ADVERTISEMENT

ದಕ್ಷಿಣ ಕನ್ನಡ: ವಶಪಡಿಸಿಕೊಂಡಿದ್ದ 354 ಕೆಜಿ ಮಾದಕ ವಸ್ತು ನಾಶ

​ಪ್ರಜಾವಾಣಿ ವಾರ್ತೆ
Published 26 ಜೂನ್ 2021, 11:06 IST
Last Updated 26 ಜೂನ್ 2021, 11:06 IST
   

ಮಂಗಳೂರು: ಮಂಗಳೂರು ಕಮಿಷನರೇಟ್ ಹಾಗೂ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ 354 ಕೆಜಿ ಮಾದಕ ವಸ್ತುಗಳನ್ನು ಮೂಲ್ಕಿ ಕೊಲ್ನಾಡ್ ಜಂಕ್ಷನ್ ಸಮೀಪದ ಬಯೋ ಮೆಡಿಕಲ್ ವೇಸ್ಟ್ ಟ್ರೀಟ್‌ಮೆಂಟ್ ರೂಮ್‌ನಲ್ಲಿ ಶನಿವಾರ ನಾಶಪಡಿಸಲಾಯಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಮಾದಕ ವಸ್ತು ವಿರೋಧಿ ದಿನದ ಪ್ರಯುಕ್ತ ನಡೆಸಿದ ಕಾರ್ಯಾಚರಣೆ ಹಾಗೂ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು ಎಂದು ತಿಳಿಸಿದರು.

50 ಪ್ರಕರಣಗಳಲ್ಲಿ 130 ಕೆ.ಜಿ.ಗೂ ಆಧಿಕ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದರಲ್ಲಿ ಗಾಂಜಾ ಪ್ರಮಾಣವೇ ಅಧಿಕವಿದೆ. ಎಲ್‌ಎಸ್‌ಡಿ, ಎಂಡಿಎಂಎ, ಕೊಕೇನ್, ಬ್ರೌನ್ ಶುಗರ್ ಒಳಗೊಂಡಿದೆ ಎಂದರು.

ADVERTISEMENT

ಮಂಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಿದೆ. ಮಾದಕ ದ್ರವ್ಯ ಜಾಲವು ಯುವ ಜನಾಂಗವನ್ನೇ ಗುರಿಯಾಗಿಸಿಕೊಂಡಿದೆ. ಯುವಶಕ್ತಿಯನ್ನು ಉಳಿಸುವುದು ಎಲ್ಲರ ಜವಾಬ್ದಾರಿ. ಮಾದಕ ದ್ರವ್ಯ ಮಾರಾಟ, ಸೇವನೆ ಕಂಡುಬಂದಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬಹುದಾಗಿದೆ. ಈ ಸಂದರ್ಭ ಮಾಹಿತಿ ನೀಡುವವರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ಎನ್.‌ಶಶಿಕುಮಾರ್ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಮಾತನಾಡಿ, ಎಸ್ಪಿ ವ್ಯಾಪ್ತಿಯಲ್ಲಿ 224 ಕೆ.ಜಿ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿತ್ತು. ಈ ಬಗ್ಗೆ 214 ಪ್ರಕರಣ ದಾಖಲಾಗಿವೆ ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಎಸ್ಪಿ ಭಾಸ್ಕರ್ ವಿ.ಬಿ., ಬಂಟ್ವಾಳ ಡಿವೈಎಸ್ಪಿ ವ್ಯಾಲೆಂಟೈನ್ ಡಿಸೋಜ, ಡಿಸಿಆರ್‌ಬಿ ಡಿವೈಎಸ್ಪಿ ದಿನಕರ ಶೆಟ್ಟಿ, ಪುತ್ತೂರು ಡಿವೈಎಸ್ಪಿ ಡಾ.ಗಾನ ಪಿ.‌ಕುಮಾರ್, ಬಯೋ ಮೆಡಿಕಲ್ ವೇಸ್ಟ್ ಟ್ರೀಟ್‌ಮೆಂಟ್ ರೂಮ್‌ನ ಇನ್‌ಚಾರ್ಜ್ ಪ್ರಶಾಂತ್ ಹಾಜರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.