ADVERTISEMENT

‘ಸಂಸತ್ತಿನ ಆವರಣದಲ್ಲಿ ಅಯ್ಯಂಗಾಳಿ ಪ್ರತಿಮೆ’

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2014, 7:27 IST
Last Updated 6 ಫೆಬ್ರುವರಿ 2014, 7:27 IST
ಕಾಸರಗೋಡಿನ ನಾಯಮ್ಮಾರಮೂಲೆಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾದ ಅಯ್ಯಂಗಾಳಿ ಪೀಠವನ್ನು ಕೇಂದ್ರ ಕಾರ್ಮಿಕ ಖಾತೆ ಸಹ ಸಚಿವ ಕೊಡಿಕುನ್ನಿಲ್ ಸುರೇಶ್ ಮಂಗಳವಾರ ಉದ್ಘಾಟಿಸಿದರು.
ಕಾಸರಗೋಡಿನ ನಾಯಮ್ಮಾರಮೂಲೆಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾದ ಅಯ್ಯಂಗಾಳಿ ಪೀಠವನ್ನು ಕೇಂದ್ರ ಕಾರ್ಮಿಕ ಖಾತೆ ಸಹ ಸಚಿವ ಕೊಡಿಕುನ್ನಿಲ್ ಸುರೇಶ್ ಮಂಗಳವಾರ ಉದ್ಘಾಟಿಸಿದರು.   

ಕಾಸರಗೋಡು: ಸಂಸತ್ತಿನ ಆವರಣದಲ್ಲಿ ಅಯ್ಯಂ­ಗಾಳಿ ಅವರ ಪ್ರತಿಮೆಯನ್ನು ನಿರ್ಮಿಸುವ ಪ್ರಸ್ತಾವ  ಸರ್ಕಾರದ ಪರಿಶೀಲನೆಯಲ್ಲಿದ್ದು, ಹೊಸ ತಲೆ­ಮಾರುಗಳಿಗೆ ಅಯ್ಯಂಗಾಳಿ ಅವರ ಜೀವನ– ಸಾಧನೆಯ ಮಾಹಿತಿ–ಅಧ್ಯಯನ ನಡೆಸಲು ಈ ಪೀಠದಿಂದ ಸಾಧ್ಯವಾಗಬಹುದು ಕೇಂದ್ರ ಕಾರ್ಮಿಕ ಖಾತೆ ಸಹ ಸಚಿವ ಕೊಡಿಕುನ್ನಿಲ್ ಸುರೇಶ್ ಹೇಳಿದರು.

ದಲಿತರ ಶಿಕ್ಷಣ, ಸಂಪತ್ತು, ಸಾಮಾಜಿಕ ಉನ್ನತಿಗೆ  ಹೋರಾಟ ನಡೆಸಿ ಮಹಾತ್ಮರಾದ ಅಯ್ಯಂ­ಗಾಳಿಯವರ 150ನೇ ಜನ್ಮವರ್ಷಾಚರಣೆ ಅಂಗ­ವಾಗಿ ನಾಯ­ಮ್ಮಾರಮೂಲೆಯಲ್ಲಿರುವ ಕಾಸರ­ಗೋಡು ಕೇಂದ್ರ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾದ ಅಯ್ಯಂಗಾಳಿ ಪೀಠವನ್ನು ಮಂಗಳವಾರ ಉದ್ಘಾಟಿಸಿ, ಮಾತನಾ­ಡಿದರು.

ದಲಿತರ ಉನ್ನತಿಗಾಗಿ ಕೇಂದ್ರ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಕೈಗೊಂಡಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯೋಗ ಮೀಸಲಾತಿಗೆ ಸುಪ್ರೀಂಕೋರ್ಟ್ ಹಾಗೂ ಅಲಹಾಬಾದ್ ಹೈಕೋ­ರ್ಟ್‌­ಗಳ ತೀರ್ಪು ಪ್ರಸ್ತುತ ಅಡ್ಡಿಯಾಗಿದೆ. ಇದಕ್ಕಾಗಿ ಸಂವಿಧಾನ ತಿದ್ದುಪಡಿ ತರಬೇಕು, ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.

