ADVERTISEMENT

ಪಿಲಿಕುಳ ಜೈವಿಕ ಉದ್ಯಾನ: ಹೆಣ್ಣು ಹುಲಿ ನೇತ್ರಾವತಿ ಸಾವು

​ಪ್ರಜಾವಾಣಿ ವಾರ್ತೆ
Published 7 ಜೂನ್ 2023, 9:10 IST
Last Updated 7 ಜೂನ್ 2023, 9:10 IST
Jerald Vikram Lobo
   Jerald Vikram Lobo

ಮಂಗಳೂರು: ಇಲ್ಲಿನ ಪಿಲಿಕುಳ ಜೈವಿಕ ಉದ್ಯಾನದ 15 ವರ್ಷ ಪ್ರಾಯದ ಹೆಣ್ಣುಹುಲಿ 'ನೇತ್ರಾವತಿ' ಬುಧವಾರ ಮೃತಪಟ್ಟಿದೆ.

ಕಳೆದ ಭಾನುವಾರ (ಜೂನ್ 4 ರಂದು) ಜೈವಿಕ ಉದ್ಯಾನದ 6 ವರ್ಷದ ಗಂಡು ಹುಲಿ 'ರೇವಾ' ಹಾಗೂ ನೇತ್ರಾವತಿ ನಡುವೆ ಕಾಳಗ ಏರ್ಪಟ್ಟಿತ್ತು. ಈ ವೇಳೆ ನೇತ್ರಾವತಿ ಗಾಯಗೊಂಡಿತ್ತು.

'ರೇವಾ' ಗಂಡು ಹುಲಿಯು ಬೆದೆಗೆ ಬಂದಿರುದರಿಂದ ನೇತ್ರಾವತಿಯ ಸಂಪರ್ಕಕ್ಕೆ ಬಂದಿತ್ತು. ಈ ವೇಳೆ ಹೆಣ್ಣು ಹುಲಿಯು ರೇವಾ ಮೇಲೆರಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಜಗಳವನ್ನು ಹತೋಟಿಗೆ ತಂದಿದ್ದರು. ಹುಲಿಗಳನ್ನು ಗೂಡಿನ ಒಳಗೆ ಸೇರಿಸಿದ್ದರು. ಪಿಲಿಕುಳದ ವೈದ್ಯಾಧಿಕಾರಿಗಳು ಮತ್ತು ವೈಜ್ಞಾನಿಕ ಅಧಿಕಾರಿಗಳು ಗಾಯಗೊಂಡ ನೇತ್ರಾವತಿಗೆ ಶುಶ್ರೂಷೆ ನಡೆಸಿದ್ದರು. ಹೆಣ್ಣು ಹುಲಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಅದು ನೀರು ಮತ್ತು ಆಹಾರ ಸೇವಿಸುತ್ತಿತ್ತು. ಆದರೆ, ಬುಧವಾರ ಬೆಳಗ್ಗೆ 9.45ಕ್ಕೆ ಶುಶ್ರೂಷೆ ಮುಂದುವರಿಸಿದ್ದಾಗಲೇ ಕುಸಿದು ಬಿದ್ದು ಅದು ಪ್ರಾಣ ಬಿಟ್ಟಿದೆ' ಎಂದು ಜೈವಿಕ ಉದ್ಯಾನದ ನಿರ್ದೇಶಕ ಜಯಪ್ರಕಾಶ ಭಂಡಾರಿ 'ಪ್ರಜಾವಾಣಿ'ಗೆ ತಿಳಿಸಿದರು.

ADVERTISEMENT

ನೇತ್ರಾವತಿ ಮತ್ತು ರೇವಾ ಪಿಲಿಕುಳ ಜೈವಿಕ ಉದ್ಯಾನದಲ್ಲೇ ಜನಿಸಿದ ಹುಲಿಗಳು. ಕಚ್ಚಾಟದಿಂದ ನೇತ್ರಾವತಿಯ ದೇಹದಲ್ಲಿ ಗಾಯಗಳಾಗಿದ್ದವು. ಹುಲಿಯು ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಅವರು ಅಭಿಪ್ರಾಯಪಟ್ಟರು.

'ಆಂತರಿಕ ಗಾಯಗಳಾಗಿದ್ದವೇ ಎಂಬುದು ಮತ್ತು ಸಾವಿನ ನಿಖರ ಕಾರಣಗಳು ಮರಣೋತ್ತರ ಪರೀಕ್ಷೆಯಿಂದ ತಿಳಿಯಲಿದೆ' ಎಂದರು.

'ಕಚ್ಚಾಟದ ವೇಳೆ ರೇವಾ ಹುಲಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಅದಕ್ಕೆ ಅಂತಹ ಅಪಾಯವೇನಿಲ್ಲ. ಪಿಲಿಕುಳದಲ್ಲಿ ಈಗ 8 ಹುಲಿಗಳು ಇವೆ' ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.