ADVERTISEMENT

ಉಪ್ಪಿನಂಗಡಿ | ಆಟಿ ಅಮವಾಸ್ಯೆ: ತೀರ್ಥ ಸ್ನಾನ, ಪಿತೃಗಳಿಗೆ ಪಿಂಡ ಪ್ರಧಾನ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 3:01 IST
Last Updated 25 ಜುಲೈ 2025, 3:01 IST
ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿಯ ನದಿಯ ಸ್ನಾನಘಟ್ಟದಲ್ಲಿ ಭಕ್ತರು ತೀರ್ಥ ಸ್ನಾನ ಮಾಡಿದರು
ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿಯ ನದಿಯ ಸ್ನಾನಘಟ್ಟದಲ್ಲಿ ಭಕ್ತರು ತೀರ್ಥ ಸ್ನಾನ ಮಾಡಿದರು   

ಉಪ್ಪಿನಂಗಡಿ: ಆಟಿ (ಆಷಾಢ) ಅಮಾವಾಸ್ಯೆ ದಿನವಾದ ಗುರುವಾರ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮಹಾಕಾಳಿ ಕ್ಷೇತ್ರದಲ್ಲಿ ಸಹಸ್ರಾರು ಭಕ್ತರು ತೀರ್ಥಸ್ನಾನ ಹಾಗೂ ಹಿರಿಯರಿಗೆ ಸದ್ಗತಿ ಬಯಸಿ ತಿಲಹೋಮಾದಿ ಪಿಂಡ ಪ್ರಧಾನ ಕಾರ್ಯಕ್ರಮಗಳು ನಡೆದವು.

ನೇತ್ರಾವತಿ ಮತ್ತು ಕುಮಾರಧಾರಾ ನದಿ ಸಂಗಮ ಕ್ಷೇತ್ರವಾದ ಇಲ್ಲಿನ ದೇವಾಲಯಕ್ಕೆ ಬೆಳಗ್ಗಿಯಿಂದಲೇ ರಾಜ್ಯ, ಹೊರ ರಾಜ್ಯಗಳಿಂದ ಬಂದಿದ್ದ ಸಹಸ್ರಾರು ಭಕ್ತರು ಪುರೋಹಿತರ ಮುಖೇನ ಗತಿಸಿದ ತಮ್ಮ ಹಿರಿಯರಿಗೆ ತಿಲಹೋಮ, ಪಿಂಡ ಪ್ರಧಾನ ರೆವೇರಿಸಿದರು. ನೂರಾರು ಮಂದಿ ನವ ಧಾನ್ಯಗಳನ್ನು ಸಂಗಮ ತಟದಲ್ಲಿ ಗಂಗಾ ಮಾತೆಗೆ ಸಮರ್ಪಿಸಿ ಗತಿಸಿದ ಹಿರಿಯರಿಗೆ ಸದ್ಗತಿ ಬಯಸಿದರು. ಆಟಿ ಅಮಾವಾಸ್ಯೆಯ ತೀರ್ಥ ಸ್ನಾನ ಮಾಡಿ ಪುನೀತರಾದರು.

ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ತಿಲಹೋಮಾದಿ ಪಿಂಡ ಪ್ರಧಾನ ಕಾರ್ಯಕ್ರಮ ನಡೆಯಿತು

ಹಾಲೆ ಮರದ ಕಸಾಯ ವಿತರಣೆ:

ದೇವಾಲಯದಲ್ಲಿ ಬೆಳಿಗ್ಗಿನಿಂದಲೇ ಆಟಿ ಅಮಾವಾಸ್ಯೆಯ ದಿನದಂದು ಸೇವಿಸುವ ಹಾಲೆ ಮರದ ಕಷಾಯವನ್ನು ವಿತರಿಸಲಾಯಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು. ಸುಮಾರು 700ಕ್ಕೂ ಅಧಿಕ ಮಂದಿ ಅನ್ನ ಪ್ರಸಾದ ಸ್ವೀಕರಿಸಿದರು.

ADVERTISEMENT

ಗೃಹರಕ್ಷಕ ದಳದ ದಿನೇಶ್ ನೇತೃತ್ವದ ಪ್ರವಾಹ ರಕ್ಷಣಾ ತಂಡವು ನದಿಗೆ ಬರುವ ಭಕ್ತರ ಸುರಕ್ಷತೆ ಒದಗಿಸಿತು. ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಧಾಕೃಷ್ಣ ನಾಕ್, ಸದಸ್ಯರಾದ ಜಿ.ಕೃಷ್ಣರಾವ್ ಅರ್ತಲ, ವೆಂಕಪ್ಪ ಪೂಜಾರಿ, ಗೋಪಾಲಕೃಷ್ಣ ರೈ, ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿಗಳಾದ ಕೃಷ್ಣಪ್ರಸಾದ್ ಬಡಿಲ, ದಿವಾಕರ, ಪದ್ಮನಾಭ, ಸುಧಾಕರ ಶೆಟ್ಟಿ ಮುಂಚೂಣಿಯಲ್ಲಿ ನಿಂತು ವಿವಿಧ ಕಾರ್ಯಗಳನ್ನು ನಿರ್ವಹಿಸಿದರು. ದೇವಾಲಯದ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಪ್ರಮುಖರಾದ ರಾಮಚಂದ್ರ ಮಣಿಯಾಣಿ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.