ADVERTISEMENT

54 ಚೆಕ್‌ಪೋಸ್ಟ್‌; 35 ಸಂಚಾರಿ ತಂಡ

ವಾರಾಂತ್ಯದ ಕರ್ಫ್ಯೂ ಕಟ್ಟುನಿಟ್ಟು: ಸ್ತಬ್ಧವಾದ ಮಂಗಳೂರು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 4:11 IST
Last Updated 25 ಏಪ್ರಿಲ್ 2021, 4:11 IST
ಮಂಗಳೂರಿನ ಕ್ಲಾಕ್‌ ಟವರ್‌ ಬಳಿ ಪೊಲೀಸರು ವಾಹನಗಳ ತಪಾಸಣೆ ಮಾಡಿದರು.
ಮಂಗಳೂರಿನ ಕ್ಲಾಕ್‌ ಟವರ್‌ ಬಳಿ ಪೊಲೀಸರು ವಾಹನಗಳ ತಪಾಸಣೆ ಮಾಡಿದರು.   

ಮಂಗಳೂರು: ಕೋವಿಡ್–19 ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ವಿಧಿಸಿರುವ ವಾರಾಂತ್ಯದ ಕರ್ಫ್ಯೂಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು.

ಅಗತ್ಯ ವಸ್ತುಗಳ ಖರೀದಿ ಸಮಯ ಮುಗಿಯುತ್ತಿದ್ದಂತೆ ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ, ಅನಗತ್ಯ ವಾಹನ ಸಂಚಾರವನ್ನು ನಿಯಂತ್ರಿಸಲಾಯಿತು. ನಗರದ ಕ್ಲಾಕ್ ಟವರ್ ಬಳಿ ಪೊಲೀಸ್ ಕಮಿಷನರ್‌ ಎನ್‌. ಶಶಿಕುಮಾರ್, ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್ ನೇತೃತ್ವದಲ್ಲಿ ಪೊಲೀಸರು ವಾಹನಗಳ ತಪಾಸಣೆ ನಡೆಸಿದರು.

ಕಾಸರಗೋಡು ಹಾಗೂ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ಸರ್ಕಾರಿ ಬಸ್‌ಗಳು ಸಂಚರಿಸಿದವು. ಆದರೆ ಬಸ್‌ನಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಇದ್ದರು. ಹಾಲು, ಮೊಟ್ಟೆ, ತರಕಾರಿ, ಅಡುಗೆ ಅನಿಲ, ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ಸಾಗಣೆ ವಾಹನಗಳ ಸಂಖ್ಯೆಯೂ ವಿರಳವಾಗಿತ್ತು.

ADVERTISEMENT

ಉತ್ತಮ ಸ್ಪಂದನೆ: ನಗರದಲ್ಲಿ ವಾರಾಂತ್ಯದ ಕರ್ಫ್ಯೂಗೆ ನಾಗರಿಕರು ಉತ್ತಮವಾಗಿ ಸ್ಪಂದಿಸಿದ್ದಾರೆ. ಬೆಳಿಗ್ಗೆ 9.30ಕ್ಕೆ ಬಹುತೇಕ ಅಂಗಡಿಗಳನ್ನು ಬಂದ್‌ ಮಾಡಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಎನ್‌. ಶಶಿಕುಮಾರ್ ತಿಳಿಸಿದರು.

35 ಮೊಬೈಲ್ ಸ್ಕ್ಯಾಡ್‌ಗಳು, ಸಾವಿರ ಕ್ಕೂ ಅಧಿಕ ಸಿಬ್ಬಂದಿ ಹಾಗೂ 54 ಚೆಕ್ ಪೋಸ್ಟ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಅನಗತ್ಯವಾಗಿ ರಸ್ತೆಯಲ್ಲಿ ಸುತ್ತಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಒಂದು ವಾರದಿಂದ 1,502 ಮಾಸ್ಕ್ ಉಲ್ಲಂಘನೆ ಪ್ರಕರಣ ಹಾಗೂ ಶುಕ್ರವಾರ ಒಂದೇ ದಿನ ಸರ್ಕಾರದ ಆದೇಶ ಉಲ್ಲಂಘಿಸಿದ ಮಳಿಗೆಗಳ ವಿರುದ್ಧ 30 ಪ್ರಕರಣ ದಾಖಲಾಗಿದೆ. ನಾಲ್ಕೈದು ದಿನಗಳಲ್ಲಿ 112 ಪ್ರಕರಣ ದಾಖಲಾಗಿವೆ ಎಂದು ಅವರು ಮಾಹಿತಿ ನೀಡಿದರು.

‘ವಾರಾಂತ್ಯದಲ್ಲಿ ನಿರ್ಮಾಣ ಚಟುವಟಿಕೆ ಇಲ್ಲ’

ವಾರಾಂತ್ಯದ ಕರ್ಫ್ಯೂ ಸಂರ್ಭದಲ್ಲಿ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ. ಆದರೂ ನಿರ್ಮಾಣ ಕೆಲಸ ನಡೆಯುವ ಸ್ಥಳದಲ್ಲೇ ಕಾರ್ಮಿಕರು ಲಭ್ಯವಿದ್ದು, ಹೊರಗಿನ ಪ್ರದೇಶದಿಂದ ಕಾರ್ಮಿಕರನ್ನು ಕರೆತರುವ ಅಗತ್ಯವಿಲ್ಲದ ಕಾಮಗಾರಿಗಳನ್ನು ನಡೆಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ಸಾರ್ವಜನಿಕರು ಮಾಸ್ಕ್ ಧರಿಸುವುದು, ಕೈಗಳ ನೈರ್ಮಲ್ಯ ಹಾಗೂ ಸುರಕ್ಷಿತ ಅಂತರವನ್ನು ಕಾಪಾಡುವುದು, ಅಲ್ಲಲ್ಲಿ ಉಗುಳದೆ ನಿಯಮ ಪಾಲನೆ ಮಾಡುವ ಮೂಲಕ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.