ADVERTISEMENT

ಬಂಟ್ವಾಳ | ಡ್ರಾಗನ್ ಫ್ರೂಟ್‌ ಕೃಷಿಯಲ್ಲಿ ಖುಷಿ ಕಂಡ ಹೋಟೆಲ್ ಉದ್ಯಮಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2023, 6:50 IST
Last Updated 31 ಜುಲೈ 2023, 6:50 IST
ಸಾಲಾಗಿ ನಾಟಿ ಮಾಡಿದ ಡ್ರ್ಯಾಗನ್ ಫ್ರೂಟ್ ಗಿಡಗಳು
ಸಾಲಾಗಿ ನಾಟಿ ಮಾಡಿದ ಡ್ರ್ಯಾಗನ್ ಫ್ರೂಟ್ ಗಿಡಗಳು   

ಮೋಹನ್ ಕೆ.ಶ್ರೀಯಾನ್ ರಾಯಿ

ಬಂಟ್ವಾಳ: ಜಮೀನಿದ್ದರೂ ನೀರಿನ ಸಮಸ್ಯೆ ಸಹಿತ ಅತಿವೃಷ್ಟಿ ಮತ್ತು ಅನಾವೃಷ್ಟಿ ನೆಪದಲ್ಲಿ ಅಡಿಕೆ, ತೆಂಗು, ಬಾಳೆ, ಕಾಳು ಮೆಣಸು, ರಬ್ಬರ್ ಬೆಳೆಗೆ ಜಿಲ್ಲೆಯ ಕೆಲವು ರೈತರು ಸೀಮಿತಗೊಂಡಿದ್ದಾರೆ. ಆದರೆ, ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ಹೊಟೇಲ್ ಉದ್ಯಮಿಯೊಬ್ಬರು ಸುಮಾರು 2.50 ಎಕರೆಯಲ್ಲಿ ‘ಡ್ರ್ಯಾಗನ್ ಫ್ರೂಟ್’ ಬೆಳೆದು ಗಮನ ಸೆಳೆದಿದ್ದಾರೆ.

ಇಲ್ಲಿನ ಕುರಿಯಾಳ ಗ್ರಾಮದ ನೋರ್ನಡ್ಕ ಪಡು ಎಂಬಲ್ಲಿಯ ಹೋಟೆಲ್ ಉದ್ಯಮಿ ಚಂದ್ರಹಾಸ ಶೆಟ್ಟಿ ರಂಗೋಲಿ ಅವರು ಮೊದಲ ವರ್ಷದಲ್ಲೇ ವೆಚ್ಚ ಮಾಡಿದ ₹ 7.5 ಲಕ್ಷವನ್ನು ಫಸಲಿನಿಂದ ಮರಳಿ ಪಡೆದುಕೊಂಡಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ‘ಡ್ರ್ಯಾಗನ್ ಫ್ರೂಟ್’ ಬೆಳೆದ ಮೊದಲ ಕೃಷಿಕ ಎನಿಸಿಕೊಂಡಿದ್ದಾರೆ. ಸುಮಾರು ಐದಾರು ಎಕರೆ ಗುಡ್ಡ ಪ್ರದೇಶವನ್ನು ಹಂತ ಹಂತವಾಗಿ ಸಮತಟ್ಟುಗೊಳಿಸಿ, ಒಂದೆಡೆ ತೆಂಗು, ಇನ್ನೊಂದೆಡೆ ಕಂಗು, ಮತ್ತೊಂದು ಗದ್ದೆ ನಡುವೆ ಡ್ರ್ಯಾಗನ್‌ ಕಂಗೊಳಿಸುತ್ತಿದೆ.

