ಅಬ್ದುಲ್ ರಹೀಂ ಅಂತಿಮ ಯಾತ್ರೆ ಬಿ.ಸಿ.ರೋಡ್‌ನಲ್ಲಿ ಸಾಗುವಾಗ ಸೇರಿದ್ದ ಜನಸ್ತೋಮ
ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಮಂಗಳೂರು: ಬಂಟ್ವಾಳ ತಾಲ್ಲೂಕಿನ ಇರಾ ಕೋಡಿ ಎಂಬಲ್ಲಿ ಹತ್ಯೆಗೊಳಾದ ಕೊಳತ್ತಮಜಲುವಿನ ಅಬ್ದುಲ್ ರಹಿಮಾನ್ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು. ಅಂತಿಮ ಯಾತ್ರೆಯು ಸಾಗಿದ ಮಾರ್ಗದ ಉದ್ದಕ್ಕೂ ಅಂಗಡಿಗಳು ಮುಚ್ಚಿದ್ದು, ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.
ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಅಬ್ದುಲ್ ರಹಿಮಾನ್ ಮೃತದೇಹವನ್ನು ಕುತ್ತಾರು ಮದನಿ ನಗರದ ಜುಮಾ ಮಸೀದಿಗೆ ತರಲಾಯಿತು. ಅಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಬಂಟ್ವಾಳ ತಾಲ್ಲೂಕಿನ ಕುರಿಯಾಳ ಗ್ರಾಮದ ಕೊಳತ್ತಮಜಲಿಗೆ ಆಂಬುಲೆನ್ಸ್‌ನಲ್ಲಿ ಒಯ್ಯಲಾಯಿತು.
ಉಳ್ಳಾಲ ತಾಲ್ಲೂಕಿನ ಕುತ್ತಾರಿನಿಂದ ಆರಂಭವಾಗಿ ಕೊಳತ್ತಮಜಲುವರೆಗೆ ಅಂತಿಮಯಾತ್ರೆ ನಡೆಯಿತು. ಈ ಮಾರ್ಗದ ಎಲ್ಲ ಪಟ್ಟಣಗಳಲ್ಲಿ ಅಂಗಡಿಗಳು ಮಧ್ಯಾಹ್ನದವರೆಗೆ ಬಂದ್ ಆಗಿದ್ದವು. ಮಾರ್ಗದ ಉದ್ದಕ್ಕೂ ‘ಶಹೀದ್ ಅಸ್ಸಲಾಂ’ ಘೋಷಣೆ ಮುಗಿಲು ಮುಟ್ಟಿತ್ತು. ಅಂತಿಮಯಾತ್ರೆ ಸಾಗುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ.ರೋಡ್ ಮತ್ತು ಮಂಗಳೂರು ನಡುವೆ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ಬಿ.ಸಿ.ರೋಡ್‌ನ ಮಿತ್ತಬೈಲ್ ಜುಮ್ಮಾ ಮಸೀದಿ ಬಳಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಅಲ್ಲೂ ಬಹುತೇಕ ಅಂಗಡಿ ಮಳಿಗೆಗಳು ಮುಚ್ಚಿದ್ದವು. ತೆರೆದಿದ್ದ ಕೆಲವು ಮಳಿಗೆಗಳನ್ನು ಕೆಲವು ಯುವಕರು ಬಲವಂತದಿಂದ ಮುಚ್ಚಿಸಿದರು.
ಮಂಗಳೂರು ಹಾಗೂ ಬಿ.ಸಿ. ರೋಡ್‌ನಲ್ಲಿ ಕೆಲವು ಸಿಟಿಬಸ್‌ಗಳು ಬುಧವಾರ ಬೆಳಿಗ್ಗೆ ಸಂಚಾರ ಸ್ಥಗಿತಗೊಳಿಸಿದವು. ಇದರಿಂದಾಗಿ ವಿದ್ಯಾರ್ಥಿಗಳು, ಕಚೇರಿಗೆ ತೆರಳುವವರು ಸಮಸ್ಯೆ ಎದುರಿಸಿದರು.
ಬಸ್‌ಗೆ ಕಲ್ಲು: ಮಂಗಳೂರಿನಿಂದ ಕಟೀಲಿಗೆ ಸಂಚರಿಸುವ ನಂದಿನಿ ಬಸ್‌ಗೆ ಸುರತ್ಕಲ್‌ನಲ್ಲಿ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಆ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ಬೇರೆ ಬಸ್‌ನಲ್ಲಿ ತೆರಳಿದರು. ಈ ಘಟನೆ ಬಳಿಕ ಕೆಲವರು ಅಂಗಡಿ ಮುಚ್ಚಿದರು.