ಪರಿಶಿಷ್ಟ ಜಾತಿ -ಪಂಗಡಗಳಿಗೆ ಸರ್ಕಾರಗಳು ಬಿಡುಗಡೆ ಮಾಡುವ ಸವಲತ್ತುಗಳು ಸರಿಯಾದ ರೀತಿಯಲ್ಲಿ ತಲುಪುತ್ತಿಲ್ಲ. ಇದರಲ್ಲಿ ಲೋಪವೆಸಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಪರಿಶಿಷ್ಟ ಜಾತಿ ಸಂಸದೀಯ ಸಮಿತಿ ಸರ್ಕಾರವನ್ನು ಈಗಾಗಲೇ ಆಗ್ರಹಿಸಿದೆ ಎಂದರು.

ಕಾಸರಗೋಡು ಸಂಸದ ಪಿ.ಕರುಣಾಕರನ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವವಿದ್ಯಾಲಯದ ಮೊದಲ ಸಂಶೋಧನಾ ಪುಸ್ತಕ ‘ಹ್ಯೂಮಾನಿಟಿಕ್ಸ್ ಸರ್ಕಲ್’ ಅನ್ನು ಸಚಿವರು ಬಿಡುಗಡೆ ಮಾಡಿದರು. ದಲಿತ ಬಂಧು ಎನ್.ಕೆ.­ಜೋಸ್ ರಚಿಸಿದ ‘ಮಹಾನ್ ಆಯ ಅಯ್ಯಂಗಾಳಿ ಜೀವಿತಂ, ದರ್ಶನಂ’ ಎಂಬ ಪುಸ್ತಕವನ್ನು ಬಿಡುಗಡೆ­ಗೊಳಿಸಿದರು.

ದಲಿತ ವಿಷಯಗಳಲ್ಲಿ ಕೋರ್ಸ್‌­ಗಳನ್ನು ಆರಂ­ಭಿಸಿ, ಸಂಶೋಧನೆಯನ್ನು ಕೈಗೊಳ್ಳು­ವುದ­ರೊಂದಿಗೆ ಸಾಮಾಜಿಕ ಪ್ರಗತಿಗೆ ಸಹಕಾರಿ­ಯಾಗುವುದು ಈ ಪೀಠದ ಉದ್ದೇಶ ಎಂದು ಕುಲಪತಿ ಡಾ. ಜಾನ್ಸಿ ಜೇಮ್ಸ್ ಹೇಳಿದರು. ಜಿಲ್ಲಾ ಪಂಚಾ­ಯಿತಿ ಅಧ್ಯಕ್ಷೆ ಪಿ.ಪಿ.­ಶ್ಯಾಮ­ಲಾದೇವಿ, ವಿಶ್ವ­ವಿದ್ಯಾ­ಲಯ ಕೋರ್ಟ್ ಸದಸ್ಯ ಅಡ್ವಾ.ಸಿ.­ಕೆ.ಶ್ರೀಧರನ್, ನಗರಸಭಾ ಅಧ್ಯಕ್ಷ ಟಿ.ಇ.­ಅಬ್ದುಲ್ಲ, ಬ್ಲಾಕ್ ಪಂಚಾ­ಯಿತಿ ಅಧ್ಯಕ್ಷೆ ಮುಮ್ತಾಸ್ ಶುಕೂರ್, ಸಿ.ಬಿ.­ಅಬ್ದುಲ್ಲ,  ಪಂಚಾಯಿತಿ ಸದಸ್ಯೆ ಸುಬೈದಾ ಅಬ್ದುಲ್ಲ, ಪಿ.ವಿ.ಅನೂಪ್ ಉಪ­ಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.