ADVERTISEMENT

ದಕ್ಷಿಣ ಕನ್ನಡ | ಒಂದೇ ದಿನ 11 ಸಾವು ಘೋಷಣೆ

ದಕ: 314 ಜನರಲ್ಲಿ ಸೋಂಕು ಪತ್ತೆ; 296 ಜನರು ಗುಣಮುಖ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 16:42 IST
Last Updated 26 ಆಗಸ್ಟ್ 2020, 16:42 IST
   

ಮಂಗಳೂರು: ಹೊರ ಜಿಲ್ಲೆಗಳ ಆರು ಜನರು ಸೇರಿದಂತೆ 11 ಮಂದಿ ಕೋವಿಡ್‌–19 ಸೋಂಕಿತರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಬುಧವಾರ ಅಧಿಕೃತವಾಗಿ ಘೋಷಿಸಿದ್ದಾರೆ.

ಜಿಲ್ಲೆಯಲ್ಲಿ ಕೆಲವು ದಿನಗಳಿಂದ ತಗ್ಗಿದ್ದ ಕೋವಿಡ್‌ ಸೋಂಕಿತರ ಸಾವಿನ ಸಂಖ್ಯೆ ಮತ್ತೆ ಎರಡಂಕಿಗೆ ಏರಿದೆ. ಜಿಲ್ಲೆಯಲ್ಲಿ ಈವರೆಗೆ ಮೃತಪಟ್ಟಿರುವ ಕೋವಿಡ್‌ ಸೋಂಕಿತರ ಸಂಖ್ಯೆ 330ಕ್ಕೆ ಏರಿಕೆಯಾಗಿದೆ.

‘ಮಂಗಳೂರು ತಾಲ್ಲೂಕಿನ ನಾಲ್ವರು, ಬಂಟ್ವಾಳ ತಾಲ್ಲೂಕಿನ ಒಬ್ಬರು ಮತ್ತು ಹೊರ ಜಿಲ್ಲೆಗಳ ಆರು ಜನ ಕೋವಿಡ್‌ ಸೋಂಕಿತರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಎಲ್ಲ 11 ಜನರೂ ಗಂಭೀರ ಸ್ವರೂಪದ ಅನ್ಯ ಕಾಯಿಲೆಗಳಿಂದ ಬಳಲುತ್ತಿದ್ದರು’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ADVERTISEMENT

314 ಜನರಲ್ಲಿ ಸೋಂಕು: ಜಿಲ್ಲೆಯಲ್ಲಿ 314 ಜನರಲ್ಲಿ ಕೋವಿಡ್‌ ಸೋಂಕು ಇರುವುದು ಬುಧವಾರ ಲಭಿಸಿದ ಪರೀಕ್ಷಾ ವರದಿಗಳಿಂದ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕು ತಗುಲಿದವರ ಒಟ್ಟು ಸಂಖ್ಯೆ 11,092ಕ್ಕೆ ತಲುಪಿದೆ.

‘ಮಂಗಳೂರು ತಾಲ್ಲೂಕಿನ 215, ಬಂಟ್ವಾಳ ತಾಲ್ಲೂಕಿನ 52, ಬೆಳ್ತಂಗಡಿ ತಾಲ್ಲೂಕಿನ 10, ಪುತ್ತೂರು ತಾಲ್ಲೂಕಿನ ಎಂಟು ಹಾಗೂ ಸುಳ್ಯ ತಾಲ್ಲೂಕಿನ ಇಬ್ಬರಲ್ಲಿ ಸೋಂಕು ಇರುವುದು ಬುಧವಾರ ಖಚಿತವಾಗಿದೆ. ಜಿಲ್ಲೆಯಲ್ಲಿ ಪರೀಕ್ಷೆಗೊಳಗಾದ ಹೊರ ಜಿಲ್ಲೆಗಳ 27 ಜನರಲ್ಲೂ ಸೋಂಕು ದೃಢಪಟ್ಟಿದೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 88, ಶೀತ ಜ್ವರದಿಂದ ಬಳಲುತ್ತಿದ್ದ (ಐಎಲ್‌ಐ) 129, ಉಸಿರಾಟದ ತೀವ್ರ ತೊಂದರೆ ಎದುರಿಸುತ್ತಿದ್ದ (ಎಸ್‌ಎಆರ್‌ಐ) 19 ಜನರಲ್ಲಿ ಸೋಂಕು ಪತ್ತೆಯಾಗಿದೆ. ಉಳಿದ 78 ಜನರಿಗೆ ಯಾವ ಮೂಲದಿಂದ ಸೋಂಕು ತಗುಲಿದೆ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ.

156 ಮಂದಿ ಆಸ್ಪತ್ರೆಗೆ:ಬುಧವಾರ ಸೋಂಕು ಪತ್ತೆಯಾದವರಲ್ಲಿ 101 ಪುರುಷರು ಮತ್ತು 55 ಮಹಿಳೆಯರು ಸೇರಿ 156 ಜನರಲ್ಲಿ ಕೋವಿಡ್‌ ಸೋಂಕಿನ ಗುಣ ಲಕ್ಷಣಗಳು ಕಂಡುಬಂದಿವೆ. ಈ ಎಲ್ಲರನ್ನೂ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ಆರಂಭಿಸಲಾಗಿದೆ.

97 ಪುರುಷರು ಮತ್ತು 61 ಮಹಿಳೆಯರಲ್ಲಿ ಕೋವಿಡ್‌ ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಈ 158 ಜನರನ್ನು ಮನೆಗಳು ಹಾಗೂ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ. ಅವರ ಆರೋಗ್ಯ ಸ್ಥಿತಿಯ ಮೇಲೆ ನಿಗಾ ವಹಿಸಲಾಗಿದೆ.

ಜಿಲ್ಲೆಯಲ್ಲಿ ಈವರೆಗೆ 87,945 ಜನರ ಗಂಟಲು ಮತ್ತು ಮೂಗಿನ ದ್ರವದ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 11,092 ಜನರಲ್ಲಿ ಸೋಂಕು ಪತ್ತೆಯಾಗಿದ್ದರೆ, 76,853 ನೆಗೆಟಿವ್‌ ವರದಿಗಳು ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.