
ಮಂಗಳೂರು: ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2024–25ನೇ ಸಾಲಿನಲ್ಲಿ ಒಟ್ಟು 14 ಶಾಲೆಗಳು ಶೂನ್ಯ ದಾಖಲಾತಿ ಸಾಲಿಗೆ ಸೇರಿವೆ.
ಶೂನ್ಯ ದಾಖಲಾತಿ ಆಗಿರುವ ಶಾಲೆಗಳಲ್ಲಿ ಎರಡು ಸರ್ಕಾರಿ ಶಾಲೆಗಳು, ಆರು ಅನುದಾನಿತ ಹಾಗೂ ಆರು ಅನುದಾನ ರಹಿತ ಶಾಲೆಗಳು ಒಳಗೊಂಡಿವೆ. ಎರಡೂ ಸರ್ಕಾರಿ ಶಾಲೆಗಳು ಸುಳ್ಯ ತಾಲ್ಲೂಕಿನ ಕಿರಿಯ ಪ್ರಾಥಮಿಕ ಶಾಲೆಗಳಾಗಿವೆ. ಶೂನ್ಯ ದಾಖಲಾತಿಯ ಅನುದಾನಿತ ಶಾಲೆಗಳಲ್ಲಿ ಎರಡು ಪ್ರೌಢಶಾಲೆಗಳು, ನಾಲ್ಕು ಹಿರಿಯ ಪ್ರಾಥಮಿಕ ಶಾಲೆಗಳು, ಅನುದಾನ ರಹಿತ ಶಾಲೆಗಳಲ್ಲಿ ಮೂರು ಪ್ರೌಢಶಾಲೆಗಳು, ಎರಡು ಹಿರಿಯ ಪ್ರಾಥಮಿಕ ಹಾಗೂ ಒಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಒಳಗೊಂಡಿರುವ ಶಾಲೆ ಸೇರಿದೆ.
ಇವುಗಳಲ್ಲಿ ಒಟ್ಟು ಏಳು ಮಂಗಳೂರು ಉತ್ತರ ಬ್ಲಾಕ್‌ನಲ್ಲಿವೆ. ಮಂಗಳೂರು ದಕ್ಷಿಣ ಬ್ಲಾಕ್ ವ್ಯಾಪ್ತಿಯಲ್ಲಿ ಮೂರು, ಬಂಟ್ವಾಳ ತಾಲ್ಲೂಕಿನಲ್ಲಿ ಎರಡು ಹಾಗೂ ಮೂಡುಬಿದಿರೆ ಹಾಗೂ ಬೆಳ್ತಂಗಡಿ ತಾಲ್ಲೂಕುಗಳಲ್ಲಿ ತಲಾ ಒಂದು ಇವೆ. ಒಟ್ಟು ಎರಡು ಕಿರಿಯ ಪ್ರಾಥಮಿಕ, ಆರು ಹಿರಿಯ ಪ್ರಾಥಮಿಕ, ಐದು ಪ್ರೌಢಶಾಲೆ ಹಾಗೂ ಒಂದು ಪ್ರಾಥಮಿಕದಿಂದ ಪ್ರೌಢ ಶಿಕ್ಷಣದವರೆಗೆ ಇರುವ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಕದ ಮುಚ್ಚಿವೆ.
ಕಾರಣಗಳೇನು?: ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಬಾಗಿಲು ಹಾಕಿವೆ. ಅನುದಾನದಾನಿತ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆ, ಅತಿಥಿ ಶಿಕ್ಷಕರಿಗೆ ಗೌರವಧನ ಪಾವತಿಸಲು ಸೋತಿರುವ ಆಡಳಿತ ಮಂಡಳಿಗಳು ಬಾಗಿಲು ಮುಚ್ಚುವ ನಿರ್ಧಾರಕ್ಕೆ ಬಂದಿವೆ. ಖಾಸಗಿ ಶಾಲೆಗಳೂ ಸಹ ಇದೇ ಕಾರಣಕ್ಕೆ ಬಂದ್ ಆಗಿವೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತ ಹೋದರೆ, ಶಿಕ್ಷಕರಿಗೆ ವೇತನ ಪಾವತಿಸಲು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಹೆಣಗಾಡುತ್ತವೆ. ಅಂತಿಮವಾಗಿ ಶಾಲೆ ಬಂದ್ ಮಾಡುವ ನಿರ್ಧಾರಕ್ಕೆ ಬರುತ್ತವೆ. ಈ ಶಾಲೆಗಳಿಗೆ ಹೋಗುತ್ತಿದ್ದ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗದಂತೆ ನೋಡಿಕೊಳ್ಳಲು ಸಮೀಪದ ಶಾಲೆಗಳಿಗೆ ಸೇರಿಕೊಳ್ಳುವಂತೆ ತಿಳಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪ್ರತಿವರ್ಷ ಅನುದಾನಿತ ಶಾಲೆಗಳೇ ಹೆಚ್ಚು ಮುಚ್ಚುತ್ತಿವೆ. ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆ. 2022–23ನೇ ಸಾಲಿನಲ್ಲಿ ಅತಿ ಹೆಚ್ಚು ಶಾಲೆಗಳಲ್ಲಿ ಶೂನ್ಯ ದಾಖಲಾತಿ ಆಗಿತ್ತು. ಒಟ್ಟು 40 ಶಾಲೆಗಳು ಬಾಗಿಲು ಮುಚ್ಚಿದ್ದವು. ಅವುಗಳಲ್ಲಿ ಆರು ಸರ್ಕಾರಿ, 17 ಅನುದಾನಿತ ಹಾಗೂ 20 ಅನುದಾನರಹಿತ ಶಾಲೆಗಳು ಒಳಗೊಂಡಿದ್ದವು. ವಿದ್ಯಾರ್ಥಿಗಳ ಸಂಖ್ಯೆ ಕನಿಷ್ಠ ಮಾನದಂಡಕ್ಕಿಂತ ಕಡಿಮೆ ಇದ್ದರೆ ಅಂತಹ ಶಾಲೆಗಳಿಗೆ ನಿಯಮದಂತೆ ನೋಟಿಸ್ ನೀಡಬೇಕಾಗುತ್ತದೆ. ಕನಿಷ್ಠ ಸಂಖ್ಯೆಯ ಮಕ್ಕಳಿದ್ದಾಗ ಶಾಲೆಗಳನ್ನು ನಡೆಸಲು ನಿಯಮದಲ್ಲಿ ಅವಕಾಶ ಇಲ್ಲ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.