ADVERTISEMENT

‘ಮೋದಿಗೂ ಅವಕಾಶ ಕೊಡಿ’

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 10:30 IST
Last Updated 18 ಮಾರ್ಚ್ 2014, 10:30 IST

ಮಂಗಳೂರು: ‘ದೇಶವನ್ನು ಕಾಂಗ್ರೆಸ್‌ 65 ವರ್ಷ ಕಾಲ ಆಳಿದೆ. ಬಿಜೆಪಿಯ ನರೇಂದ್ರ ಮೊದಿ ಅವರಿಗೂ ಒಂದು ಅವಕಾಶ ನೀಡಿ’ ಎಂದು ಇತ್ತೀಚೆಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ತೇಜಸ್ವಿನಿ ಗೌಡ ಮನವಿ ಮಾಡಿದರು.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯುಪಿಎ ಸರ್ಕಾರದ ಭ್ರಷ್ಟಾಚಾರಗಳಿಂದ ಬೇಸತ್ತು ಬಿಜೆಪಿ ಸೇರಿದ್ದೇನೆ. ಜನಸಾಮಾನ್ಯರು ದೇಶದ ಬಗ್ಗೆ ಹೊಂದಿದ್ದ ಕನಸನ್ನು ಕಾಂಗ್ರೆಸ್‌ ಛಿದ್ರಗೊಳಿಸಿದೆ. ಜಾತ್ಯತೀತತೆ ಹೆಸರಿನಲ್ಲಿ ಕಾಂಗ್ರೆಸ್‌ ಎಷ್ಟು ವರ್ಷ ದೇಶವನ್ನು ವಂಚಿಸ­ಬಹುದು?’ ಅವರು ಪ್ರಶ್ನಿಸಿದರು.

‘ಭ್ರಷ್ಟಾಚಾರ ಆರೋಪ ಹೊತ್ತ ಅಶೋಕ್‌ ಚೌಹಾಣ್‌ಗೆ ಟಿಕೆಟ್‌ ನೀಡಿರುವ ಕಾಂಗ್ರೆಸ್‌, ಶೀಲಾ ದೀಕ್ಷಿತ್‌, ಕಾಮನ್ವೆಲ್ತ್‌ ಹಗರಣದ ರೂವಾರಿ ಸುರೇಶ್‌ ಕಲ್ಮಾಡಿ ಅವರಿಗೂ ಮಣೆ ಹಾಕಿದೆ’ ಎಂದರು.

ಬಿಜೆಪಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಟಿಕೆಟ್‌ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿ ಸರ್ಕಾರ ತಪ್ಪು ಮಾಡಿದೆ ನಿಜ. ಅದಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ. ಈಗ ಮತ್ತೊಂದು ಅವಕಾಶ ನೀಡಬೇಕು’ ಎಂದರು.

‘ರಾಜ್ಯದಲ್ಲಿ ಮಹಿಳೆಗೆ ರಕ್ಷಣೆ ಇಲ್ಲ. ಸಚಿವರೊಬ್ಬರು ಪತ್ರಕರ್ತೆ ಸಹಿತ ಮಾಧ್ಯಮದ ಮಂದಿಯನ್ನು ಒತ್ತೆ ಇಟ್ಟುಕೊಂಡು ಹಲ್ಲೆ ನಡೆಸಿದ್ದಾರೆ. ಪತ್ರಕರ್ತರು ನೀಡಿದ ದೂರನ್ನೂ ಸರ್ಕಾರ ದಾಖಲಿಸದಂತೆ ಸಚಿವರು ಒತ್ತಡ ಹೇರಿದ್ದಾರೆ’ ಎಂದು ಅವರು ಆರೋಪಿಸಿದರು.

‘ಹಿಂದೂಗಳ ಮತ ಬೇಡ ಎಂದು ಹೇಳಲಿ’ ಎಂದು ಕಾಂಗ್ರೆಸ್‌ಗೆ ಸವಾಲು ಹಾಕಿದ ಅವರು, ‘ಮೋದಿ ಅವರನ್ನು ಕಾಂಗ್ರೆಸ್‌ ಕನ್ನಡಕದಲ್ಲಿ ನೋಡಬೇಡಿ’ ಎಂದು ಮುಸ್ಲಿಮರಲ್ಲಿ ಮನವಿ ಮಾಡಿದರು.

‘ಈ ಬಾರಿಯದು ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಜನಾರ್ದನ ಪೂಜಾರಿ ಅವರ ನಡುವಿನ ಹೋರಾಟ ಅಲ್ಲ. ಈ ಚುನಾವಣೆಯಲ್ಲಿ ವ್ಯಕ್ತಿ ಮುಖ್ಯ ಅಲ್ಲ’ ಎಂದರು.  ಮುಖಂಡರಾದ ಸುಲೋಚನಾ ಭಟ್‌, ಶಾಂತಾ ಆರ್‌, ಪುಷ್ಪಲತಾ, ಪ್ರಭಾಮಾಲಿನಿ, ಶಕೀಲಾ ಕಾವ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.