ADVERTISEMENT

8 ಅಭ್ಯರ್ಥಿಗಳು ಸ್ಪರ್ಧೆಯಿಂದ ಹಿಂದಕ್ಕೆ

ದಕ್ಷಿಣ ಕನ್ನಡ ಜಿಲ್ಲೆ– 68 ಹೆಚ್ಚುವರಿ ಮತಗಟ್ಟೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 12:37 IST
Last Updated 28 ಏಪ್ರಿಲ್ 2018, 12:37 IST
ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ
ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ   

ಮಂಗಳೂರು: ಮೇ 12ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಒಟ್ಟು 58 ಮಂದಿ ಕಣದಲ್ಲಿ ಉಳಿದಿದ್ದಾರೆ. ಶುಕ್ರವಾರ ನಾಮಪತ್ರ ವಾಪಸು ಪಡೆಯುವ ಅವಧಿ ಕೊನೆಗೊಂಡಿದ್ದು, ಚಿಹ್ನೆಗಳನ್ನು ಹಂಚಿಕೆ ಮಾಡಲಾಗಿದೆ.

ಶುಕ್ರವಾರ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ‘ಮಂಗಳೂರು ನಗರ ದಕ್ಷಿಣ ಮತ್ತು ಪುತ್ತೂರು ಕ್ಷೇತ್ರಗಳಲ್ಲಿ ಹೆಚ್ಚಿನ ಅಭ್ಯರ್ಥಿಗಳಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ತಲಾ 11 ಮಂದಿ ಕಣದಲ್ಲಿದ್ದಾರೆ. ಮೂಡುಬಿದಿರೆ ಮತ್ತು ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ ತಲಾ ಏಳು, ಬೆಳ್ತಂಗಡಿ ಮತ್ತು ಸುಳ್ಯ ಕ್ಷೇತ್ರಗಳಲ್ಲಿ ತಲಾ ಆರು, ಮಂಗಳೂರು ಮತ್ತು ಬಂಟ್ವಾಳ ಕ್ಷೇತ್ರಗಳಲ್ಲಿ ತಲಾ ಐದು ಮಂದಿ ಕಣದಲ್ಲಿ ಉಳಿದಿದ್ದಾರೆ’ ಎಂದರು.

ಬೆಳ್ತಂಗಡಿ ಕ್ಷೇತ್ರದಲ್ಲಿ ಯು.ಪ್ರಸಾದ್ ಕುಮಾರ್, ಮಂಗಳೂರು ಉತ್ತರದಲ್ಲಿ ಡಿ.ಪಿ.ಹಮ್ಮಬ್ಬ, ಮಂಗಳೂರು ದಕ್ಷಿಣದಲ್ಲಿ ಪ್ಯಾಟ್ರಿಕ್ ಲೋಬೊ ಮತ್ತು ಮ್ಯಾಕ್ಸಿಮ್‌ ಪಿಂಟೊ, ಬಂಟ್ವಾಳದಲ್ಲಿ ಮಹಮ್ಮದ್ ರಿಯಾಝ್‌ ಮತ್ತು ಅಬ್ದುಲ್ ಮಜೀದ್ ಖಾನ್, ಪುತ್ತೂರಿನಲ್ಲಿ ಮಹಮ್ಮದ್ ಅಶ್ರಫ್‌ ಕಲ್ಲೇಗ, ಸುಳ್ಯದಲ್ಲಿ ಪಕ್ಷೇತರ ಅಭ್ಯರ್ಥಿ ರಮೇಶ ಶುಕ್ರವಾರ ನಾಮಪತ್ರಗಳನ್ನು ವಾಪಸು ಪಡೆದಿದ್ದಾರೆ ಎಂದು ತಿಳಿಸಿದರು.

