ADVERTISEMENT

ಮಹಿಳಾಪರ ಚಿಂತನೆಯಿಂದ ಆರೋಗ್ಯಯುತ ಸಮಾಜ: ಜಯಂತಿ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 4:48 IST
Last Updated 7 ಜುಲೈ 2025, 4:48 IST
ಕುತ್ತಾರಿನ ಮುನ್ನೂರು ಯುವಕ ಮಂಡಲದಲ್ಲಿ ಜನವಾದಿ ಮಹಿಳಾ ಸಂಘಟನೆಯ ಉಳ್ಳಾಲ ವಲಯ ಸಮ್ಮೇಳನ ನಡೆಯಿತು
ಕುತ್ತಾರಿನ ಮುನ್ನೂರು ಯುವಕ ಮಂಡಲದಲ್ಲಿ ಜನವಾದಿ ಮಹಿಳಾ ಸಂಘಟನೆಯ ಉಳ್ಳಾಲ ವಲಯ ಸಮ್ಮೇಳನ ನಡೆಯಿತು   

ಉಳ್ಳಾಲ: ಮಹಿಳಾಪರ ಚಿಂತನೆಯನ್ನು ಬೆಳೆಸುವ ಮೂಲಕ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ ಎಂದು ಜನವಾದಿ ಮಹಿಳಾ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷೆ ಜಯಂತಿ ಶೆಟ್ಟಿ ಅಭಿಪ್ರಾಯಪಟ್ಟರು.

ಕುತ್ತಾರಿನ ಮುನ್ನೂರು ಯುವಕ ಮಂಡಲದಲ್ಲಿ ಭಾನುವಾರ ನಡೆದ ಜನವಾದಿ ಮಹಿಳಾ ಸಂಘಟನೆಯ ಉಳ್ಳಾಲ ವಲಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ಮಹಿಳೆಯರನ್ನು ಅತ್ಯಂತ ತುಚ್ಛವಾಗಿ ಕಾಣುವ ಪ್ರವ್ರತ್ತಿ ವ್ಯಾಪಕಗೊಳ್ಳುತ್ತಿದೆ. ಪ್ರತಿಗಾಮಿ ಶಕ್ತಿಗಳು ಮಹಿಳೆಯರನ್ನು ನಿಕೃಷ್ಟವಾಗಿ ಕಾಣುತ್ತಿವೆ’ ಎಂದರು.

ADVERTISEMENT

ಮುಖ್ಯ ಅತಿಥಿಯಾಗಿದ್ದ ಮುಖಂಡರಾದ ಪದ್ಮಾವತಿ ಶೆಟ್ಟಿ ಮಾತನಾಡಿ, ರಾಜಕೀಯದಲ್ಲಿ, ಉದ್ಯೋಗದಲ್ಲಿ ಮಹಿಳಾ ಮೀಸಲಾತಿ ಜಾರಿಯಾಗುತ್ತಿಲ್ಲ. ಸಮಾನ ದುಡಿಮೆಗೆ ಸಮಾನ ವೇತನ ನೀಡುತ್ತಿಲ್ಲ. ಶೈಕ್ಷಣಿಕವಾಗಿ ಮಹಿಳೆಯರ ಪ್ರಮಾಣ ಜಾಸ್ತಿಯಿದ್ದರೂ ಯೋಗ್ಯ ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ ಎಂದರು

ಜೆಎಂಎಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಭಾರತಿ ಬೋಳಾರ, ಮುಖಂಡರಾದ ಪದ್ಮಾವತಿ ಕುತ್ತಾರ್ ಮಾತನಾಡಿದರು. ಅಧ್ಯಕ್ಷತೆಯನ್ನು ಹಿರಿಯ ಮುಖಂಡರಾದ ವಿಲಾಸಿನಿ ತೊಕ್ಕೊಟ್ಟು ವಹಿಸಿದ್ದರು.

ಮಹಿಳಾಪರ ಚಿಂತಕಿ ಅರ್ಚನಾ ರಾಮಚಂದ್ರ, ಪಂಚಾಯಿತಿ ಸದಸಯೆ ರಾಜೇಶ್ವರಿ, ಪ್ರಮುಖರಾದ ಪ್ರೀತಾ ರೋಹಿದಾಸ್, ಪ್ರಮೋದಿನಿ ಭಾಗವಹಿಸಿದ್ದರು.

ಮಹಿಳೆಯರು ಅನುಭವಿಸುವ ಸಂಕಷ್ಟಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ ಮುಂಬರುವ ದಿನಗಳಲ್ಲಿ ಸದೃಢ ಮಹಿಳಾ ಚಳವಳಿಯನ್ನು ಕಟ್ಟಲು ಸಮ್ಮೇಳನವು ದೃಢ ತೀರ್ಮಾನ ಕೈಗೊಂಡಿತು.

ನೂತನ ತಾಲ್ಲೂಕು ಸಮಿತಿಯನ್ನು ಆಯ್ಕೆಗೊಳಿಸಿತು. ಅಧ್ಯಕ್ಷರಾಗಿ ಮಾಲತಿ ಸುಧೀರ್ ತೊಕ್ಕೋಟು, ಕಾರ್ಯದರ್ಶಿಯಾಗಿ ಪ್ರಮೋದಿನಿ ಕಲ್ಲಾಪು, ಖಜಾಂಚಿಯಾಗಿ ಅರ್ಚನಾ ರಾಮಚಂದ್ರ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಪದ್ಮಾವತಿ ಶೆಟ್ಟಿ, ರಾಜೇಶ್ವರಿ, ಶಾಲಿನಿ ಪೂಜಾರಿ, ರತ್ನಮಾಲಾ, ಉಮಾವತಿ, ವಿನೋದಾ ಅಸೈಗೋಳಿ, ಜತೆ ಕಾರ್ಯದರ್ಶಿಗಳಾಗಿ ಪ್ರೀತಾ ರೋಹಿದಾಸ್, ವಿಲಾಸಿನಿ, ಕಮರುನ್ನೀಸಾ, ಗುಣವತಿ, ಗುಲಾಬಿ ಅವರನ್ನು ಆಯ್ಕೆ ಮಾಡಲಾಯಿತು. 16 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.