ಮಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಹೆಚ್ಚಿಸುವುದಿಲ್ಲ ಎಂದು ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗೆ ಕಾಂಗ್ರೆಸ್ ಈಗಲೂ ಬದ್ಧವಾಗಿದೆ. ತೆರಿಗೆ ಹೆಚ್ಚಿಸುವುದಕ್ಕೆ ನಾವು ಅವಕಾಶ ನೀಡುವುದಿಲ್ಲ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಸ್ಪಷ್ಟಪಡಿಸಿದ್ದಾರೆ.
‘ಕಾಂಗ್ರೆಸ್ ಚುನಾವಣೆಯಲ್ಲಿ ನೀಡಿದ್ದ ಭರವಸೆಯ ಬಗ್ಗೆ ಅರಿವಿದ್ದೂ ಜನಪ್ರತಿನಿಧಿಗಳ ಆಡಳಿತ ಜಾರಿಗೆ ಬರುವ ಮುನ್ನವೇ ಆಡಳಿತಾಧಿಕಾರಿಗಳು ತರಾತುರಿಯಿಂದ ತೆರಿಗೆ ಹೆಚ್ಚಿಸಿದ್ದಾರೆ. ಆದರೂ, ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ. ಜನರು ಹೆಚ್ಚುವರಿ ತೆರಿಗೆ ಕಟ್ಟಬಾರದು’ ಎಂದು ಪೂಜಾರಿ ಹೇಳಿದರು.
‘ಚುನಾವಣೆ ನೀತಿ ಸಂಹಿತೆ ಜಾರಿಯಾದ ಬಳಿಕ ತೆರಿಗೆ ಹೆಚ್ಚಳದ ಜಾಹೀರಾತು ಪ್ರಕಟಿಸುವ ಮೂಲಕ ಅಧಿಕಾರಿಗಳು ಕಾನೂನು ಉಲ್ಲಂಘಿಸಿದ್ದಾರೆ’ ಎಂದು ಅವರು ಆರೋಪಿಸಿದರು.
ತೆರಿಗೆ ಹೆಚ್ಚಳ ಪ್ರಸ್ತಾವಕ್ಕೆ ಶಾಸಕರು ಸಹಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಪೂಜಾರಿ, ‘ಅದರ ಪರಿಣಾಮದ ಬಗ್ಗೆ ತಿಳಿವಳಿಕೆ ಇಲ್ಲದೇ ಹಾಗೆ ಮಾಡಿದ್ದಾರೆ. ಈಗ ತಪ್ಪನ್ನು ತಿದ್ದಿಕೊಂಡಿದ್ದಾರೆ’ ಎಂದರು.
ಬಿಜೆಪಿ ಮುಖಂಡ ಈಶ್ವರಪ್ಪ ಅವರನ್ನು ಯಕ್ಷಗಾನದ ರಾಕ್ಷಸ ವೇಷಕ್ಕೆ ಹೋಲಿಸಿದ ಪೂಜಾರಿ, ‘ಈಶ್ವರಪ್ಪ ಅವರು ಬೆಳಿಗ್ಗೆ ಒಂದು ಹೇಳಿಕೆ ನೀಡಿದರೆ, ಸಂಜೆ ಬೇರೆಯೇ ಮಾತನಾಡುತ್ತಾರೆ. ಅವರ ಮಾತಿಗೆ ಕಾಂಗ್ರೆಸ್ ಬೆಲೆ ಕೊಡುವುದಿಲ್ಲ’ ಎಂದರು.
ಚೂರಿ ಹಾಕಬೇಕಿತ್ತೆ?
ಜನಾರ್ದನ ಪೂಜಾರಿ ಅವರು ಕಲ್ಲಡ್ಕ ಪ್ರಭಾಕರ ಭಟ್ ಜತೆಗೆ ಇರುವ ಛಾಯಾಚಿತ್ರ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾದ ಬಗ್ಗೆ ಪ್ರತಿಕ್ರಿಯಿಸಿದ ಪೂಜಾರಿ, ‘ಪ್ರಭಾಕರ ಭಟ್ಟರ ಸಿದ್ಧಾಂತ ಬೇರೆ. ನಮ್ಮ ಸಿದ್ಧಾಂತ ಬೇರೆ. ಅವರು ಎದುರಾದಾಗ ಅವರಿಗೆ ನಮಸ್ಕರಿಸುವುದು ಬಿಟ್ಟು ಅವರ ಬೆನ್ನಿಗೆ ಚೂರಿಹಾಕಬೇಕಿತ್ತೇ?’ ಎಂದು ಪ್ರಶ್ನಿಸಿದರು.
