ಮಂಗಳೂರು: ನಗರದ ಪ್ರಮುಖ ಐತಿಹಾಸಿಕ ಸ್ಥಳಗಳು, ಇಲ್ಲಿನ ಕಲೆ, ಸಂಸ್ಕೃತಿ, ಜೀವನ ಪದ್ಧತಿಯ ಸಮಗ್ರಮ ಮಾಹಿತಿ ನೀಡಲು ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಮತ್ತು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹೊರತಂದಿರುವ ಮೂರು ಸಂಪುಟಗಳ ‘ಮಂಗಳೂರು ದರ್ಶನ’ ಕೃತಿಯನ್ನು ಪುರಭವನದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ಈ ಕೃತಿಯು ಬಂದರು ನಗರಿಯ ಚರಿತ್ರೆ ಮತ್ತು ವರ್ತಮಾನದ ಬೆಳವಣಿಗೆಗಳ ಚಿತ್ರಣವನ್ನು ಓದುಗರಿಗೆ ಕಟ್ಟಿಕೊಡಲಿದೆ.
ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಅವರು ಭತ್ತದ ಮುಡಿಯೊಳಗಿನಿಂದ ಕೃತಿಗಳನ್ನು ಹೊರತೆಗೆಯುವ ಮೂಲಕ ‘ಮಂಗಳೂರು ದರ್ಶನ’ವನ್ನು ಓದುಗರಿಗೆ ಮುಕ್ತಗೊಳಿಸಿದರು. 760 ಪುಟಗಳ ಮೊದಲ ಸಂಪುಟವು ಮಂಗಳೂರಿನ ಭೂವಿವರಣೆ, ಪರಿಸರ, ಸಸ್ಯವೈವಿಧ್ಯ, ನಗರದ ಇತಿಹಾಸ, ಕಲೆ ಮತ್ತು ಸಂಸ್ಕೃತಿಯ ವಿವರಗಳನ್ನು ಒದಗಿಸಲಿದೆ. 862 ಪುಟಗಳ ಎರಡನೆ ಸಂಪುಟವು ಜಿಲ್ಲಾಡಳಿತ, ಮಹಾನಗರ ಪಾಲಿಕೆ, ನಗರಾಭಿವೃಧ್ಧಿ ಪ್ರಾಧಿಕಾರ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳು, ಇಲಾಖೆಗಳು ಮಂಗಳೂರಿನಲ್ಲಿ ಬೆಳೆದುಬಂದ ಬಗೆಯನ್ನು ವಿವರಿಸುತ್ತದೆ. 750 ಪುಟಗಳ ಮೂರನೇ ಸಂಪುಟವು ನಗರ ನಿರ್ಮಾಣದಲ್ಲಿ ದುಡಿದ ಪ್ರಮುಖರು, ವಿವಿಧ ಕ್ಷೇತ್ರಗಳ ಪ್ರಮುಖ ಸಾಧಕರು, ಕನ್ನಡ, ತುಳು, ಕೊಂಕಣಿ, ಬ್ಯಾರಿ ಭಾಷೆಯ ಸಾಹಿತ್ಯ ಲೋಕದಲ್ಲಿ ಸಾಧನೆ ಮಾಡಿದವರ ಸಮಗ್ರ ಮಾಹಿತಿಯನ್ನು ಒದಗಿಸುತ್ತದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯ ಮತ್ತು ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಅವರು ‘ಮಂಗಳೂರು ದರ್ಶನ’ದ ಪ್ರಧಾನ ಸಂಪಾದಕರು. ಡಾ.ವಾಮನ ನಂದಾವರ, ಡಾ. ಸತ್ಯನಾರಾಯಣ ಮಲ್ಲಿಪಟ್ಟಣ ಮತ್ತು ಮುದ್ದು ಮೂಡುಬೆಳ್ಳೆ ಅವರು ಸಹಾಯಕ ಸಂಪಾದಕರಾಗಿ ಕೃತಿಯನ್ನು ಸಂಪಾದಿಸುವಲ್ಲಿ ಶ್ರಮಿಸಿದ್ದರು. ₹ 1,500 ಮುಖಬೆಲೆಯ ಈ ಮೂರು ಸಂಪುಟಗಳನ್ನು ₹ 800ರ ರಿಯಾಯಿತಿ ದರದಲ್ಲಿ ಎರಡು ತಿಂಗಳ ಕಾಲ ಮಾರಾಟ ಮಾಡಲಾಗುತ್ತದೆ.
ಸಾಹಸಿ ವಂಶವಾಹಿ
‘ಮಂಗಳೂರು ದರ್ಶನ’ ಕೃತಿ ಕುರಿತು ಮಾತನಾಡಿದ ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್, ‘ಬಂಡುಕೋರತನ ಮತ್ತು ಸಾಹಸಿ ಪ್ರವೃತ್ತಿ ಮಂಗಳೂರಿನ ಜನತೆಯ ವಂಶವಾಹಿಯಲ್ಲೇ ಅಡಗಿದೆ. ಅದಕ್ಕಾಗಿಯೇ ಇಲ್ಲಿನ ಜನರು ವ್ಯಾಪಾರ, ಉದ್ದಿಮೆ, ಕಲೆ, ಸಂಸ್ಕೃತಿ, ಶಿಕ್ಷಣ, ಆರೋಗ್ಯ ಎಲ್ಲಾ ಕ್ಷೇತ್ರಗಳಲ್ಲೂ ಅಚ್ಚರಿಯ ಸಾಧನೆಗಳನ್ನು ಮಾಡಿದ್ದಾರೆ. ಒಂದು ಚಿಕ್ಕ ಜನವಸತಿ ಪ್ರದೇಶವು ಬಂದರು ನಗರವಾಗಿ, ವ್ಯಪಾರೋದ್ಯಮದ ಕೇಂದ್ರ ಬಿಂದುವಾಗಿ ಬೆಳೆದ ಪರಿ ಅದ್ಭುತ’ ಎಂದು ವ್ಯಾಖ್ಯಾನಿಸಿದರು.