ADVERTISEMENT

ಕೋವಿಡ್‌ ಲಾಕ್‌ಡೌನ್‌ ವೇಳೆ ಮನೆಯಲ್ಲಿದ್ದಾಗ ಮೊಬೈಲ್ ಯುಟ್ಯೂಬ್ ವೀಕ್ಷಿಸುತ್ತಿದ್ದ ಚಂದ್ರಹಾಸ ಶೆಟ್ಟಿ ಅವರಿಗೆ ಬೆಂಗಳೂರಿನ ಯಲಹಂಕದ ಕೃಷಿಕ ಶ್ರೀನಿವಾಸ ರೆಡ್ಡಿ ಸುಮಾರು 3 ಎಕರೆಯಲ್ಲಿ ಬೆಳೆದ ‘ಡ್ರ್ಯಾಗನ್ ಫ್ರೂಟ್’ ಕೃಷಿ ಗಮನ ಸೆಳೆದಿದೆ. ಶ್ರೀನಿವಾಸ ರೆಡ್ಡಿ ಅವರನ್ನು ಸಂಪರ್ಕಿಸಿ ಅವರ ತೋಟಕ್ಕೆ ಭೇಟಿ ನೀಡಿ ಬಗ್ಗೆ ಮಾಹಿತಿ ಪಡೆದುಕೊಂಡು ಗಿಡ ತರಿಸಿದ್ದರು.

ಹೆಚ್ಚು ಇಳುವರಿ, ಉತ್ತಮ ಲಾಭ: ಗಿಡ ನೆಟ್ಟು ಕೇವಲ 1 ವರ್ಷ 2 ತಿಂಗಳಲ್ಲಿ ಹೂವು ಬಿಡಲು ಆರಂಭಿಸಿದೆ. ಹೂವು ಬಿಟ್ಟು ಫಲ ಸಿಗಲು 40 ದಿನ ಬೇಕು. ಏಪ್ರಿಲ್, ಮೇ ತಿಂಗಳಲ್ಲಿ ಹೂ ಬಿಟ್ಟರೆ ನವೆಂಬರ್ ತಿಂಗಳವರೆಗೂ ಇಳುವರಿ ಸಿಗುತ್ತದೆ. ಪ್ರತಿ 20 ದಿನಕ್ಕೊಮ್ಮೆ ಗಿಡ ಹೂವು ಬಿಡುತ್ತದೆ. ಜಮೀನು ಸಮತಟ್ಟು ಸಹಿತ ಗಿಡ ನಾಟಿ, ಸಿಮೆಂಟ್ ಕಂಬ ಅಳವಡಿಕೆ ಸೇರಿದಂತೆ ಒಟ್ಟು ₹ 7.5 ಲಕ್ಷ ವಿನಿಯೋಗಿಸಿದ್ದಾರೆ. ಸಿಮೆಂಟ್‌ ಕಂಬಕ್ಕೆ ಬದಲಾಗಿ ಕಲ್ಲಿನ ಕಂಬ ಮತ್ತು ಮೇಲ್ಭಾಗದಲ್ಲಿ ಹಳೆ ಟೈರ್‌ ಬಳಸಿ ಕಡಿಮೆ ಖರ್ಚಿನಲ್ಲಿ ಬೆಳೆಸಲು ಸಾಧ್ಯವಿದೆ. ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ 8 ರಿಂದ 9 ಅಡಿ, ಮತ್ತು ಒಂದು ಸಾಲಿನಿಂದ ಇನ್ನೊಂದು ಸಾಲಿಗೆ 10 ರಿಂದ 11 ಅಡಿ ಅಂತರ ಇಟ್ಟು ಒಂದು ಕಂಬಕ್ಕೆ ನಾಲ್ಕು ಗಿಡ ನೆಡಬಹುದು.

