ADVERTISEMENT

ಮಾದಕ ವಸ್ತು ಸಾಗಾಟ: ಮೂವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 8:24 IST
Last Updated 4 ನವೆಂಬರ್ 2022, 8:24 IST
ವಶಪಡಿಸಿಕೊಂಡ ಕಾರು
ವಶಪಡಿಸಿಕೊಂಡ ಕಾರು   

ಮಂಗಳೂರು: ನಿಷೇಧಿತ ಮಾದಕ ವಸ್ತುವಾದ ಮೀಥೈಲೀನ್‌ ಡಯಾಕ್ಸಿ ಮೆಥಾಂಫೆಟಾಮೈನ್‌ (ಎಂಡಿಎಂಎ) ಅನ್ನು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲ ಮೇಲಂಗಡಿ ಮನೆಯ ಅಬ್ದುಲ್ ರೆಹಮಾನ್ ಅರ್ಫಾನ್ (24), ಬೋಳೂರು ಬೊಕ್ಕಪಟ್ಣದ ಅಬ್ದುಲ್ ಜಲೀಲ್ (42), ಬೋಳಿಯಾರ್ ಗ್ರಾಮದ ಕಾಪಿಕಾಡ್ ಮನೆಯ ಮೊಹಮ್ಮದ್ ಮನ್ಸೂರ್ (29) ಬಂಧಿತ ಆರೋಪಿಗಳು.ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿರುತ್ತದೆ. ಈ ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.ಆರೋಪಿಗಳ ವಿರುದ್ಧ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಎಂಡಿಎಂಎಯನ್ನು ಕೇರಳದ ಗಡಿಭಾಗದ ತಲಪಾಡಿ ಮೂಲಕ ಕಾರೊಂದರಲ್ಲಿ ನಗರಕ್ಕೆ ತರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಪಿಎಸ್ಐ ರಾಜೇಂದ್ರ ಬಿ. ನೇತೃತ್ವದ ಪೊಲೀಸರ ತಂಡವು ತಲಪಾಡಿ - ದೇವಿಪುರ ರಸ್ತೆಯ ತಚ್ಚಾಣಿ ಬಳಿ ಕಾರನ್ನು ತಡೆದು ತಪಾಸಣೆ ಮಾಡಿತ್ತು. ಕಾರಿನಲ್ಲಿ ಒಟ್ಟು 32 ಗ್ರಾಂ ತೂಕದ ಎಂಡಿಎಂಎ ಪತ್ತೆಯಾಗಿತ್ತು. ಅದರ ಮೌಲ್ಯ ₹ 1.62 ಲಕ್ಷ ಎಂದು ಅಂದಾಜಿಸಲಾಗಿದೆ. ಆರೋಪಿಗಳಿಂದ 4 ಮೊಬೈಲ್ ಫೋನ್‌ಗಳು, ಡಿಜಿಟಲ್ ಮಾಪಕ, ₹ 22 ಸಾವಿರ ನಗದು ಹಾಗೂ ಮಾರುತಿ ಇಗ್ನಿಸ್‌ ಕಾರನ್ನು ವಶಪಡಿಸಿಕೊಳ್ಳಲಾಗಿದೆ.ವಶಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ ₹ 7.17 ಲಕ್ಷ ಆಗಬಹುದು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

‘ಎಂಡಿಎಂಎಯನ್ನು ಅಕ್ರಮವಾಗಿ ಖರೀದಿಸಿದ್ದಆರೋಪಿಗಳು ದೇರಳಕಟ್ಟೆ, ಮುಡಿಪು, ನೆತ್ತಿಲಪದವು, ತಲಪಾಡಿ, ಉಳ್ಳಾಲ ಹಾಗೂ ಮಂಗಳೂರು ನಗರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶ ಹೊಂದಿದ್ದರು. ಅಬ್ದುಲ್ ರೆಹಮಾನ್ ಅರ್ಫಾನ್ ವಿರುದ್ಧ ಈ ಹಿಂದೆ ಉಳ್ಳಾಲ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗಳಲ್ಲಿ ಒಟ್ಟು ಏಳು ಪ್ರಕರಣಗಳು ದಾಖಲಾಗಿದ್ದವು. ಆರೋಪಿ ಅಬ್ದುಲ್ ಜಲೀಲ್ ವಿರುದ್ದ 1999ರಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ಆರೋಪಿ ಮೊಹಮ್ಮದ್ ಮನ್ಸೂರ್ ವಿರುದ್ಧ ಕೊಣಾಜೆ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.