ಬಂಟ್ವಾಳ (ದಕ್ಷಿಣಕನ್ನಡ): ಹತ್ಯೆಗೊಳಗಾದ ಅಬ್ದುಲ್ ರಹಿಮಾನ್ ಅವರ ಅಂತ್ಯಕ್ರಿಯೆ ಅವರ ಊರು ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲುವಿನಲ್ಲಿ ಬುಧವಾರ ನೆರವೇರಿತು. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರು ಅವರ ಅಂತಿಮ ದರ್ಶನ ಪಡೆದರು. ಪಾರ್ಥಿವ ಶರೀರವನ್ನು ಅಬ್ದುಲ್ ರಹಿಮಾನ್ ಮನೆಗೆ ಒಯ್ಯಲಾಯಿತು. ಅವರ ತಂದೆ ಅಬ್ದುಲ್ ಖಾದರ್, ತಾಯಿ ಐಸಮ್ಮ, ಪತ್ನಿ ಫಾತಿಮತ್ ನುಸ್ರಾ, ಮಕ್ಕಳು ಹಾಗೂ ಬಂಧುಗಳು ಅಂತಿಮ ದರ್ಶನ ಪಡೆದರು. ಪಾರ್ಥಿವ ಶರೀರವನ್ನು ಮನೆಗೆ ತರುತ್ತಿದ್ದಂತೆಯೇ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಬಳಿಕ ಸ್ಥಳೀಯ ಜುಮ್ಮಾ ಮಸೀದಿಯಲ್ಲಿ ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸಿ ಅಂತಿಮ ವಿಧಿಗಳನ್ನು ನೆರವೇರಿಸಿದರು. ಸ್ಥಳೀಯ ಜುಮ್ಮಾ ಮಸೀದಿಯಲ್ಲಿ ಮಯ್ಯತ್ ನಮಾಜ್ ನೆರವೇರಿಸಲಾಯಿತು. ಅಂತಿಮ ಪ್ರಾರ್ಥನೆ ಸಲ್ಲಿಕೆ ಬಳಿಕ ಸ್ಥಳೀಯ ಸ್ಮಶಾನದಲ್ಲಿ ಅವರನ್ನು ದಫನ ಮಾಡಲಾಯಿತು. ಮಸೀದಿ ಅಧ್ಯಕ್ಷ ಅಬ್ದುಲ್ ಅಜೀಜ್, ಮುಖಂಡ ಸಬೂಕ್ ದಾರಿಮಿ, ಕಾಂಗ್ರೆಸ್ ಮುಖಂಡ ಅಶ್ರಫ್ ಕೆ., ಎಸ್‌ಡಿಪಿಐ ಮುಖಂಡ ಅಥಾವುಲ್ಲ ಜೋಕಟ್ಟೆ ಹಾಗೂ ಜಿಲ್ಲೆಯ ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿದರು.
ಅಬ್ದುಲ್ ರಹಿಮಾನ್ ಹತ್ಯೆಯಿಂದ ನೋವಿಗೊಳಗಾದ ಕುಟುಂಬದವರು ಈ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ‘ಊರಿವರೊಂದಿಗೆ ಅನ್ಯೋನ್ಯವಾಗಿ ಇದ್ದ ಮಗ ಮನೆಗೂ ಆಧಾರಸ್ತಂಭವಾಗಿದ್ದ. ಅವನನ್ನು ಹತ್ಯೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಮೃತ ವ್ಯಕ್ತಿಯ ತಂದೆ ಅಬ್ದುಲ್ ಖಾದರ್ ಒತ್ತಾಯಿಸಿದರು.
‘ನನ್ನ ಸೋದರ ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು (ಮೂರೂವರೆ ವರ್ಷದ ಮಗಳು ಫಾತಿಮತ್ ನಶ್ವಾ ಹಾಗೂ ಒಂದೂವರೆ ವರ್ಷದ ಮಗ ಮೊಹಮ್ಮದ್ ನಶೀಫ್) ಹೊಂದಿದ್ದ. ಹೊಸ ಮನೆ ನಿರ್ಮಾಣಕ್ಕೆ ಮುಂದಾಗಿದ್ದ. ಅಮಾಯಕ ಸಹೋದರನನ್ನು ಹತ್ಯೆ ಮಾಡಿದ ಆರೋಪಿಗಳಿಗೆ ತಕ್ಕ ಶಿಕ್ಷಯಾಗಬೇಕು’ ಎಂದು ಮೃತರ ಸಹೋದರಿ ಶಬಾನಾ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.