ಒಂದು ಹಣ್ಣು ಸುಮಾರು 750 ಗ್ರಾಂ ತೂಕ ಬರುತ್ತದೆ. ಕಡಿಮೆ ತೂಕ ಬಂದರೂ ಆದಾಯಕ್ಕೆ ಕೊರತೆ ಆಗುವುದಿಲ್ಲ. ಈಗಾಗಲೇ ಒಂದೂವರೆ ಟನ್ ಹಣ್ಣು ಸ್ಥಳೀಯ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದು, ₹ 3.5 ಲಕ್ಷ ಆದಾಯ ಬಂದಿದೆ. ಇನ್ನೂ ₹ 4 ಲಕ್ಷ ಮೊತ್ತದ ಹಣ್ಣು ಸಿಗುವ ನಿರೀಕ್ಷೆ ಇದೆ. ಗಿಡವೊಂದಕ್ಕೆ ಸುಮಾರು 25 ವರ್ಷದ ಬಾಳ್ವಿಕೆ ಇದ್ದು, ವಾರಕ್ಕೆರಡು ಬಾರಿ ಹನಿ ನೀರಾವರಿ ಮೂಲಕ ನೀರುಣಿಸಲಾಗುತ್ತಿದೆ. ಒಟ್ಟು 4 ಸಾವಿರ ಗಿಡಗಳಿದ್ದು, ವರ್ಷಕ್ಕೆ 2 ಬಾರಿ ಗೊಬ್ಬರ ಹಾಕಿ, ಸುತ್ತಲೂ ಹುಲ್ಲು ಕಟಾವು ಮಾಡಿದರೆ ಗಿಡಗಳು ಚೆನ್ನಾಗಿ ಬೆಳೆದು ಉತ್ತಮ ಇಳುವರಿ ನೀಡುತ್ತದೆ. ಹಟ್ಟಿಗೊಬ್ಬರಕ್ಕೆ ಬದಲಾಗಿ ಕೋಳಿ, ಕುರಿ ಗೊಬ್ಬರ ಅಥವಾ ಸುಡುಮಣ್ಣು ಬಳಕೆಯೂ ಮಾಡಬಹುದು. ಈ ಹಣ್ಣು ಆರೋಗ್ಯ ವರ್ಧಕವಾಗಿದೆ ಎಂದು ಚಂದ್ರಹಾಸ ಶೆಟ್ಟಿ ಮಾಹಿತಿ ನೀಡಿದರು.

ಅವರ ತೋಟಕ್ಕೆ ಪ್ರತಿದಿನ ಜಿಲ್ಲೆಯ ವಿವಿಧೆಡೆಯಿಂದ ಹಲವಾರು ಮಂದಿ ಕೃಷಿಕರರು ಬಂದು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಗಿಡದಲ್ಲಿ ಮುಳ್ಳು ಇರುವುದರಿಂದ ನವಿಲು, ಮಂಗ, ಹಂದಿ ಕಾಟವೂ ಇಲ್ಲ. ಗಿಡದ ಬುಡದಲ್ಲಿ ನೀರು ನಿಲ್ಲದದಂತೆ ಮಾಡಿದರೆ ಉತ್ತಮ ಕೃಷಿ ಎನ್ನುತ್ತಾರೆ ಚಂದ್ರಹಾಸ ಶೆಟ್ಟಿ.

ಚಂದ್ರಹಾಸ ಶೆಟ್ಟಿ ಅವರ ಬೇಡಿಕೆಯಂತೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸಿಮೆಂಟ್ ಕಂಬಗಳನ್ನು ಸಿದ್ಧಪಡಿಸಿ ಪೂರೈಕೆ ಮಾಡಿದ್ದೇನೆ ಎನ್ನುತ್ತಾರೆ ಸಿಮೆಂಟ್ ಉತ್ಪನ್ನಗಳ ಉದ್ಯಮಿ ಜ್ಞಾನೇಶ್ ಕೈಕುಂಜೆ.

ಸಾಲಾಗಿ ನಾಟಿ ಮಾಡಿದ ಡ್ರ್ಯಾಗನ್ ಫ್ರೂಟ್ ಗಿಡಗಳು
ಡ್ರ್ಯಾಗನ್ ಫ್ರೂಟ್ ಹಣ್ಣಿನ ತೋಟ ನೋಡಲು ಬಂದ ಕೃಷಿಕರಿಗೆ ಮಾಹಿತಿ ನೀಡುತ್ತಿರುವ ಚಂದ್ರಹಾಸ ಶೆಟ್ಟಿ
ಸಾಲಾಗಿ ನಾಟಿ ಮಾಡಿದ ಡ್ರ್ಯಾಗನ್ ಫ್ರೂಟ್ ಗಿಡಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.