್ತಾ ಕುಳಿತುಕೊಳ್ಳು­ತ್ತಾನೆ... ದಾರಿಯಲ್ಲಿ ಸಿಕ್ಕಸಿಕ್ಕವರನ್ನು ಮಾತನಾಡಿ­ಸುತ್ತಾನೆ. ಪೆಟ್ಟ್‌್ ಕಮ್ಮಿ ಇರಬೇಕು ಇವನಿಗೆ?... ಸ್ವಲ್ಪವೂ ಗಾಂಭೀರ್ಯ ಇಲ್ಲ... ನೀವೆಲ್ಲ ನನ್ನ ಬಗ್ಗೆ ಖಂಡಿತಾ ಹೀಗೆಯೇ ಯೋಚಿಸಿರುತ್ತೀರಿ ಎಂದು ನನಗೆ ಗೊತ್ತಿದೆ.

36 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ನಾನು ಬಹಳಷ್ಟನ್ನು ಕಲಿತಿದ್ದೇನೆ. ಅಧಿಕಾರಕ್ಕಂಟಿಕೊಂಡು ಜನರಿಂದ ದೂರವಾಗಿ ಬದುಕುವುದಕ್ಕಿಂತ ಎಲ್ಲರೊಳಗೊಂದಾಗಿ ಆಡಳಿತ ಸುಧಾರಿಸುವುದು ಒಳಿತು ಎಂಬುದು ನಾನು ಕಂಡುಕೊಂಡ ಪಾಠ...’
ಕಾರ್ಮಿಕ ಇಲಾಖೆ ಆಯುಕ್ತರಾಗಿ ವರ್ಗವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಎನ್‌.ಪ್ರಕಾಶ್‌ ಅವರ ಒಡಲಾಳದ ಮಾತುಗಳಿವು.

ಜಿಲ್ಲೆಯ ಅಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡ ಬೀಳ್ಕೊ­ಡುಗೆ ಸಮಾರಂಭದಲ್ಲಿ ಎಂದಿನ ತಿಳಿ ಹಾಸ್ಯಭರಿತ ಶೈಲಿಯಲ್ಲಿ  ಒಂದು ವರ್ಷದ ಅನುಭವವನ್ನು ನವಿರಾಗಿ ಹಂಚಿಕೊಂಡರು. ಎಲ್ಲರನ್ನೂ ನಗಿಸುತ್ತಲೇ ಆಡಳಿತವನ್ನು ಸುಗಮಗೊಳಿಸುವ ಸೂತ್ರವನ್ನು ಕಟ್ಟಿಕೊಟ್ಟ ಅವರು, ತಮ್ಮ ನಗುಮೊಗದ ಉದ್ದೇಶ­ವನ್ನು, ನಗುವಿನ ಹಿಂದಿನ ನೋವನ್ನೂ ಬಿಚ್ಚಿಟ್ಟರು.

‘ಮುಖ್ಯಮಂತ್ರಿ ಕಚೇರಿಯಲ್ಲೇ 20 ವರ್ಷಕ್ಕೂ ಅಧಿಕ ಸೇವಾವಧಿಯನ್ನು ಕಳೆದ ನಾನು, 78 ವರ್ಷದ ಮುಖ್ಯಮಂತ್ರಿ ಕಾರ್ಯದೊತ್ತಡದ ನಡುವೆಯೂ ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆವರೆಗೂ ಸುಡುಬಿಸಿಲಿನಲ್ಲಿ ನಿಂತು ಜನರ ಅಷ್ಟೂ ಅಹ­ವಾಲುಗಳನ್ನು ತಾಳ್ಮೆಯಿಂದ ಆಲಿಸುತ್ತಿದ್ದನ್ನು ನೋಡಿದ್ದೇನೆ.

ಒಬ್ಬ ಜಿಲ್ಲಾಧಿಕಾರಿಯನ್ನು ಕಾಣಲು ಜನ ಕಾಯಬೇಕಾದ ಸ್ಥಿತಿ ಕಂಡು ನೋವಾಯಿತು. ಅದಕ್ಕಾಗಿ, ಜನರ ಭೇಟಿ ಇದ್ದ ನಿರ್ಬಂಧಗಳನ್ನು ಕಿತ್ತು ಹಾಕಿದ್ದೇನೆ. ಎಲ್ಲಾ ಅಧಿಕಾರಿಗಳು ಜನರನ್ನು ಕಾಯಿಸದೆ, ಅಧಿಕಾರದ ದರ್ಪದಿಂದ ಅಂತರ ಕಾಪಾಡದೆ, ಅವರೊಂದಿಗೆ ಬೆರೆತು ಕಾರ್ಯ­ನಿರ್ವಹಿಸಿದರೆ ಆಡಳಿತ ಯಂತ್ರ ಇನ್ನಷ್ಟು ಸುಗಮ­ವಾಗಿ ಕಾರ್ಯ ನಿರ್ವಹಿಸಲು ಸಾಧ್ಯ’ ಎಂದರು.

‘ಅಧಿಕಾರಿಗಳಿಗೆ ಬೈದು, ನೋವುಂಟು ಮಾಡಿ ಅವರಿಂದ ಕೆಲಸ ಪಡೆಯಬಹುದು ಎಂಬ ಸಿದ್ಧಾಂತದಲ್ಲಿ ನನಗೆ ನಂಬಿಕೆ ಇಲ್ಲ. ಆದರೆ, ಅಂತಹ ವಾತಾವರಣ ಸೃಷ್ಟಿಯಾಗುವುದಕ್ಕೂ ನೀವೂ ಅವಕಾಶ ನೀಡಬಾರದು’ ಎಂದರು. ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ವಾತಾವರಣ­ವಿದೆ.

