ADVERTISEMENT

₹2,266 ಕೋಟಿ ವೆಚ್ಚದ ಕಾಮಗಾರಿಗೆ ಇಂದು ಶಂಕುಸ್ಥಾಪನೆ

ಸ್ಮಾರ್ಟ್ ಸಿಟಿ ಯೋಜನೆಯಡಿ 65 ಕಾಮಗಾರಿಗಳಿಗೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 12:16 IST
Last Updated 6 ಮಾರ್ಚ್ 2018, 12:16 IST

ಮಂಗಳೂರು: ಸ್ಮಾರ್ಟ್‌ ಸಿಟಿ ಯೋಜನೆಯಡಿ ₹2 ಸಾವಿರ ಕೋಟಿ ವೆಚ್ಚದ 65 ಕಾಮಗಾರಿಗಳೂ ಸೇರಿದಂತೆ ಒಟ್ಟು ₹2,266.65 ಕೋಟಿ ವೆಚ್ಚದ ಕಾಮಗಾರಿಗಳಿಗೆ ಮಂಗಳವಾರ (ಇದೇ 6) ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಮೇಯರ್ ಕವಿತಾ ಸನಿಲ್‌ ಹೇಳಿದರು.

ನಗರದ ತಮ್ಮ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸ್ಮಾರ್ಟ್‌ ಸಿಟಿ ಯೋಜನೆಯಡಿ ಪಂಪ್‌ವೆಲ್‌ ಬಸ್‌ನಿಲ್ದಾಣ (₹400 ಕೋಟಿ), ಹಂಪನಕಟ್ಟೆಯಲ್ಲಿ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ (₹ 98 ಕೋಟಿ), ಸೆಂಟ್ರಲ್‌ ಕಮಾಂಡ್‌ ಕಂಟ್ರೋಲ್‌ ಸೆಂಟರ್‌ (₹49 ಕೋಟಿ), ಸೆಂಟ್ರಲ್‌ ಮಾರುಕಟ್ಟೆ ಅಭಿವೃದ್ಧಿ (₹50 ಕೋಟಿ), ಕ್ಲಾಕ್‌ ಟವರ್‌ (₹90 ಲಕ್ಷ), ಪುರಭವನದ ಬಳಿ ಪಾದಚಾರಿ ಕೆಳಸೇತುವೆ ನಿರ್ಮಾಣ (₹5 ಕೋಟಿ) ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

₹93.55 ಕೋಟಿ ವೆಚ್ಚದಲ್ಲಿ ಒಳಚರಂಡಿ ಮುಖ್ಯ ಮಾರ್ಗದ ಬದಲಾವಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಅಮೃತ್‌ ಯೋಜನೆಯಡಿ ₹ 61.90 ಸಂಪರ್ಕಗಳನ್ನು ಸರಿಪಡಿಸುವ ಕಾಮಗಾರಿ ಮಾಡಲಾಗುವುದು. ಪ್ರೀಮಿಯಂ ಎಫ್‌ಎಆರ್‌ ನಿಧಿಯಡಿ ₹37 ಕೋಟಿ ವೆಚ್ಚದಲ್ಲಿ 19 ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ₹19 ಕೋಟಿ ವೆಚ್ಚದ ಕದ್ರಿ ಮಾರುಕಟ್ಟೆ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಾಣ, ₹42.50 ಕೋಟಿ ವೆಚ್ಚದಲ್ಲಿ ಕಂಕನಾಡಿ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ADVERTISEMENT

ನಗರೋತ್ಥಾನ 2 ನೇ ಹಂತದ ವಿಶೇಷ ಅನುದಾನದಡಿ ₹7.45 ಕೋಟಿ ವೆಚ್ಚದಲ್ಲಿ 6 ರಸ್ತೆಗಳ ಅಭಿವೃದ್ಧಿ ಮಾಡಲಾಗಿದೆ. ನಗರೋತ್ಥಾನ 3 ನೇ ಹಂತದಲ್ಲಿ ₹9.90 ಕೋಟಿ ವೆಚ್ಚದಲ್ಲಿ ಇನ್ನೂ 6 ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದ ಅವರು, ಈ ಎಲ್ಲ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ಮಂಗಳವಾರ ಬೆಳಿಗ್ಗೆ ನಗರದ ಸೇಂಟ್‌ ಸೆಬಾಸ್ಟಿಯನ್‌ ಹಾಲ್‌ನಲ್ಲಿ ನಡೆಯಲಿದೆ. ಸಚಿವ ಬಿ.ರಮಾನಾಥ ರೈ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.

ಪಂಪ್‌ವೆಲ್‌ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಎಸ್‌ಪಿವಿಯಲ್ಲಿ ಅನುಮೋದನೆ ನೀಡಲಾಗಿದೆ. ಸಚಿವ ಸಂಪುಟದ ಸಭೆಯಲ್ಲಿ ಈ ವಿಷಯವನ್ನು ಮಂಡಿಸಲಾಗುವುದು. ಈ ಬಸ್‌ ನಿಲ್ದಾಣದಲ್ಲಿ 197 ಬಸ್‌ಗಳ ನಿಲುಗಡೆಗೆ ಅವಕಾಶ ಸಿಗಲಿದೆ. ಈ ಕಾಮಗಾರಿಯನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪಾಲಿಕೆ ಆಯುಕ್ತ ಮುಹಮ್ಮದ್ ನಜೀರ್ ಮಾತನಾಡಿ, ಪುರಭವನದ ಬಳಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಸ್ಕೈವಾಕ್‌ನ ಬದಲಾಗಿ, ಪುರಭವನದಿಂದ ಮಿನಿ ವಿಧಾನಸೌಧದವರೆಗೆ ಪಾದಚಾರಿ ಕೆಳಸೇತುವೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಸೆಂಟ್ರಲ್‌ ಮಾರುಕಟ್ಟೆಯ ಕಾಮಗಾರಿಯನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು. ಕಾಮಗಾರಿಯ ಸಂದರ್ಭದಲ್ಲಿ ವರ್ತಕರಿಗೆ ಫುಟ್‌ಬಾಲ್‌ ಮೈದಾನ ಹಾಗೂ ಬೀದಿ ಬದಿ ವ್ಯಾಪಾರಿಗಳ ವಲಯದಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.
***
ಇಂದಿರಾ ಕ್ಯಾಂಟೀನ್ ಉದ್ಘಾಟನೆ

ಪಂಪ್‌ವೆಲ್‌ ಬಳಿಯ ಇಂದಿರಾ ಕ್ಯಾಂಟೀನ್‌ ನಿರ್ಮಾಣ ವಿಳಂಬವಾಗಿದ್ದು, ಉರ್ವ ಸ್ಟೋರ್, ನೆಹರು ಮೈದಾನ, ಕಾವೂರು, ಸುರತ್ಕಲ್‌ಗಳಲ್ಲಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಗುವುದು ಎಂದು ಮೇಯರ್ ಕವಿತಾ ಸನಿಲ್‌ ತಿಳಿಸಿದರು.

ಇಂದಿರಾ ಕ್ಯಾಂಟೀನ್‌ನ ಆಹಾರ ಪೂರೈಕೆಗಾಗಿ ಪಾಲಿಕೆಯಿಂದ ₹2.25 ಕೋಟಿ ಅನುದಾನ ಮೀಸಲಿಡಲಾಗಿದೆ. ಈ ಎಲ್ಲ ಕ್ಯಾಂಟೀನ್‌ಗಳ ಕೇಂದ್ರೀಕೃತ ಅಡುಗೆ ಕೋಣೆ ಉರ್ವ ಸ್ಟೋರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.