ADVERTISEMENT

ಚುನಾವಣೆಗೆ ಸಿದ್ಧ:

ಜಿಲ್ಲೆಯಲ್ಲಿ 1,858 ಮತಗಟ್ಟೆಗಳಿದ್ದು, ಈ ಪೈಕಿ 68 ಹೆಚ್ಚುವರಿ ಮತಗಟ್ಟೆಗಳು. ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) 2,699 ಬ್ಯಾಲೆಟ್‌ ಯೂನಿಟ್‌, 2,262 ಕಂಟ್ರೋಲ್‌ ಯೂನಿಟ್‌ ಮತ್ತು 2,608 ವಿವಿಪ್ಯಾಟ್‌ ಯಂತ್ರಗಳನ್ನು ಸನ್ನದ್ಧವಾಗಿ ಇರಿಸಲಾಗಿದೆ. ಶೀಘ್ರದಲ್ಲಿಯೇ ಅಂತಿಮ ಹಂತದ ಬ್ಯಾಲೆಟ್‌ ಯೂನಿಟ್‌ಗಳನ್ನು ಅಳವಡಿಸಲಾಗುವುದು ಎಂದರು.

ಚುನಾವಣಾ ಪ್ರಕ್ರಿಯೆ ಮೇಲೆ ನಿಗಾ ವಹಿಸಲು ಆರು ವೀಕ್ಷಕರು ಬಂದಿದ್ದಾರೆ. ಜಿಲ್ಲೆಯಲ್ಲಿ 8,41,073 ಪುರುಷರು ಮತ್ತು 8,70,675 ಮಹಿಳೆಯರು ಸೇರಿದಂತೆ 17,11,848 ಮತದಾರರಿದ್ದಾರೆ. ಈ ಪೈಕಿ 100 ಮಂದಿ ತೃತೀಯ ಲಿಂಗಿಗಳಿದ್ದಾರೆ. 380 ಸೇವಾ ಮತದಾರರಿದ್ದಾರೆ ಎಂದು ವಿವರ ನೀಡಿದರು.

‘ಸಮಾಧಾನ್‌’ ತಂತ್ರಾಂಶದ ಮೂಲಕ ಚುನಾವಣೆಗೆ ಸಂಬಂಧಿಸಿದಂತೆ 142 ದೂರುಗಳನ್ನು ಸ್ವೀಕರಿಸಲಾಗಿತ್ತು. ಈ ಪೈಕಿ 140 ದೂರುಗಳ ವಿಲೇವಾರಿ ಆಗಿದೆ. ಬಹುತೇಕ ದೂರುಗಳು ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳನ್ನು ವಿರೂ‍ಪಗೊಳಿಸಿದ ಆರೋಪಕ್ಕೆ ಸಂಬಂಧಿಸಿದವು. ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿ ಸಭೆ ನಡೆಸಿದ ದೂರುಗಳೂ ಇದ್ದವು ಎಂದರು.

‘ಸುವಿಧಾ’ ತಂತ್ರಾಂಶದ ಮೂಲಕ 501 ಅರ್ಜಿಗಳು ಬಂದಿದ್ದವು. 479 ಅರ್ಜಿಗಳನ್ನು ವಿಲೇವಾರಿ ಮಾಡಿದ್ದು, 22 ಅರ್ಜಿಗಳು ಬಾಕಿ ಉಳಿದಿವೆ ಎಂದು ತಿಳಿಸಿದರು.

₹ 11.75 ಲಕ್ಷ ನಗದು ವಶ:

ಜಿಲ್ಲೆಯಲ್ಲಿ ಚುನಾವಣಾ ಅಕ್ರಮ ತಡೆ ತನಿಖಾ ಠಾಣೆಗಳಲ್ಲಿ ತಪಾಸಣೆ ವೇಳೆ ಒಟ್ಟು ₹ 11.75 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. 23,428 ಲೀಟರ್‌ ಮದ್ಯ ಮತ್ತು 6.85 ಕೆ.ಜಿ. ಮಾದಕ ವಸ್ತುಗಳನ್ನೂ ವಶಕ್ಕೆ ಪಡೆಯಲಾಗಿದೆ. ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಆರೋಪದಡಿ 18 ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಿದ್ದು, ಅಬಕಾರಿ ಕಾನೂನಿನಡಿ 291 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.