ADVERTISEMENT

ಉತ್ತಮ ಆಡಳಿತ ವರ್ಗವಿದೆ. ಆದರೆ, ಹೊರಗಡೆ ಬಿಸಿಲು ಜಾಸ್ತಿ. ಹೊರಗಡೆ ಹೋದಾಗ ಚುಚ್ಚಿದ ಅನುಭವವಾಗಿದೆ. ಒಮ್ಮೆ ಸ್ನಾನ ಮಾಡಿದರೆ, ಚುಚ್ಚುವಿಕೆಯ ಅನುಭವ ನೀಗ­ಬಹುದು. ಇಲ್ಲಿ ಕೆಲಸ ಮಾಡಿದ್ದರಿಂದ ವಯಸ್ಸಾ­ದಂತೆ ಕಳೆದುಕೊಂಡ ಚೈತನ್ಯ ಮತ್ತೆ ತುಂಬಿದಂತಾ­ಗಿದೆ. ಅನಿಸಿಕೊಂಡಿದ್ದೆಲ್ಲವನ್ನೂ ಸಾಧಿಸಿದ ತೃಪ್ತಿ ಇರದಿದ್ದರೂ, ಜಯದ ನಗೆ ಬೀರಿ ಇಲ್ಲಿಂದ ನಿರ್ಗಮಿಸುತ್ತಿದ್ದೇನೆ.  ಒಂದು ವರ್ಷದ ಸೇವಾವಧಿ ಖುಷಿ ಕೊಟ್ಟಿದೆ’ ಎಂದರು. 

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಪಾಲಿಕೆ ಆಯುಕ್ತ ಅಜಿತ್‌ ಕುಮಾರ್‌ ಹೆಗ್ಡೆ ಶಾನಾಡಿ, ಸಹಾಯಕ ಆಯುಕ್ತರಾದ ಕೃಷ್ಣಮೂರ್ತಿ, ಡಾ.ಪ್ರಶಾಂತ್‌, ಕಾನೂನು ಸಲಹೆಗಾರ ಪಾಟೀಲ್‌ ಮೊದಲಾದವರು ಇದ್ದರು.

‘ಭಾರತರತ್ನ ಇಂಥಹವರಿಗೆ ಕೊಡಿ’
ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿದ ಬಳಿಕ ಅರೆಕ್ಷಣ ಅಧೀರರಾದ, ಎನ್‌.ಪ್ರಕಾಶ್‌, ಜಮಾದಾರ್‌ ಮನೋಹರ್‌ ಅವರನ್ನು ವೇದಿಕೆಗೆ ಕರೆದರು. ‘ಭಾರತ ರತ್ನ ಕೊಡುವುದಿದ್ದರೆ ಇಂಥಹವರಿಗೆ ಕೊಡಬೇಕು. ಈ ವ್ಯಕ್ತಿ ಒಂದು ವರ್ಷದಿಂದ ರೋಬೋಟ್‌ ತರಹ ಕೆಲಸ ಮಾಡುವುದನ್ನು ನೊಡಿದ್ದೇನೆ. ಅರೆಕ್ಷಣವೂ ಭಾವಾತಿರೇಕಕ್ಕೆ ಒಳಗಾಗಿದ್ದನ್ನು ನೋಡಿಲ್ಲ’ ಎಂದು ತಮಗೆ ಹೊದಿಸಿದ್ದ ಶಾಲನ್ನು ಅವರಿಗೆ ಹೊದಿಸಿ ಸನ್ಮಾನಿಸಿದರು.

‘ನಿನಗೆ ಕೊಡುವುದಕ್ಕೆ ಬೇರೇನೂ ಇಲ್ಲ. ಅಧಿಕಾರಿಗಳು ಕೊಡುವುದರಲ್ಲಿ ಕಳ್ಳರು’ ಎಂದಾಗ ಸಭೆಯಲ್ಲಿ ಮತ್ತೆ ನಗೆಗಡಲು ಉಕ್ಕಿತು.

ಸಿಇಒಗೆ ಅಧಿಕಾರ ಹಸ್ತಾಂತರ
ಜಿಲ್ಲಾಧಿಕಾರಿ ಎನ್‌.ಪ್ರಕಾಶ್‌ ಅವರನ್ನು ಕಾರ್ಮಿಕ ಇಲಾಖೆಯ ಆಯುಕ್ತರನ್ನಾಗಿ ವರ್ಗಾಯಿಸಿರುವ ಸರ್ಕಾರ ಇಲ್ಲಿನ ಜಿಲ್ಲಾಧಿಕಾರಿ ಹುದ್ದೆಗೆ ಇನ್ನೂ ಯಾರನ್ನೂ ನೇಮಿಸಿಲ್ಲ. ಪ್ರಕಾಶ್‌ ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ ಅವರಿಗೆ ಶುಕ್ರವಾರ ಅಧಿಕಾರ ಹಸ್ತಾಂತರಿಸಿದ್ದಾರೆ. ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳು ಇನ್ನೂ ಪ್ರತಿಜ್ಞಾ ವಿಧಿ ಸ್ವೀಕರಿಸದಿರುವುದರಿಂದ ಪಾಲಿಕೆ ಆಡಳಿತದ ಹೊಣೆಯೂ ಜಿಲ್ಲಾಧಿಕಾರಿ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.