‘ಎತ್ತಿನಹೊಳೆ ಯೋಜನೆ ಬಗ್ಗೆ ಪೂಜಾರಿಗೆ ತಿಳಿವಳಿಕೆ ಇಲ್ಲ’ ಎಂಬ ವೀರಪ್ಪ ಮೊಯಿಲಿ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಪೂಜಾರಿ, ‘ಅವರಿಗೆ ತಿಳಿವಳಿಕೆ ಉಂಟು. ಅವರಿಗೆ ಕೈಮುಗಿಯುತ್ತೇನೆ’ ಎಂದು ವ್ಯಂಗ್ಯಭರಿತ ಧ್ವನಿಯಲ್ಲಿ ಹೇಳಿದರು.
‘ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಪರ್ಯಾಯ ಸಾಧ್ಯತೆ ಬಗ್ಗೆ ಏಕೆ ಯೋಚಿಸಲಿಲ್ಲ?’ ಎಂದೂ ಪೂಜಾರಿ ಪ್ರಶ್ನಿಸಿದರು.
ಮೇಯರ್ ಮಹಾಬಲ ಮಾರ್ಲ, ಉಪಮೇಯರ್ ಕವಿತಾ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಾಂಗ್ರೆಸ್ ಮುಖಂಡರಾದ ಕೋಡಿಜಾಲ್ ಇಬ್ರಾಹಿಂ, ಹರಿಕೃಷ್ಣ ಬಂಟ್ವಾಳ್, ಕಳ್ಳಿಗೆ ತಾರಾನಾಥ ಶೆಟ್ಟಿ ಹಾಗೂ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.
ನೀತಿ ಸಂಹಿತೆ ಉಲ್ಲಂಘನೆ: ಬಿಜೆಪಿ ಆರೋಪ
ಮಂಗಳೂರು: ಸರ್ಕಾರವು ಹೆಚ್ಚಿಸಿರುವ ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ಹಿಂದಕ್ಕೆ ಪಡೆಯುವುದಾಗಿ ಭರವಸೆ ನೀಡುವ ಮೂಲಕ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರು ನೀತಿಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
‘ಚುನಾವಣಾ ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸ ಬೇಕು’ ಎಂದು ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀಕರ ಪ್ರಭು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಭರವಸೆಗೆ ಎಳ್ಳುನೀರು: ಭಂಡಾರಿ
‘ಆಸ್ತಿ ತೆರಿಗೆಯನ್ನು ಶೇ 15ರಷ್ಟು ಹೆಚ್ಚಿಸುವ ಮೂಲಕ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗೆ ಕಾಂಗ್ರೆಸ್ ಎಳ್ಳುನೀರು ಬಿಟ್ಟಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ರಾಮನಾಥ ರೈ, ಶಾಸಕರಾದ ಜೆ.ಆರ್.ಲೋಬೊ ಮತ್ತು ಮೊಯಿದ್ದೀನ್ ಬಾವ ಸಮ್ಮುಖದಲ್ಲೇ ತೆರಿಗೆ ಪರಿಷ್ಕರಣೆ ನಿರ್ಣಯ ಕೈಗೊಂಡಿದ್ದು, ನಡಾವಳಿ ಆದೇಶದಲ್ಲಿ ಅವರು ಮೂವರೂ ಸಹಿ ಮಾಡಿದ್ದಾರೆ. ಜನಾರ್ದನ ಪೂಜಾರಿ ನೀಡಿದ ವಾಗ್ದಾನಕ್ಕೆ ಬೆಲೆ ಇಲ್ಲವೇ?’ ಎಂದು ವಿಧಾನ ಪರಿಷತ್ ಸದಸ್ಯ ಕೆ. ಮೋನಪ್ಪ ಭಂಡಾರಿ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.