‘ಇಲ್ಲಿನ ಪುರಾಣಗಳನ್ನು ಅವಲೋಕಿಸಿದರೆ ತುಳುನಾಡಿನಲ್ಲಿ ದೈವಗಳೂ ಸೌಹಾರ್ದಯುತವಾಗಿ ಸಹಬಾಳ್ವೆ ನಡೆಸುತ್ತಿದ್ದವು ಎಂಬುದು ಅರಿವಿಗೆ ಬರುತ್ತದೆ. ಇಲ್ಲಿನ ಜನರು ಅರಬ್ ದೇಶಗಳ ಜೊತೆ ನಡೆಸಿದ ವ್ಯಾಪಾರ ವಹಿವಾಟು ಸಂಬಂಧವು ವಿವಿಧ ಧರ್ಮಗಳ ಜನರು ಸಹಬಾಳ್ವೆಯಿಂದ ಬದುಕುವುದನ್ನು ಕಲಿಸಿತು. ಸೌಹಾರ್ದ ಮತ್ತು ಸಹಬಾಳ್ವೆ ಈ ನೆಲದ ದೊಡ್ಡ ಗುಣ. ಅದನ್ನು ಜತನದಿಂದ ಕಾಯ್ದುಕೊಳ್ಳುವುದು ಮಂಗಳೂರಿನ ಜನರ ಜವಾಬ್ದಾರಿ’ ಎಂದು ಕಿವಿಮಾತು ಹೇಳಿದರು.
ಕೃತಿ ರಚನೆಯಲ್ಲಿ ಎದುರಾದ ಸವಾಲುಗಳನ್ನು ಕುರಿತು ವಿವರಿಸಿದ ವಿವೇಕ ರೈ, ‘ಪ್ರತಿಯೊಂದು ವಿಷಯದ ಬಗ್ಗೆಯೂ ಆಳವಾದ ಅಧ್ಯಯನ ಮಾಡಿದ ಬಳಿಕವೇ ಲೇಖನಗಳನ್ನು ಸಿದ್ಧಪಡಿಸಿದ್ದೇವೆ. ಈ ಕೃತಿಗಾಗಿ ನಾವು ಸಂಗ್ರಹಿಸಿರುವ ಮಾಹಿತಿಗಳು ಇನ್ನೂ 2,000 ಪುಟಗಳ ಕೃತಿಯನ್ನು ತಯಾರಿಸುವುದಕ್ಕೆ ಸಾಕಾಗುತ್ತದೆ. ಮಂಗಳೂರು ದರ್ಶನಕ್ಕಾಗಿ 200 ಮಂದಿಯನ್ನು ಸಂದರ್ಶಿಸಿದ್ದೇವೆ. ಈ ಕೃತಿಯು ಮಂಗಳೂರಿನ ನಿಜವಾದ ಚರಿತ್ರೆ ಮತ್ತು ವರ್ತಮಾನದ ಚಿತ್ರಣವನ್ನು ಕಟ್ಟಿಕೊಡುವುದು ನಿಶ್ಚಿತ’ ಎಂದರು.
ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ‘ಮಂಗಳೂರಿನ ಚರಿತ್ರೆಯೊಳಗೆ ಅಡಗಿರುವ ವಿಚಾರಗಳಿಗೆ ವರ್ತಮಾನದ ಅನುಭವಗಳನ್ನು ಸೇರಿಸಿಕೊಂಡು ಈ ಕೃತಿಯನ್ನು ರಚಿಸಲಾಗಿದೆ. ಭವಿಷ್ಯದ ಜನರಿಗೆ ಮಂಗಳೂರು ನಗರದ ಬೆಳವಣಿಗೆಯ ಹಂತಗಳನ್ನು ಖಚಿತವಾಗಿ ಹೇಳುವ ಕಾಲಕೋಶದಂತೆ ಈ ಮೂರು ಸಂಪುಟಗಳಿವೆ’ ಎಂದು ಬಣ್ಣಿಸಿದರು.
ಶಾಸಕ ಜೆ.ಆರ್.ಲೋಬೊ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವ ಕೆ.ಅಭಯಚಂದ್ರ ಜೈನ್, ಶಾಸಕ ಬಿ.ಎ.ಮೊಯಿದ್ದೀನ್ ಬಾವ, ಮೇಯರ್ ಹರಿನಾಥ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ದಕ್ಷಿಣ ಕನ್ನಡ ಎಸ್‌ಪಿ ಡಾ.ಎಸ್.ಡಿ.ಶರಣಪ್ಪ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ.ಮಹಮ್ಮದ್ ಹನೀಫ್, ಮಹಾನಗರ ಪಾಲಿಕೆ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ, ಮುಡಾ ಆಯುಕ್ತ ಮೊಹಮ್ಮದ್ ನಜೀರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.