ಮೂಲ್ಕಿ: ಕಿನ್ನಿಗೋಳಿಯಲ್ಲಿ ರೇಷನ್ ವಿತರಣೆಗೆ ಪ್ರತ್ಯೇಕ ಸ್ಥಳಾವಕಾಶ ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಸಾರ್ವಜನಿಕರು ಕೋರಿದರು.
ಕಿನ್ನಿಗೋಳಿ ಚರ್ಚ್ ಸಭಾಂಗಣದಲ್ಲಿ ಬುಧವಾರ ಅಹವಾಲು ಸ್ವೀಕರಿಸಿದ ಅವರಿಗೆ ಹತ್ತಾರು ಮನವಿಗಳು ಬಂದವು. ಪುನರೂರು ಅನುದಾನಿತ ಶಾಲೆಯ ಸಮಸ್ಯೆ ನೀಗಿಸಬೇಕು, ಕಟೀಲು ಒಳರಸ್ತೆಯ ಅವ್ಯವಸ್ಥೆ ಸರಿಪಡಿಸಬೇಕು ಎಂದು ಕೋರಿದ ಸಾರ್ವಜನಿಕರು ಬಳ್ಕುಂಜೆಯಲ್ಲಿ ಕೈಗಾರಿಕಾ ಪ್ರದೇಶಕ್ಕೆಂದು ಜಾಗ ಮೀಸಲಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ವಸತಿ ನಿವೇಶನದ ಸಮಸ್ಯೆ, ಹಾಸ್ಟೆಲ್ ದುರಸ್ತಿ ಮಾಡಲು ಆಗ್ರಹ, ವಿದ್ಯಾರ್ಥಿ ವೇತನದ ತೊಂದರೆ ಬಗ್ಗೆ ಗಮನ ಸೆಳೆದ ಜನರು ಅರಿವು ಯೋಜನೆಗೆ ಅಡಚಣೆ ಆಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಪಾಂಪೈ ಕಾಲೇಜು ರಸ್ತೆಯ ಅವ್ಯವಸ್ಥೆ ಸರಿಪಡಿಸಬೇಕು, ಕಿನ್ನಿಗೋಳಿ ಶಾಲಾ ಆವರಣದ ತಡೆಗೋಡೆ ದುರಸ್ತಿ ಮಾಡಬೇಕು, ತಾಳಿಪಾಡಿಯಲ್ಲಿ ರಸ್ತೆಗೆ ಅಡ್ಡಿ ಆಗುತ್ತಿರುವುದನ್ನು ಸರಿಪಡಿಸಬೇಕು, ಐಕಳದಲ್ಲಿ ರಸ್ತೆ ಕುಸಿತ ತಡೆಗೆ ಗೋಡೆ ನಿರ್ಮಿಸಬೇಕು ಎಂದು ಮನವಿ ಸಲ್ಲಿಸಿ ಎಳತ್ತೂರು ತ್ಯಾಜ್ಯ ಘಟಕಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಕಟೀಲಿನಲ್ಲಿ ಗುಡ್ಡ ಕುಸಿತದ ಭೀತಿ ಉಂಟಾಗಿದೆ, ಬಿತ್ತುಲ್ ಪರಿಸರದ ಬಾವಿ ಕಲುಷಿತಗೊಂಡಿದೆ, ಐಕಳದ ಬೃಹತ್ ಆಲದಮರದಿಂದ ಸಂಚಾರಕ್ಕೆ ಅಡ್ಡಿ ಆಗುತ್ತಿದೆ, ಕಿನ್ನಿಗೋಳಿ-ಗುತ್ತಕಾಡು ರಸ್ತೆ ಅಭಿವೃದ್ಧಿಪಡಿಸಬೇಕು, ಪೆರಂಕಿಲ ರಸ್ತೆಯ ಬಳಿ ಚರಂಡಿ ದುರಸ್ತಿ ಮಾಡಬೇಕು, ಉಳೆಪಾಡಿ ಜಮೀನಿನ ಕಾನೂನು ತೊಡಕು ಸರಿಪಡಿಸಬೇಕು, ಕಿನ್ನಿಗೋಳಿಯ ಬಸ್ ನಿಲ್ದಾಣ ಸ್ಥಳಾಂತರ ಮಾಡಬೇಕು, ಇ-ಖಾತೆಯ ಅವ್ಯವಸ್ಥೆ ಸರಿಪಡಿಸಬೇಕು, ಬಜಪೆ ಘನತ್ಯಾಜ್ಯ ಘಟಕ ಬೇಡ ಎಂದು ಕೋರಿದರು.
‘ತಾಲ್ಲೂಕು ಮಟ್ಟದಲ್ಲಿ ಅಹವಾಲು ಸ್ವೀಕಾರ ಪ್ರತಿ ಜಿಲ್ಲೆಯಲ್ಲೂ ನಡೆಯಲಿದೆ. ಪ್ರತಿಯೊಂದು ಅರ್ಜಿಗೂ ಅಧಿಕಾರಿಗಳು ಸ್ಪಂದಿಸಲಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಕ್ಷೇತ್ರದಲ್ಲಿ ಅನೇಕ ಕಾಮಗಾರಿಗಳು ಬಾಕಿ ಇವೆ. ಸಚಿವರು ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ಒದಗಿಸಬೇಕು ಎಂದು ಕೋರಿದರು. ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಉಸ್ತುವಾರಿ ಸಚಿವರನ್ನು ಬದಲಾಯಿಸುವ ಬಗ್ಗೆ ಹರಡುತ್ತಿರುವ ಸುದ್ದಿ ಸುಳ್ಳು ಎಂದರು.
ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಕಿನ್ನಿಗೋಳಿ ಮತ್ತು ಮೂಲ್ಕಿಯ ಇಂದಿರಾ ಕ್ಯಾಂಟಿನ್‌ನಲ್ಲಿ ಉಪಾಹಾರ ಸೇವಿಸಿದರು. ಕಟೀಲು ಕ್ಷೇತ್ರಕ್ಕೆ ಭೇಟಿ ನೀಡಿದರು. ಮೂಲ್ಕಿಯಲ್ಲಿ ನಿರ್ಮಾಣವಾಗುತ್ತಿರುವ ಆಡಳಿತ ಸೌಧಕ್ಕೂ ಭೇಟಿ ನೀಡಿದರು. ಮೂಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ರಾಜ್ಯ ಗೇರು ನಿಗಮದ ಅಧಕ್ಷೆ ಮಮತಾ ಗಟ್ಟಿ, ಮುಖಂಡರಾದ ಕೆ.ಅಭಯಚಂದ್ರ, ಮಿಥುನ್ ರೈ, ವಸಂತ ಬೆರ್ನಾಡ್, ಪ್ರಭಾರ ಜಿಲ್ಲಾಧಿಕಾರಿ ಸಂತೋಷ್‌ಕುಮಾರ್, ಯೋಜನಾ ಅಧಿಕಾರಿ ಜಯಲಕ್ಷ್ಮೀ, ತಹಶೀಲ್ದಾರ್ ಶ್ರೀಧರ ಎಸ್. ಮುಂದಲಮನಿ, ಮುಖ್ಯಾಧಿಕಾರಿ ಮಧುಕರ್, ಪಂಚಾಯಿತಿ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.